More

    12ರಿಂದ ಶಿವಮೊಗ್ಗದಲ್ಲಿ ಮಾರಿಕಾಂಬೆ ಜಾತ್ರೆ

    ಶಿವಮೊಗ್ಗ: ನಗರದ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೋಟೆ ಮಾರಿಕಾಂಬಾ ಜಾತ್ರೆ ಮಾ.12ರಿಂದ 16ರವರೆಗೆ ನಡೆಯಲಿದ್ದು, ಮಂಗಳವಾರ ಸಾರು (ಅಂಕೆ) ಹಾಕುವ ಮೂಲಕ ಸೇವಾ ಸಮಿತಿ ಪದಾಧಿಕಾರಿಗಳು ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಜಾತ್ರೆಯ ಸಿದ್ಧತೆಗಳ ಬಗ್ಗೆ ವಿವರಿಸಿದರು. ಇಡೀ ನಗರವನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ವೀರಭದ್ರೇಶ್ವರ ಟಾಕೀಸ್ ರಸ್ತೆ, ಕುವೆಂಪು ರಸ್ತೆ, ನೆಹರು ರಸ್ತೆ, ಜೈಲ್ ರಸ್ತೆ ಸೇರಿ ಅನೇಕ ಕಡೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದು ಹೇಳಿದರು.
    ವಾಹನ ನಿಲುಗಡೆ ವ್ಯವಸ್ಥೆ, ಮಾರಿಕಾಂಬೆ ದೇವಸ್ಥಾನದಿಂದ ಗಾಂಧಿಬಜಾರ್ ರಸ್ತೆಯೂ ಸೇರಿ ಶಿವಪ್ಪನಾಯಕ ವೃತ್ತದವರೆಗೆ ಭಕ್ತರಿಗೆ ಸರದಿಯಲ್ಲಿ ನಿಲ್ಲಲು ಶಾಮಿಯಾನ ಅಳವಡಿಸಲಾಗುವುದು. ಸಂಘ ಸಂಸ್ಥೆಗಳ ನೆರವಿನಿಂದ ಕುಡಿಯುವ ನೀರು, ಪಾನಕ, ಮಜ್ಜಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ಬಗ್ಗೆ ಪ್ರಚಾರ ನಡೆಸಲು ಆಟೋಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
    ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತದೆ. ಶಕ್ತಿ ದೇವತೆಯ ಅಲಂಕಾರಕ್ಕಾಗಿ ಪರಿಣಿತರಿಗೆ ಸೂಚಿಸಲಾಗಿದೆ. ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ವಿಶೇಷ ಅಲಂಕಾರ ಮಾಡಲಾಗುವುದು ಎಂದರು.
    12ರ ಬೆಳಗ್ಗೆ 5ಕ್ಕೆ ಮಂಗಳವಾದ್ಯದೊಂದಿಗೆ ಬಿ.ಬಿ. ರಸ್ತೆಯ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಕುಟುಂಬದ ಮುತ್ತೈದೆಯರು ಮಂಗಳದ್ರವ್ಯಾದಿಗಳೊಂದಿಗೆ ಮಾರಿಕಾಂಬೆಗೆ ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ನಂತರ ದೇವಿಯನ್ನು ಗಾಂಧಿ ಬಜಾರ್‌ನ ತವರು ಮನೆ ಕಾಳಿಕಾ ಪರಮೇಶ್ವರಿ ದೇಗುಲ ಇರಿಸಲಾಗುತ್ತದೆ. ರಾತ್ರಿ 10ರವರೆಗೆ ಇಲ್ಲಿ ಪೂಜೆ ಸಲ್ಲಿಸಲಾಗುವುದು. ಬಳಿಕ ರಾತ್ರಿ ದೇವಿಯನ್ನು ಗದ್ದುಗೆಗೆ ಕರೆತಂದು ಕೂರಿಸಲಾಗುವುದು ಎಂದರು.
    ಸಂಪ್ರದಾಯದಂತೆ ವಿಶ್ವಕರ್ಮ, ಉಪ್ಪಾರ, ಹರಿಜನ, ಕುರುಬ ಸಮಾಜದವರು ಪೂಜೆ ಸಲ್ಲಿಸುತ್ತಾರೆ. 16ರ ರಾತ್ರಿ 7ಕ್ಕೆ ದೇವಿಯ ವನಪ್ರವೇಶದ ನಿಮಿತ್ತ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿಸಿದರು.
    ಮೂರು ದಿನ ರಾಜ್ಯ ಮಟ್ಟದ ಕುಸ್ತಿ: ಜಾತ್ರೆ ಅಂಗವಾಗಿ ಮಾ.15ರಿಂದ 17ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಮಾ.15ರ ಮಧ್ಯಾಹ್ನ 3ಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. 17ರಂದು ಮಧ್ಯಾಹ್ನ 3ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಮೊದಲ ಸ್ಥಾನ ಪಡೆದ ಕುಸ್ತಿ ಪಟುವಿಗೆ ಬೆಳ್ಳಿ ಗದೆ ಮತ್ತು 50 ಸಾವಿರ ರೂ. ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದವರಿಗೆ ಬೆಳ್ಳಿ ಗದೆ ಹಾಗೂ 25 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ.
    ಸೇವಾ ಸಮಿತಿ ಉಪಾಧ್ಯಕ್ಷ ಎನ್.ಉಮಾಪತಿ, ಕಾರ್ಯದರ್ಶಿಗಳಾದ ಎಸ್.ಹನುಮಂತಪ್ಪ, ಡಿ.ಎಂ.ರಾಮಯ್ಯ, ಎಸ್.ಸಿ.ಲೋಕೇಶ್, ಸಹಕಾರ್ಯದರ್ಶಿಗಳಾದ ಎ.ಎಚ್.ಸುನೀಲ್, ಸೀತಾರಾಮಾನಾಯ್ಕ, ಟಿ.ಎಸ್.ಚಂದ್ರಶೇಖರ್, ಪೂಜಾ ಸಂಚಾಲಕರಾದ ಸತ್ಯನಾರಾಯಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts