More

    ಮಾರ್ಕಂಡೇಯ ನೀರು ಮಾಲೂರಿಗೆ?

    ಶಾಸಕ ಕೆ.ವೈ.ನಂಜೇಗೌಡ ಚಿಂತನೆ | ಯರಗೋಳ್​ ಯೋಜನೆ ವ್ಯರ್ಥವಾಗುವ ಸಾಧ್ಯತೆ

    ಮಾರ್ಕಂಡೇಯ ನೀರು ಮಾಲೂರಿಗೆ?

    ಬೂದಿಕೋಟೆ: ನಾಳೆ ಉದ್ಘಾಟನೆಗೊಳ್ಳಲಿರುವ ಯರಗೋಳ್​ ಡ್ಯಾಂಗೆ ವರದಾನವಾಗಿರುವ ಮಾರ್ಕಂಡೇಯ ಜಲಾಶಯ ನೀರನ್ನು ಮಾಲೂರು ತಾಲೂಕಿನ 160 ಗ್ರಾಮಗಳಿಗೆ ಒದಗಿಸಲು ಶಾಸಕ ಕೆ.ವೈ.ನಂಜೇಗೌಡ ಮುಂದಾಗಿದ್ದು, ಒಂದು ವೇಳೆ ಅದು ಈಡೇರಿದ್ದೇ ಆದರೆ ಯರಗೋಳ್​ ಡ್ಯಾಂಗೆ ನೀರು ಹರಿಯದೆ ಯೋಜನೆ ವ್ಯರ್ಥವಾಗುವ ಸಾಧ್ಯತೆ ಇದೆ. 2008ರಲ್ಲಿ ಶಾಸಕ ಹಾಗೂ ಕೊಳಚೆ ಮತ್ತು ನೀರು ಸರಬರಾಜು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದ ಕೃಷ್ಣಯ್ಯಶೆಟ್ಟಿ ಅವರು ಮಾರ್ಕಂಡೇಯ ಜಲಾಶಯದಿಂದ ಮಾಲೂರು ಕ್ಷೇತ್ರದ 184 ಹಳ್ಳಿಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ 40 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಂದ ಅನುದಾನ ತಂದು ಜಲಾಶಯದ ಅಂಗಳದಲ್ಲಿ ಬೃಹತ್​ ಪಂಪ್​ಹೌಸ್​ ನಿರ್ಮಿಸಿ, ಪೈಪ್​ಲೈನ್​ ಅಳವಡಿಸಿದರು. ಡ್ಯಾಂನಿಂದ ಟೇಕಲ್​ ಬಳಿಯ ಶುದ್ಧೀಕರಣ ಘಟಕಕ್ಕೆ ನೀರು ಹರಿಸಿ ಬಳಿಕ ಸುಮ್ಮನಾಗಿದ್ದರು.

    ಮೈಸೂರು ಸಂಸ್ಥಾನ ಕಟ್ಟಿದ ಡ್ಯಾಂ: ಜಿಲ್ಲೆಯ ಮಿನಿ ಕೆಆರ್​ಎಸ್​ ಎಂದೇ ಪ್ರಖ್ಯಾತಿ ಪಡೆದಿರುವ ಬೂದಿಕೋಟೆಯ ಮಾರ್ಕಂಡೇಯ ಜಲಾಶಯವನ್ನು ಎರಡು ಬೆಟ್ಟಗಳ ಮಧ್ಯೆ ಸರ್​.ಎಂ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಜಲಾಶಯ ಪ್ರದೇಶದ ರೈತರಿಂದ ದೇಣಿಗೆ ಪಡೆದು ಕೃಷಿ ಬಳಕೆಗೆ ನಿರ್ಮಿಸಲಾಗಿದೆ. 1936ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್​ 4 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮುಗಿಸಿ, ಸಂಸ್ಥಾನದ ಅಂದಿನ ದಿವಾನರಾಗಿದ್ದ ಸರ್​ ಮಿರ್ಜಾ ಇಸ್ಮಾಯಿಲ್​ ಅವರಿಂದ 1940ರಲ್ಲಿ ಲೋಕಾರ್ಪಣೆ ಮಾಡಿಸಿದ್ದರು. ಜಲಾಶಯ ಲೋಕಾರ್ಪಣೆಯಾದ ದಿನದಿಂದ ಸುಮಾರು 2,000 ಹೆಕ್ಷೇರ್​ನಷ್ಟು ಅಚ್ಚುಕಟ್ಟು ವಿಸ್ತೀರ್ಣದ ಪ್ರದೇಶದಲ್ಲಿ ರೈತರು ನೀರು ಬಳಸಿ, ಭತ್ತ ಬೆಳೆಯುತ್ತಿದ್ದರು. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದರಿಂದ ಬೂದಿಕೋಟೆಯನ್ನು ಭತ್ತದ ಕಣಜ ಅಂತಲೂ ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಭತ್ತ ಬೆಳೆಯಲು ಮಾರ್ಕಂಡೇಯ ಜಲಾಶಯದ ನೀರು ನೀಡಲಿಲ್ಲ.

    0.5 ಟಿಎಂಸಿ ಸಾಮರ್ಥ್ಯ: ಮಾರ್ಕಂಡೇಯ ಜಲಾಶಯವು 81 ಅಡಿ ಎತ್ತರ ಹೊಂದಿದ್ದು, 0.5 ಟಿಎಂಸಿ ನೀರು ಶೇಖರಣೆಯಾಗಿ, 75 ಅಡಿಗಳಿಗೆ ಕೊಡಿ ಹರಿಯುತ್ತದೆ. ಇದೇ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿಯುತ್ತಿತ್ತು. ಅದನ್ನು ತಪ್ಪಿಸಲು ಯರಗೋಳ್​ ಗ್ರಾಮದ ಬಳಿ ಡ್ಯಾಂ ನಿರ್ಮಿಸಲಾಗಿದ್ದು, ಕಳೆದ ವರ್ಷ ಸುರಿದ ಮಳೆಗೆ ಮಾರ್ಕಂಡೇಯ ಜಲಾಶಯ ತುಂಬಿ ಕೋಡಿ ಹರಿದ ಕಾರಣ ಯರಗೋಳ್​ ಡ್ಯಾಂ ಸಹ ತುಂಬಿದೆ.

    ಯರಗೋಳ್​ ಡ್ಯಾಂ ನೀರು ಕೇವಲ ಮಾಲೂರು ಪಟ್ಟಣಕ್ಕೆ ಮಾತ್ರ ಬರಲಿದೆ. ಮಾರ್ಕಂಡೇಯ ಜಲಾಶಯದ ನೀರನ್ನು ತಾಲೂಕಿನ 160 ಗ್ರಾಮಗಳಿಗೆ ಹರಿಸಲು ಯೋಜನೆ ರೂಪಿಸಲಾಗಿತ್ತು. ಸರ್ಕಾರದ 45 ಕೋಟಿ ರೂ. ಅನುದಾನ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಪೈಪ್​ಲೈನ್​ ಅಳವಡಿಸಿ ಬಂಗಾರಪೇಟೆ ಮತ್ತು ಮಾಲೂರು ತಾಲೂಕಿನ ಹಲವು ಗ್ರಾಮಗಳಿಗೆ ಬಳಸಬಹುದಾಗಿದೆ. ಮಾರ್ಕಂಡೇಯ ಜಲಾಶಯದಿಂದ ಯರಗೋಳ್​ ಡ್ಯಾಂಗೆ ಯಾವುದೇ ತೊಂದರೆ ಇಲ್ಲ. ಮಳೆ ಬಂದರೆ ಮಾರ್ಕಂಡೇಯ ಜಲಾಶಯ ತುಂಬಿ ಕೋಡಿ ಹರಿದು ಯರಗೋಳ್​ ಡ್ಯಾಂ ಸೇರುತ್ತದೆ. ಕೆ.ವೈ.ನಂಜೇಗೌಡ ಶಾಸಕ ಮಾಲೂರು

    ಮಾರ್ಕಂಡೇಯ ಜಲಾಶಯದಿಂದ ಯರಗೋಳ್​ ಡ್ಯಾಂಗೆ ಅಷ್ಟಾಗಿ ತೊಂದರೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮಾಲೂರು ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು. ಎಸ್​.ಎನ್​. ನಾರಾಯಣಸ್ವಾಮಿ, ಶಾಸಕರು ಬಂಗಾರಪೇಟೆ

    ನಾಳೆ ಉದ್ಘಾಟನೆಗೆ ಸಿಎಂ

    ನ.11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯರಗೋಳ್​ ಡ್ಯಾಂ ಲೋಕಾರ್ಪಣೆ ಮಾಡಲಿದ್ದು, ಬುಧವಾರ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಮಾರ್ಕಂಡೇಯ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯ ನೀರನ್ನು ಮಾಲೂರು ತಾಲೂಕಿನ 160 ಗ್ರಾಮಗಳಿಗೆ ಹರಿಸಲು ಸರ್ಕಾರದೊಂದಿಗೆ ಚರ್ಚಿಸಿ ಸರ್ಕಾರದ ಅನುದಾನಲ್ಲಿ ಪೈಪ್​ಲೈನ್​ ಕಾರ್ಯವನ್ನು ಮುಗಿಸಿ ನೀರನ್ನು ಗ್ರಾಮಗಳಿಗೆ ಪೂರೈಸುತ್ತೇನೆ ಎಂದು ಹೇಳಿದ್ದು, ಮುಂದಿನ ದಿನಗಳಲ್ಲಿ ಮಾರ್ಕಾಂಡೇಯ ಜಲಾಶಯದ ನೀರು ಮಾಲೂರು ತಾಲೂಕಿಗೆ ಹರಿದಿದ್ದೇ ಆದರೆ ಯರಗೋಳ್​ ಡ್ಯಾಂಗೆ ನೀರು ಹರಿಯುವುದು ಗ್ಯಾರಂಟಿ ಇಲ್ಲ ಮತ್ತು ಯರಗೋಳ್​ ಡ್ಯಾಂ ಯೋಜನೆಯಾದ ಮಾಲೂರು, ಬಂಗಾರಪೇಟೆ ಮತ್ತು ಕೋಲಾರ ಪಟ್ಟಣ ಸೇರಿ ಮಾರ್ಗ ಮಧ್ಯದ 45 ಗ್ರಾಮಗಳಿಗೆ ನೀರು ಒದಗಿಸುವ ಯೋಜನೆ ವ್ಯರ್ಥವಾಗುತ್ತದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts