More

    ಮಾರುತಿ ನಾಯ್ಕ ಆತ್ಮಹತ್ಯೆ ಪ್ರಕರಣ-ಭಟ್ಕಳ ಡಿವೈಎಸ್‌ಪಿಯಿಂದ ತನಿಖೆ

    ಕಾರವಾರ: ಶಾಸಕ ಸತೀಶ ಸೈಲ್, ಎಸ್‌ಪಿ ವಿಷ್ಣುವರ್ಧನ ಅವರು ನ್ಯಾಯಸಮ್ಮತ ತನಿಖೆಯ ಭರವಸೆ ನೀಡಿದ ನಂತರ ಮಾರುತಿ ನಾಯ್ಕ ಮೃತ ದೇಹವನ್ನು ಕುಟುಂಬದವರು ಭಾನುವಾರ ಪೊಲೀಸರಿಂದ ಹಸ್ತಾಂತರಿಸಿಕೊಂಡು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದಿದ್ದಾರೆ. ಸತತ ಮೂರು ದಿನಗಳಿಂದ ಕುಟುಂಬದವರು ಶವಾಗಾರ ಮುಂದೆ ನಡೆಸಿದ್ದ ಪ್ರತಿಭಟನೆಗೆ ತಾತ್ಕಾಲಿಕ ತೆರೆ ಬಿದ್ದಿದೆ.

    ಶಿರವಾಡ ಬಂಗಾರಪ್ಪ ನಗರದ ಮಾರುತಿ ನಾಯ್ಕ(35) ಶುಕ್ರವಾರ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಆದರೆ, ಅವರ ಸಾವಿನಲ್ಲಿ ಅನುಮಾನವಿದೆ, ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದ ಕುಟುಂಬದವರು ಶವ ಮರಣೋತ್ತರ ಪರೀಕ್ಷೆಗೆ ಹಾಗೂ ಶವ ಹಸ್ತಾಂತರಿಸಿಕೊಳ್ಳಲು ನಿರಾಕರಿಸಿದ್ದರು. ಮೃತ ಮಾರುತಿ ನಾಯ್ಕ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್‌ನ್ನು ಅವರ ಪತ್ನಿ ರಾಧಾ ಶನಿವಾರ ಬಿಡುಗಡೆ ಮಾಡಿದ್ದರು. ತನಗೆ ಕಿರುಕುಳ ನೀಡಿದ್ದಾರೆ ಎಂದು ಮಾರುತಿ ನಾಯ್ಕ ನಮೂದಾಗಿರುವ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್, ಪಿಎಸ್‌ಐ, ಸಿಬ್ಬಂದಿ ಹಾಗೂ ಎಲಿಷಾ ಎಲಕಪಾಟಿ ಕುಟುಂಬದ ಇಬ್ಬರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

    ಮೂರನೇ ದಿನವೂ ಪ್ರತಿಭಟನೆ:

    ಶುಕ್ರವಾರ ಮಾರುತಿ ನಾಯ್ಕ ಆತ್ಮಹತ್ಯೆ ಎಂದು ಎಫ್‌ಐಆರ್‌ ದಾಖಲಿಸಲಾಗಿತ್ತು. ಶನಿವಾರ ಗ್ರಾಮೀಣ ಠಾಣೆಯಲ್ಲಿ ಕುಟುಂಬದವರ ಹೇಳಿಕೆ ಪಡೆದು, ಇನ್ನಷ್ಟು ವಿವರ ಸೇರಿಸಿದ್ದರೂ ಅದರಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಹೆಸರಿರಲಿಲ್ಲ. ಅಲ್ಲದೆ, ಶನಿವಾರ ರಾತ್ರಿ ಮಾರುತಿ ನಾಯ್ಕ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನೂ ವೈದ್ಯರು ಕುಟುಂಬದವರ ಗಮನಕ್ಕಾ ತಾರದೇ ನಡೆಸಿದ್ದಾರೆ ಎನ್ನುವ ಸುದ್ದಿ ಮೃತರ ಸಂಬಂಧಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರ ವರ್ತನೆಯ ಬಗ್ಗೆ ತೀವ್ರ ಆಕ್ಷೇಪ ಕೇಳಿ ಬಂದಿತ್ತು.

    ಕ್ರಿಮ್ಸ್ ಶವಾಗಾರದ ಎದುರು ಭಾನುವಾರವೂ ಸಾಕಷ್ಟು ಜನ ಬೀಡು ಬಿಟ್ಟಿದ್ದರು. ಪ್ರತಿಭಟನೆಯ ನಂತರ ಭಾನುವಾರ ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಶಾಸಕ ಸತೀಶ ಸೈಲ್, ಪ್ರತಿಭಟನಾಕಾರರ ಅಹವಾಲು ಆಲಿಸಿದರು. ನಂತರ ಎಸ್‌ಪಿ ಎನ್.ವಿಷ್ಣುವರ್ಧನ ಅವರನ್ನು ಸ್ಥಳಕ್ಕೆ ಕರೆಸಿದರು. ಎಸ್‌ಪಿ ಎನ್‌ ವಿಷ್ಣುವರ್ಧನ ಮಾತನಾಡಿ, ಪ್ರಕರಣವನ್ನು ಭಟ್ಕಳ ಡಿವೈಎಸ್‌ಪಿ ನೇತೃತ್ವದ ತಂಡ ತನಿಖೆ ನಡೆಸಲಿದೆ. ಡೆತ್‌ ನೋಟ್‌ನಲ್ಲಿ ನಮೂದಾಗಿರುವ ಎಲ್ಲರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗುವುದು. ಮಾರುತಿ ನಾಯ್ಕ ಡೆತ್‌ ನೋಟ್‌ನಲ್ಲಿ ದಾಖಲಿಸಿರುವ ಪೊಲೀಸ್‌ ಸಿಬ್ಬಂದಿಯನ್ನು ತಕ್ಷಣ ವಗಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.

    ಶಾಸಕ ಸತೀಶ ಸೈಲ್‌ ಮಾತನಾಡಿ, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಮೃತರ ಮನೆಗೆ ಪೊಲೀಸ್‌ ಭದ್ರತೆ ಒದಗಿಸಬೇಕು. ಪ್ರಕರಣವನ್ನು ನಿಶ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, ಕನ್ನಡ ಸಂಘಟನೆಯ ಮುಖಂಡರಾದ ಎನ್.ದತ್ತಾ, ರಾಜೇಶ ನಾಯ್ಕ, ನಗರಸಭೆ ಸದಸ್ಯರಾದ ಪ್ರೇಮಾನಂದ ಗುನಗಾ, ರೋಶನಿ ಮಾಳ್ಸೇಕರ್, ಶಿರವಾಡ ಗ್ರಾಪಂ ಅಧ್ಯಕ್ಷ ದಿಲೀಪ ನಾಯ್ಕ, ಮಾರುತಿ ನಾಯ್ಕ, ಗಂಗಾ ನಾಯ್ಕ, ಚೇತನ ಹರಿಕಂತ್ರ ಇತರರು ಇದ್ದರು.

    ಹಿನ್ನೆಲೆ:

    ದಲಿತ ಸಂಘಟನೆಯ ಮುಖಂಡ ಎಲಿಷಾ ಎಲಕಪಾಟಿ ಹಿಂದು ದೇವತೆಗಳನ್ನು ಅವಾಚ್ಯವಾಗಿ ನಿಂದಿಸುತ್ತಿರುವುದನ್ನು ಸ್ವತಃ ಎಲಕಪಾಟಿ ಅನುಯಾಯಿ ಮಾರುತಿ ನಾಯ್ಕ ವಿಡಿಯೋ ಮಾಡಿದ್ದರು. ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕ್ರಣದಲ್ಲಿ ಎಲಕಪಾಟಿ ಬಂಧನವೂ ಆಗಿತ್ತು. ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿ, ಎಲಕಪಾಟಿ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬಂದಿತ್ತು. ಆದರೆ, ಈ ನಡುವೆ ದೂರುದಾರ ಮಾರುತಿ ನಾಯ್ಕ ಮೇಲೆ ಹಲ್ಲೆ ನಡೆದಿತ್ತು. ಎಲ್ಲ ಘಟನೆ ನಡೆದು ಒಂದುವರೆ ತಿಂಗಳು ಕಳೆಯುವ ಹೊತ್ತಿಗೆ ಮಾರುತಿ ನಾಯ್ಕ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

    ಇದನ್ನೂ ಓದಿ:ಪೊಲೀಸರಿಂದ ಕಿರುಕುಳ ಆರೋಪ- ಆತ್ಮಹತ್ಯೆ ಮಾಡಿಕೊಂಡಾತ ಬರೆದ ಡೆತ್‌ ನೋಟ್‌ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts