More

    ಪೊಲೀಸರಿಂದ ಕಿರುಕುಳ ಆರೋಪ- ಆತ್ಮಹತ್ಯೆ ಮಾಡಿಕೊಂಡಾತ ಬರೆದ ಡೆತ್‌ ನೋಟ್‌ ಪತ್ತೆ

    ಕಾರವಾರ: ಶಿರವಾಡದ ದಲಿತ ಸಂಘಟನೆ ಸದಸ್ಯ ಮಾರುತಿ ನಾಯ್ಕ(35) ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕುಟುಂಬದವರು ಪೊಲೀಸ್‌ ಅಧಿಕಾರಿಗಳ ವಿರುದ್ಧವೇ ಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ.

    ಮಾರುತಿ ನಾಯ್ಕ ಅವರಿಗೆ ಪೊಲೀಸರು ಹಾಗೂ ಎಲಿಷಾ ಎಲಕಪಾಟಿ ಕುಟುಂಬದವರು ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ರಾಧಾ ಎಸ್‌ಪಿ, ಡಿಸಿ ಕಚೇರಿ ಹಾಗೂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮೃತರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ ನೋಟ್‌ನನ್ನು ಮಾಧ್ಯಮಗಳ ಎದುರು ಬಹಿರಂಗಪಡಿಸಿದ್ದಾರೆ.

    ಶನಿವಾರ ಕ್ರಿಮ್ಸ್‌ ಶವಾಗಾರದ ಎದುರು ಮೃತರ ಸಂಬಂಧಿಕರು ಜಮಾಯಿಸಿದ್ದರು. ಮಂಗಳೂರಿನಿಂದ ಆಗಮಿಸಿದ ನ್ಯಾಯ ವಿಜ್ಞಾನ ತಜ್ಞರಿಗೆ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡಿಲ್ಲ. ಮಾರುತಿ ನಾಯ್ಕ ಸಾವಿಗೆ ಕಾರಣರಾದವರ ಮೇಲೆ ಪ್ರಕರಣ ದಾಖಲಿಸುವವರೆಗೂ ನಾವು ಶವವನ್ನು ಪಡೆಯುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

    ಶಾಸಕ ಸತೀಶ ಸೈಲ್‌ ಬೆಂಗಳೂರಿನಲ್ಲಿದ್ದು, ಅವರು ಅ.22 ರಂದು ಬೆಳಗ್ಗೆ ಕಾರವಾರಕ್ಕೆ ಆಗಮಿಸಿ ಚರ್ಚೆ ನಡೆಸಲಿದ್ದಾರೆ. ಅಲ್ಲಿಯವರೆಗೂ ಕಾಯಲಾಗುವುದು ಎಂದು ಮಾರುತಿ ನಾಯ್ಕ ಕುಟುಂಬದ ಪರವಾಗಿ ನಿಂತಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಮೀರ ನಾಯ್ಕ ತಿಳಿಸಿದ್ದಾರೆ.

    ಡೆತ್‌ ನೋಟ್‌ನಲ್ಲಿ ಏನಿದೆ..?
    ಬಂಗಾರಪ್ಪ ನಗರದ ನಿವಾಸಿ ಮಾರುತಿ ನಾಯ್ಕಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದರು. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದಿದ್ದರು. ಆದರೆ, ಮಾರುತಿ ನಾಯ್ಕ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟನ್ನು ಕುಟುಂಬದವರು ಶನಿವಾರ ಮಾಧ್ಯಮಗಳ ಎದುರು ಬಹಿರಂಗಪಡಿಸಿದ್ದಾರೆ. ಮಾರುತಿ ನಾಯ್ಕ ಪತ್ನಿ ಕೂಲಿ ಕೆಲಸಕ್ಕೆ ಹೋಗಿರುವ ಸಮಯದಲ್ಲಿ ಡೆತ್‌ ನೋಟ್‌ ಬರೆದು ತನ್ನ ಮಗನ ಚಡ್ಡಿ ಕಿಸೆಯಲ್ಲಿ ಇಟ್ಟಿದ್ದ ಎನ್ನಲಾಗಿದೆ. ನಂತರ ಮನೆಯಲ್ಲೇ ನೇಣಿಗೆ ಶರಣಾಗಿದ್ದ.

    ಡೆತ್ ನೋಟ್‌ನಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಎಲಿಷಾ ಕುಟುಂಬದ ಹೆಸರಿದೆ. “ಅವರು ನನಗೆ ಸಾಕಷ್ಟು ಕಿರುಕುಳ ನೀಡಿದರು. ನನ್ನನ್ನು ಸಾಯಿಸುವ ಬೆದರಿಕೆ ಹಾಕಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿನಿಂದ ಎಲ್ಲ ಸರಿಯಾಗಲಿದೆ. ನನ್ನನ್ನು ಕ್ಷಮಿಸು’ ಎಂದು ಮಾರುತಿ ನಾಯ್ಕ ಪತ್ನಿ ಬಳಿ ಕೇಳಿಕೊಂಡಿದ್ದಾರೆ. ಅಲ್ಲದೆ, “ಪೊಲೀಸರ ಮೇಲೆ ನಂಬಿಕೆ ಇಲ್ಲ. ಅವರಿಗೆ ಡೆತ್ ನೋಟ್ ಕೊಡಬೇಡ ಶಂಕರ ಅಣ್ಣನಿಗೆ ಕೊಡು ಎಂಬ ಸೂಚನೆಯೂ ಅದರಲ್ಲೇ ಇದೆ.
    ಪ್ರಮುಖ ಸಾಕ್ಷಿ:
    ದಲಿತ ಸಂಘಟನೆಯ ಮುಖಂಡ ಎಲಿಷಾ ಎಲಕಪಾಟಿ ಹಿಂದು ದೇವತೆಗಳ ಬಗ್ಗೆ ಅವಾಚ್ಯವಾಗಿ ಮಾತನಾಡುವಾಗ ಮಾರುತಿ ನಾಯ್ಕ ವಿಡಿಯೋ ಮಾಡಿದ್ದರು. ಮಾತ್ರವಲ್ಲ ಎಲಿಷಾ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದು, ಎಲಿಷಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಎಲಿಷಾ ಎಲಕಪಾಟಿಯನ್ನು ಬಂಧಿಸಲಾಗಿತ್ತು. ಘಟನೆಯ ನಂತರ ಮಾರುತಿ ನಾಯ್ಕ ಅವರ ಮೇಲೆ ಶಿರವಾಡದಲ್ಲೇ ಹಲ್ಲೆ ನಡೆದಿತ್ತು. ಆದರೆ, ಪ್ರಕರಣ ನಡೆದು ಒಂದುವರೆ ತಿಂಗಳಾಗುವುದರ ಒಳಗೇ ಪ್ರಕರಣದ ದೂರುದಾರ ಹಾಗೂ ಪ್ರಮುಖ ಸಾಕ್ಷಿದಾರ ಮಾರುತಿ ನಾಯ್ಕ ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು.

    ಮಾರುತಿ ನಾಯ್ಕ ಚಾಲಕನಾಗಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ. ಆತನಿಗೆ ಇಬ್ಬರು ಮಕ್ಕಳಿದ್ದರು. ಅಲ್ಲದೆ, ದಲಿತ ಸಂಘಟನೆಗಳಲ್ಲಿ ಕ್ರಿಯಾಶೀಲನಾಗಿದ್ದ. ಆದರೆ, ದಲಿತ ಮುಖಂಡ ಎಲಿಷಾ ಹಿಂದು ಧರ್ಮ ನಿಂದನೆ ಮಾಡುತ್ತಿರುವುದನ್ನು ಸಹಿಸದೇ ಅದನ್ನು ವಿಡಿಯೋ ಮಾಡಿದ್ದ ಎನ್ನಲಾಗಿದೆ.

    ಇದನ್ನೂ ಓದಿ:ಪಿಎಸ್ಐ ಕಿರುಕುಳ-ವ್ಯಕ್ತಿ‌ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts