More

    ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಕ್ರಮ

    ಎಸ್​ಪಿ ಎಂ.ನಾರಾಯಣ್​ ಎಚ್ಚರಿಕೆ : ರೌಡಿಶೀಟರ್​ಗಳ ಪರೇಡ್​

    ಕೋಲಾರ: ಮುಂಬರುವ ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿ ದಂತೆ ನಗರ, ಗ್ರಾಮೀಣ ಭಾಗದ ರೌಡಿಗಳಿಂದ ಶಾಂತಿ, ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಭಂಗ ಉಂಟಾಗದಂತೆ ಮುಂಜಾಗ್ರತೆ ವಹಿಸಿ ಶುಕ್ರವಾರ ಕರೆಯಲಾಗಿದ್ದ ಪರೇಡ್​ಗೆ
    ಜಿಲ್ಲೆಯ ಒಟ್ಟು 663 ರೌಡಿಗಳ ಪೈಕಿ 319 ಮಂದಿ ಹಾಜರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.
    ನಗರದ ಪೊಲೀಸ್​ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ರೌಡಿಗಳ ಪರೇಡ್​ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಳಿದ 319 ಮಂದಿ ವಿವಿಧ ಕೆಲಸ ಕಾರ್ಯಗಳ ಮೇಲೆ ಗೈರಾಗಿದ್ದಾರೆ. ಮುಂದಿನ ಪರೇಡ್​ನಲ್ಲಿ ಅವರನೆಲ್ಲ ಹಾಜರುಪಡಿಸಿ ಚುನಾವಣೆಗೆ ಯಾವುದೇ ರೀತಿ ಭಂಗ ಉಂಟಾಗದಂತೆ ಎಚ್ಚರಿಕೆ ನೀಡಿ ಸುಸೂತ್ರವಾಗಿ ನಡೆಸಲು ಅನುವು ಮಾಡಿಕೊಡುವ ಉದ್ದೇಶದಿಂದ ರೌಡಿಗಳನ್ನು ವಿಚಾರಣೆ ನಡೆಸಲಾಗಿದೆ ಎಂದರು.
    ಸಾರ್ವಜನಿಕರ ಶಾಂತಿ, ನೆಮ್ಮದಿಯ ವಾತಾವರಣಕ್ಕೆ ಭಂಗ ಉಂಟಾಗುವಂತೆ ದೌರ್ಜನ್ಯ, ಬೆದರಿಕೆ, ಹಣ ವಸೂಲಿ, ಬಡ್ಡಿ ವಸೂಲಿ, ಆಸ್ತಿಗಳನ್ನು ದೌರ್ಜನ್ಯದಿಂದ ಕಬಳಿಸುವುದು ಹಾಗೂ ಅಕ್ರಮ ಜೂಜಾಟ, ಮಟ್ಕಾ, ಗಾಂಜಾ ಮಾರಾಟ, ಮಾದಕ ವಸ್ತು, ದ್ರವ್ಯಗಳು, ಅನೈತಿಕ ಚಟುವಟಿಕೆಗಳು, ಮಹಿಳೆಯರ ಮೇಲೆ ದೌರ್ಜನ್ಯ, ಸಾಮಾಜಿಕ ಜಾಲತಾಣಗಳನ್ನು ದುರ್ಬಳಸಿಕೊಂಡು ಬ್ಲಾಕ್​ಮೇಲ್​ ಮಾಡುವುದು, (ಈಗಾಗಲೇ 4 ಮಂದಿಯನ್ನು ಬಂಧಿಸಲಾಗಿದೆ) ಇತ್ಯಾದಿ ಸಮಾಜಘಾತುಕ ಚಟುವಟಿಕೆಗಳನ್ನು ನಡೆಸುತ್ತಾ ಸಾರ್ವಜನಿಕರಿಗೆ ಕಿರುಕುಳ, ತೊಂದರೆ ನೀಡುತ್ತಿದ್ದವರು ರೌಡಿಶೀಟ್​ನಲ್ಲಿದ್ದಾರೆ ಎಂದರು.
    ಗ್ರಾಮೀಣ ಭಾಗದಲ್ಲಿ ರೌಡಿಸಂ: ರೌಡಿಸಂ ಎಂಬುವುದು ಕೇವಲ ನಗರಕ್ಕೆ ಮಾತ್ರ ಮೀಸಲಾಗಿಲ್ಲ. ಗ್ರಾಮೀಣ ಭಾಗದಲ್ಲೂ ಇತ್ತೀಚೆಗೆ ತಲೆ ಎತ್ತಿದೆ. ದೂರುಗಳು ಬಂದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಮನಹರಿಸಲಾಗುವುದು. ಬೇರೆಯವರ ಬದುಕಿನ ಶಾಂತಿಗೆ ಭಂಗ
    ಉಂಟಾಗುವಂತೆ ಮಾಡಿದಲ್ಲಿ ಪರಿಣಾಮ ನೆಟ್ಟಗಿರದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.
    ಸನ್ನಡತೆಯಿಂದ ಬದುಕಲು ಸಲಹೆ: ಒಂದು ಕಾಲದಲ್ಲಿ ರೌಡಿತನದ ಹವಾ ಮಾಡುವುದು ಫ್ಯಾಷನ್​ ಆಗಿದೆ ಎಂದು ಕೊಂಡವರಿಗೆ, ಕಾನೂನು ವಿರುದ್ಧ ಹೋದರೆ ಏನಾಗುವುದು ಎಂಬುವುದು ಈಗಾಗಲೇ ಅರಿವುಂಟಾಗಿರುತ್ತದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಹೊಸ ಪ್ರಕರಣಗಳು ದಾಖಲಾಗದಂತೆ, ದೂರುಗಳು ಬಾರದಂತೆ, ನಡುವಳಿಕೆ ಬದಲಾಯಿಸಿಕೊಂಡು ಗೌರವಯುತವಾದ ಜೀವನ ನಡೆಸಿಕೊಂಡು ಹೋಗಲು ಅವಕಾಶ ಇದೆ. ಅದನ್ನು ಸದ್ಬಳಸಿಕೊಳ್ಳುವಂತಾಗಬೇಕು ಎಂದು ಎಸ್ಪಿ ತಿಳಿಸಿದರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಎಲ್ಲರೂ ನೆಮ್ಮದಿಯಿಂದ ಬದುಕು ನಡೆಸಬೇಕು. ಯಾವುದೇ ರೀತಿಯ ಅಹಿತಕರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಇತರರಿಗೆ ತೊಂದರೆ ನೀಡಿದ್ದಾದರೆ ಕಾನೂನು ರೀತಿಯಲ್ಲಿ ಗೂಂಡಾಕಾಯ್ದೆ ಅಡಿಯಲ್ಲಿ
    ಗಡಿಪಾರು ಮಾಡಲಾಗುವುದು ಎಂದರು.
    ಇದಕ್ಕೂ ಮುನ್ನ ರೌಡಿಗಳ ಪರೇಡ್​ನಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಅಪರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಭಾಸ್ಕರ್​ ಅವರು ರೌಡಿಗಳಿಗೆ ನೀತಿಪಾಠ ಬೋಧಿಸಿದರು.

    ದೂರುಗಳಿಲ್ಲದೆ ಬದುಕಿದರೆ ಆರೋಪಿಗಳಿಗೆ ಕೇಸ್​ಗಳಿಂದ ಮುಕ್ತಿ: ಕೆಲವರು ಮನ ಪರಿವರ್ತನೆಯಾಗಿ ಸಮಾಜಘಾತುಕ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಇನ್ನು ಕೆಲವರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಅಶಕ್ತರಾಗಿದ್ದಾರೆ. ಇನ್ನು ಕೆಲವರು ಜೈಲಿನಲ್ಲಿದ್ದಾರೆ. ಕೆಲವರು ಬೇರೆ ಕಡೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವರು 60 ವರ್ಷಮೇಲ್ಪಟ್ಟವರಿದ್ದಾರೆ. ಅವರ ಚಟುವಟಿಕೆಗಳ ಮೇಲೆ ಪೊಲೀಸರ ಹದ್ದಿನ ಕಣ್ಣಿಟ್ಟಿದೆ. ಆಶಕ್ತರನ್ನು ರೌಡಿಶೀಟ್​ನಿಂದ ಬಿಡುಗಡೆ ಮಾಡಿದೆ. 10 ವರ್ಷಗಳಿಂದ ಯಾವುದೇ ಪ್ರಕರಣಗಳಿಲ್ಲದೆ ಕಾನೂನಿಗೆ ಭಂಗ ಉಂಟು ಮಾಡದೆ ಯಾವುದೇ ದೂರುಗಳಿಲ್ಲದೆ ಶಾಂತಿಯುತವಾಗಿ ಜೀವನ ನಿರ್ವಹಿಸುತ್ತಿರುವವರಿಗೆ ಕೇಸುಗಳಿಂದ ಮುಕ್ತಿ ದೊರಕಿಸಲು ಚಿಂತಿಸಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.

    19 ರೌಡಿಗಳು ಗಡಿಪಾರು: ಈಗಾಗಲೇ ಇಬ್ಬರ ವಿರುದ್ಧ ಗೂಂಡಾಕಾಯ್ದೆ ದಾಖಲು ಮಾಡಿದೆ. 19 ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಮತ್ತೆ ಯಾರಾದರೂ ರೌಡಿಸ್​ಂ ಮುಂದುವರಿಸಿದ್ದಲ್ಲಿ ಅವರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ (ಜಾಮೀನು ರಹಿತ) ಜೀವನ ಪೂರ್ತಿ ಜೈಲಿನಲ್ಲೆ ಕೊಳೆಯುವಂತೆ ಮಾಡಲಾಗುವುದು. ಹೊಟ್ಟೆಪಾಡಿಗಾಗಿ ಬೇರೆಯವರಿಗೆ ತೊಂದರೆ ನೀಡಬಾರದು. ಬೇರೆಯವರ ಕುಟುಂಬಗಳಂತೆ ನಿಮಗೂ ಕುಟುಂಬಗಳಿರುತ್ತವೆ. ನಿಮ್ಮ ಕೆಟ್ಟ ಚಟುವಟಿಕೆಗಳು ಮುಂದಿನ ಪೀಳಿಗೆ ಮೇಲೆ ಪರಿಣಾಮ ಬೀರಲಿದೆ. ಅವರನ್ನು ಹಾದಿ ತಪ್ಪಿಸಲಿದೆ ಎಂದ ಅವರು ಈಗಾಗಲೇ ಇವರಿಗೆಲ್ಲ ಎಚ್ಚರಿಕೆ ನೀಡಿ ಬುದ್ಧಿವಾದ ಹೇಳಲಾಗಿದೆ ಎಂದು ಎಸ್ಪಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts