More

    ರಾಗಿ ಮಾಲ್ಟ್‌ನಿಂದ ಮಕ್ಕಳ ಆರೋಗ್ಯ ವೃದ್ಧಿ

    ಮುದ್ದೇಬಿಹಾಳ: ಪೌಷ್ಠಿಕಾಂಶಗಳುಳ್ಳ ರಾಗಿ ಮಾಲ್ಟ್‌ನ ಸೇವನೆಯಿಂದ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ರಕ್ತಹೀನತೆ ಮುಂತಾದ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವಲ್ಲಿ ನೆರವಾಗಲಿದೆ. ಇದಕ್ಕಾಗಿ ಸರ್ಕಾರ ಶಾಲೆಗಳಲ್ಲಿ ಹಾಲಿನೊಂದಿಗೆ ರಾಗಿ ಮಾಲ್ಟ್ ವಿತರಣೆಗೆ ಕ್ರಮ ವಹಿಸಿದೆ ಎಂದು ಬಿಇಒ ಬಿ.ಎಸ್. ಸಾವಳಗಿ ಹೇಳಿದರು.

    ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸಾಯಿ ಅನ್ನಪೂರ್ಣ ಟ್ರಸ್ಟ್‌ನವರು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ 2023-24ನೇ ಸಾಲಿನಿಂದ ರಾಜ್ಯದ ಎಲ್ಲ ಶಾಲೆಗಳ 1-10ನೇ ತರಗತಿ ಮಕ್ಕಳಿಗೆ ಉಚಿತವಾಗಿ ಪೂರೈಸುತ್ತಿರುವ ಪೂರಕ ಪೌಷ್ಠಿಕ ಆಹಾರ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆಗೆ ಗುರುವಾರ ಇಲ್ಲಿನ ಸಂತ ಕನಕದಾಸ ಶಾಲೆಯಲ್ಲಿ ಮಕ್ಕಳಿಗೆ ರಾಗಿ ಮಾಲ್ಟ್ ಮಿಶ್ರಿತ ಬಿಸಿ ಹಾಲು ಕೊಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

    ತಾಪಂ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ ಮಾತನಾಡಿ, ಇದು ಸಾಂಕೇತಿಕ ಕಾರ್ಯಕ್ರಮವಾಗಿದೆ. ಮಾರ್ಚ ತಿಂಗಳಿಂದ ಯೋಜನೆ ಕಾರ್ಯಾರಂಭವಾಗಲಿದೆ. ಬಿಸಿಯೂಟ ಜಾರಿಯಿರುವ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ದಾನಿಗಳ ನೆರವಿನಿಂದ ಇದು ವಿತರಣೆಯಾಗಲಿದೆ. ವಾರದಲ್ಲಿ 3ದಿನ ಸೋಮವಾರ, ಬುಧವಾರ, ಶುಕ್ರವಾರ ಹಾಲಿನೊಂದಿಗೆ ಮಾಲ್ಟ್ ಮಿಕ್ಸ್ ಮಾಡಿ ಕೊಡಲಾಗುತ್ತದೆ. ಪ್ರತಿಯೊಬ್ಬರಿಗೆ ಕೊಡುವ 150 ಎಂಎಲ್ ಹಾಲಿನಲ್ಲಿ 5 ಗ್ರಾಂ ಮಾಲ್ಟ್ ಬೆರೆಸಲಾಗುತ್ತದೆ ಎಂದರು.

    ತಾಪಂ ಪ್ರಬಾರ ಯೋಜನಾಧಿಕಾರಿ ಖೂಬಾಸಿಂಗ್ ಜಾಧವ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ಶಾಲೆಯ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ಹೆಚ್ಚು ಸಕ್ಕರೆ ಅಂಶಯುಳ್ಳ ಬೂಸ್ಟ್, ಹಾರ್ಲಿಕ್ಸ್ ನೀಡುವ ಬದಲು ಪೂರಕ ಪೌಷ್ಠಿಕ ಆಹಾರ ಒದಗಿಸಬೇಕು. ಈಗಾಗಲೇ ಶಾಲಾ ಮಕ್ಕಳಿಗೆ ಸರ್ಕಾರ ಕ್ಷೀರಭಾಗ್ಯದ ಮೂಲಕ ಬಿಸಿ ಹಾಲು ಕೊಡುತ್ತಿದೆ. ಈಗ ರಾಗಿ ಮಾಲ್ಟ್ ಕೂಡ ದಾನಿಗಳ ನೆರವಿನಿಂದ ನೀಡುತ್ತಿರುವುದು ಮಕ್ಕಳಲ್ಲಿ ನವ ಚೈತನ್ಯ ಮೂಡಲು ಕಾರಣವಾಗಲಿದೆ ಎಂದರು.

    ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಸಂತೋಷ ನಾಯ್ಕೋಡಿ, ಶಾಲೆಯ ಪದಾಧಿಕಾರಿಗಳಾದ ಬಿ.ಎಸ್. ಮೇಟಿ, ಸಂಗಣ್ಣ ಮೇಲಿನಮನಿ, ನಾಗಪ್ಪ ರೂಢಗಿ ಇತರರಿದ್ದರು.

    ಮುಖ್ಯಶಿಕ್ಷಕ ಎಂ.ಎನ್. ಯರಝರಿ ಸ್ವಾಗತಿಸಿದರು. ಶಿಕ್ಷಕ ಗೋಪಾಲ ಹೂಗಾರ ನಿರ್ವಹಿಸಿದರು. ಬೋಧಕ, ಬೋಧಕೇತರ ಮತ್ತು ಬಿಸಿಯೂಟದ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts