More

    ಮಾರುತಿ ನಾಯ್ಕ ಆತ್ಮಹತ್ಯೆ ಪ್ರಕರಣ ಸಿಐಡಿಗೆ ಹಸ್ತಾಂತರ

    ಕಾರವಾರ: ಮಾರುತಿ ನಾಯ್ಕ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಸಂಬಂಧ ನಾಲ್ಕು ದಿನಗಳ ಹಿಂದೆಯೇ ಡಿಜಿಪಿ ಕಚೇರಿಯಿಂದ ಆದೇಶವಾಗಿದ್ದು, ಸೋಮವಾರ ಬೆಂಗಳೂರಿನ ಸಿಐಡಿ ಅಧಿಕಾರಿಗಳು ಆಗಮಿಸಿ ಡಿವೈಎಸ್‌ಪಿ ಕಚೇರಿಯಿಂದ ಕಡತ ಹಸ್ತಾಂತರಿಸಿಕೊಂಡಿದ್ದಾರೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ `ವಿಜಯವಾಣಿ’ಗೆ ತಿಳಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿಗಳ ಮೇಲೆಯೇ ಆರೋಪ ಬಂದಿರುವ ಹಿನ್ನೆಲೆಯಲ್ಲಿ ನಿಯಮದಂತೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಸಿಐಡಿ ಅಧಿಕಾರಿಗಳ ತಂಡ ಸೋಮವಾರ ಹಾಗೂ ಮಂಗಳವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌, ಅಧಿಕಾರಿಗಳು, ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಕುಟುಂಬದವರ ಹೇಳಿಕೆ ಪಡೆದಿದೆ.
    ಹಿನ್ನೆಲೆ:
    ಶಿರವಾಡದ ಮಾರುತಿ ನಾಯ್ಕ ತಮ್ಮ ಮನೆಯಲ್ಲೇ ಅ.20 ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಪೂರ್ವ ಮಾಡಿದ್ದ ವಿಡಿಯೋ ಹಾಗೂ ಡೆತ್ ನೋಟ್ ಜತೆಗೆ ಕುಟುಂಬದ ಸದಸ್ಯರು ಎಸ್‌ಪಿಗೆ ದೂರು ನೀಡಿದ್ದರು. ಡೆತ್ ನೋಟ್‌ನಲ್ಲಿ ಪ್ರಸ್ತಾಪಿಸಿರುವ ಎಲ್ಲರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದಿದ್ದರು. ಮಾತ್ರವಲ್ಲ ಶವವನ್ನು ಕ್ರಿಮ್ಸ್‌ ಶವಾಗಾರದಿಂದ ಹಸ್ತಾಂತರಿಸಿಕೊಳ್ಳದೇ ಪ್ರತಿಭಟನೆ ನಡೆಸಿದ್ದರು.
    ಎಸ್‌ಪಿ ಎನ್.ವಿಷ್ಣುವರ್ಧನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣವನ್ನು ಭಟ್ಕಳ ಡಿವೈಎಸ್‌ಪಿ ಶ್ರೀಕಾಂತ್ ಅವರಿಗೆ ವಹಿಸಿದ್ದಾಗಿ ತಿಳಿಸಿದ್ದರು. ಡೆತ್ ನೋಟ್‌ನಲ್ಲಿ ಮಾರುತಿ ನಾಯ್ಕ ಪ್ರಸ್ತಾಪಿಸಿದ್ದ ಎಲಿಷಾ ಎಲಕಪಾಟಿ, ಬಸವರಾಜ್ ಹಾಗೂ ಸುರೇಶ ನಾಯ್ಕ ಎಂಬುವವರನ್ನು ಅ.25 ರಂದು ಬಂಧಿಸಲಾಗಿತ್ತು. ಅ. 26 ರಂದು ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಕುಸುಮಾಧರ ಕೆ., ಅವರನ್ನು ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಅವರು ಅಮಾನತು ಮಾಡಿದ್ದರು. ಪಿಎಸ್‌ಐ ಶಾಂತಿನಾಥ ಪಾಸಾನೆ, ಹಾಗೂ ಕಾನ್ಸ್ಟೇಬಲ್ ದೇವರಾಜ್ ಅವರನ್ನು ಎಸ್‌ಪಿ ಎನ್.ವಿಷ್ಣುವರ್ಧನ ಅಮಾನತು ಮಾಡಿದ್ದರು.
    ಪ್ರಮುಖ ಸಾಕ್ಷಿ:
    ದಲಿತ ಸಂಘಟನೆಯ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಹಿಂದು ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ಮಾರುತಿ ನಾಯ್ಕ ವಿಡಿಯೋ ಮಾಡಿಕೊಂಡು, ಆತನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪರಿಣಾಮ ಎಲಿಷಾ ಎಲಕಪಾಟಿ ಬಂಧನವಾಗಿತ್ತು. ನಂತರ ಮಾರುತಿ ನಾಯ್ಕ ಮೇಲೆ ಚಾಕುವಿನಿಂದ ಹಲ್ಲೆ ನಡೆದಿತ್ತು. ಪ್ರಕರಣ ನಡೆದು ಒಂದುವರೆ ತಿಂಗಳು ಕಳೆಯುವುದರೊಳಗೆ ಪ್ರಕರಣದ ಪ್ರಮುಖ ಸಾಕ್ಷಿ ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದ. ಎಲಿಷಾ ಕುಟುಂಬದವರು ಹಾಗೂ ಪೊಲೀಸ್ ಅಧಿಕಾರಿಗಳು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾರುತಿ ನಾಯ್ಕ ಆತ್ಮತ್ಯೆಗೂ ಪೂರ್ವ ಮಾಡಿದ ವಿಡಿಯೋದಲ್ಲಿ ದೂರಿದ್ದ.

    ಇದನ್ನೂ ಓದಿ: ಮಾರುತಿ ನಾಯ್ಕ ಆತ್ಮಹತ್ಯೆ ಪ್ರಕರಣ-ಭಟ್ಕಳ ಡಿವೈಎಸ್‌ಪಿಯಿಂದ ತನಿಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts