More

    ಸಾಮೂಹಿಕ ವಿವಾಹ ಬಡವರ ಬಾಳಿನ ಬೆಳಕು

    ಮುದ್ದೇಬಿಹಾಳ: ಸಾಮೂಹಿಕ ವಿವಾಹ ಅಂತರ್‌ಜಾತಿಯ ವಿವಾಹಗಳಿಗೆ ಮುಖ್ಯ ವೇದಿಕೆಯಾಗಬೇಕು. ಇವು ಬಡವರಿಗೆ ಭಾಗ್ಯದ ಮದುವೆಗಳಂತಾಗಿ ಅವರ ಬಾಳಿಗೆ ಬೆಳಕಾಗುವಂಥವುಗಳಾಗಿವೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ದೇವರು ಹೇಳಿದರು.

    ಶಿರೋಳ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದ್ಯಾಮಣ್ಣ ಕಟ್ಟಿ ಮುತ್ಯಾ ಜಾತ್ರಾ ಮಹೋತ್ಸವ, ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವ ಹೆಣ್ಣಿನ ಕಡೆಯವರಿಂದ ವರದಕ್ಷಿಣೆ, ವರೋಪಚಾರ ಪಡೆಯದೆ ಗಂಡಿನ ಕಡೆಯವರು ಮದುವೆ ಮಾಡಿಕೊಂಡರೆ ಮಾತ್ರ ಸಾಮೂಹಿಕ ವಿವಾಹದ ನಿಜವಾದ ಉದ್ದೇಶ ಸಾರ್ಥಕವಾದಂತಾಗುತ್ತದೆ. ಅಡವಿ ಹುಲಗಬಾಳ ಮತ್ತು ಶಿರೋಳ ಕ್ಷೇತ್ರದ ಸಾಮೂಹಿಕ ವಿವಾಹಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ. ಆದರೆ ಈ ಎರಡು ಕ್ಷೇತ್ರಕ್ಕೆ ಸರಿಯಾದ ರಸ್ತೆ ಇಲ್ಲ. ಜನಪ್ರತಿನಿಧಿಗಳು ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

    ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಅನೇಕ ಶರಣರು ಸಮಾಜದಲ್ಲಿನ ಅಜ್ಞಾನ, ಜಾತಿ ವ್ಯವಸ್ಥೆ, ಅಂಧಕಾರ ಹೊಡೆದೊಡಿಸಿ ಸಮಾಜದಲ್ಲಿ ಹೇಗೆ ಬದುಕಬೇಕು ಅನ್ನೋದನ್ನು ಕಲಿಸಿಕೊಟ್ಟಿದ್ದಾರೆ. ಮುದ್ದೇಬಿಹಾಳಕ್ಕೂ 12ನೇ ಶತಮಾನಕ್ಕೂ ಸಾಕಷ್ಟು ನಂಟಿದೆ. 12ನೇ ಶತಮಾನದ ಶರಣರು, ಸ್ವತಹ ಬಸವಣ್ಣ ಈ ನೆಲದಲ್ಲಿ ನಡೆದಾಡಿದ್ದು ಅಂತರ್‌ಜಾತಿಯ ವಿವಾಹಕ್ಕೆ ಅಂದೇ ಪ್ರೋತ್ಸಾಹ ನೀಡಿದ್ದರು. ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದ ಮೊದಲ ಕ್ರಾಂತಿಕಾರಿ ಬಸವಣ್ಣ ಎಂದರೆ ತಪ್ಪಾಗಲಿಕ್ಕಿಲ್ಲ. ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಶಾಪವಾಗಿ ಪರಣಮಿಸಿದೆ. ಎಷ್ಟೇ ಬಡತನ ಇದ್ದರೂ ಶಿಕ್ಷಣ ಪಡೆದುಕೊಳ್ಳಬೇಕು. ವಿದ್ಯೆಯಿಂದ ಮಾತ್ರ ಬದಲಾವಣೆ ಸಾಧ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಶಾಸಕ ನಾಡಗೌಡರ ಮನವೊಲಿಸಿ 10ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ಕಟ್ಟಿಸುವ ಮತ್ತು ದ್ಯಾಮಣ್ಣ ಮುತ್ಯಾ ಗೋಪುರ ನಿರ್ಮಿಸುವ ಭರವಸೆ ನೀಡಿ ದ್ಯಾಮಣ್ಣ ಮುತ್ಯಾನ ಕಾರ್ಯಕ್ರಮ ಪ್ರತಿವರ್ಷ ಸರ್ವ ಜಾತಿಯ ವಿವಾಹದ ಮೂಲಕ ವಿಶೇಷತೆ ತಂದು ಕೊಡಲು ಪ್ರಯತ್ನಿಸುತ್ತೇವೆ. ಮುಂದಿನ ವರ್ಷದ ಜಾತ್ರೆ ಇನ್ನೂ ಹೆಚ್ಚು ವಿಜೃಂಭಣೆಯಿಂದ ನಡೆಯುವಂತೆ ನೋಡಿಕೊಳ್ಳುತ್ತೇವೆ ಎಂದರು.

    ನಿಡಗುಂದಿ ರುದ್ರೇಶ್ವರಮಠದ ರುದ್ರಮುನಿ ಶಿವಾಚಾರ್ಯರು, ಮಹೇಶ ಮುತ್ಯಾ, ಶರಣೆ ರಾಜರಾಜೇಶ್ವರಿ, ಸಹದೇವಯ್ಯ ಗುರುವಿನ, ಲಾಲಲಿಂಗೇಶ್ವರ ಶರಣರು ಸಾನ್ನಿಧ್ಯ ವಹಿಸಿದ್ದರು. ಕವಡಿಮಟ್ಟಿ ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್ಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಶ್ರೀದೇವಿ ಬಿರಾದಾರ, ಸದಸ್ಯೆ ನೀಲಮ್ಮ ಚಲವಾದಿ, ಲಕ್ಷ್ಮೀ ಕುರಿ, ದ್ಯಾಮಣ್ಣ ಹುಣಚ್ಯಾಳ, ಪ್ರಭುಗೌಡ ಬಿರಾದಾರ, ನಿಂಗಪ್ಪಗೌಡ ಬಪ್ಪರಗಿ, ಎಸ್.ಸಿ. ಪಾಟೀಲ, ಗುರುಮೂರ್ತಿ ಸಂಗಯ್ಯ ಗುರುಗಳು, ಸಂಗಯ್ಯಸ್ವಾಮಿ ಆಲೂರ, ಮುತ್ತಣ್ಣ ನಾವದಗಿ, ಹುಲಗಪ್ಪ ನಾಯಕಮಕ್ಕಳ, ಬೀರಪ್ಪ ಯರಝರಿ, ಚನ್ನಾರೆಡ್ಡಿ ಟಕ್ಕಳಕಿ, ಶಂಕರಗೌಡ ನಾಗರೆಡ್ಡಿ, ಶಂಕರಗೌಡ ಪಾಟೀಲ, ಜಾತ್ರಾ ಕಮಿಟಿ ಅಧ್ಯಕ್ಷ ಆರ್.ಬಿ. ರಾಜನಾಳ, ಶೇಖರಗೌಡ ಬಿರಾದಾರ ಮತ್ತಿತರರು ಇದ್ದರು.

    ಎರಡು ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರತಿವರ್ಷದಂತೆ ಬಾಗಲಕೋಟೆಯ ಲೆಕ್ಕ ಅಧೀಕ್ಷಕಿ ಗಿರಿಜಾ ಬಂಡಿ ಮದುಮಕ್ಕಳಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ ನೀಡಿದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ರಮೇಶ ಕಂಠಿ ಸ್ವಾಗತಿಸಿದರು. ಗೋಪಾಲ ಹೂಗಾರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts