More

    ಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೆಟ್ ಆಳ್ವಾ ಆಯ್ಕೆ

    ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದ ಮಾರ್ಗರೆಟ್ ಆಳ್ವಾ ಅವರನ್ನು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಿವೆ‌. ಜಿಲ್ಲೆಯ ಜತೆ ನಿಕಟ ಸಂಪರ್ಕ ಹೊಂದಿದ್ದರಿಂದ ಆಳ್ವಾ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರ ಸಂತಸಕ್ಕೆ ಇದು ಕಾರಣವಾಗಿದೆ.

    ಮಾರ್ಗರೆಟ್ ನಜರತ್ ಮೂಲತಃ ಮಂಗಳೂರಿ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿದವರು. ಬೆಂಗಳೂರಿನಲ್ಲಿ ಬಿಎ ಹಾಗೂ ಅಲ್ಲೇ ಎಲ್‌ಎಲ್‌ಬಿ ಓದಿ ವಕೀಲಿ ವೃತ್ತಿ ಮಾಡಿದ್ದರು. 1964 ರ ಮೇ 24 ರಂದು ಮಂಗಳೂರಿನ ನಿರಂಜನ ಆಳ್ವಾ ಅವರನ್ನು ವಿವಾಹವಾಗುವ ಮೂಲಕ ಅವರು ರಾಜಕೀಯ ಕುಟುಂಬಕ್ಕೆ ಪದಾರ್ಪಣೆ ಮಾಡುತ್ತಾರೆ. ಆ ಮೂಲಕವೇ ಅವರ ಸಂಬಂಧ ಉತ್ತರ ಕನ್ನಡದ ಒಟ್ಟಿಗೂ ಬೆಳೆಯುತ್ತದೆ.

    ಮಾರ್ಗರೆಟ್ ಅವರ ಮಾವ (ಪತಿಯ ತಂದೆ) ಜೋಕಿಂ ಆಳ್ವಾ 1952ರಿಂದ ಮೂರು ಅವಧಿಗೆ ಆಗಿನ ಕೆನರಾ ಲೋಕಸಭಾ ಕ್ಷೇತ್ರ(ಈಗಿನ ಉತ್ತರ ಕನ್ನಡ) ವನ್ನು ಕಾಂಗ್ರೆಸ್‌ನಿಂದ ಪ್ರತಿನಿಧಿಸಿದ್ದರು. ಅತ್ತೆ ವಯೋಲೆಟ್ ಆಳ್ವಾ ರಾಜ್ಯಸಭಾ ಸದಸ್ಯರಾಗಿದ್ದರು. ಇದೇ ಸಂಪರ್ಕ ಹಾಗೂ ಪ್ರೇರಣೆಯಿಂದ ಮಾರ್ಗರೆಟ್ ಅವರು ಮುಂದೆ ಭಾರತದ ರಾಜಕಾರಣದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದರು.

    1974 ರಲ್ಲಿ ಅವರು ಮೊದಲ ಬಾರಿಗೆ ರಾಜ್ಯ ಸಭೆಗೆ ಆಯ್ಕೆಯಾದರು. ನಂತರ ನಿರಂತರವಾಗಿ ಮೂರು ಅವಧಿಗೆ (1980, 1986 ಹಾಗೂ 1992 ) ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ ಅವರು 1983-85 ರ ಅವಧಿಯಲ್ಲಿ ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 1983 ರಿಂದ 85 ರ ಅವಧಿಯಲ್ಲಿ ಅವರು ಕೇಂದ್ರ ಸಂಸದೀಯ ವ್ಯವಹಾರ, ಯುವ ಸಬಲೀಕಣ ಮತ್ತು ಕ್ರೀಡೆ, ಮಹಿಳಾ ಮತ್ತು ಮಕ್ಕಳ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

    ವಿವಿಧ ಸಂಸದೀಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಅವರು ರಾಜೀವ ಗಾಂಧಿ ಸರ್ಕಾರದ ಅವಧಿಯಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆ ತರಲು 28 ಅಂಶಗಳ ಕಾರ್ಯಕ್ರಮ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಬಗ್ಗೆ ಅವರು ಹೋರಾಟ ನಡೆಸಿದ್ದರು. ನಂತರ ಅದೇ ಕಾನೂನಾಗಿ ರಚನೆಯಾಯಿತು.

    ಉತ್ತರ ಕನ್ನಡದೊಂದಿಗಿನ ನಂಟು:ಉತ್ತರ ಕನ್ನಡದ ಕಾಂಗ್ರೆಸ್ ನಾಯಕರ ಜತೆ ನಂಟು ಹೊಂದಿದ್ದ ಮಾರ್ಗರೆಟ್1999 ರಲ್ಲಿ ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 2004 ರವರೆಗಿನ ಸಂಪೂರ್ಣ 5 ವರ್ಷಗಳ ಅವಧಿಗೆ ಉತ್ತರ ಕನ್ನಡದ ಸಂಸದರಾಗಿದ್ದರು. ಕೇಂದ್ರದಲ್ಲಿ ತಮ್ಮದಲ್ಲದ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರವಿದ್ದರೂ ಅವರು ತಳಮಟ್ಟದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದರು. ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು. ಊರು ಊರುಗಳಲ್ಲಿ ತಮ್ಮ ಸಂಸದರ ನಿಧಿಯಲ್ಲಿ ಸಭಾ ಭವನಗಳನ್ನು ನಿರ್ಮಿಸಿಕೊಟ್ಟಿದ್ದರು. 2004 ಹಾಗೂ 2009 ರ ಲೋಕಸಭಾ ಚುನಾವಣೆಯಲ್ಲಿ ಅವರು ಅನಂತ ಕುಮಾರ ಹೆಗಡೆ ಅವರಿಂದಲೇ ಸೋಲು ಕಂಡರು. 2009 ರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸೋಲಿನ ನಂತರ ಅವರು ಉತ್ತರಾಖಂಡ್ ರಾಜ್ಯಪಾಲೆಯಾಗಿ ಆಯ್ಕೆಯಾದರು. 2014 ರಲ್ಲಿ ಅವರು ರಾಜಸ್ತಾನದ ರಾಜ್ಯಪಾಲೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಕೆಲಕಾಲ ಗೋವಾ ರಾಜ್ಯಪಾಲೆಯಾಗಿಯೂ ಅಧಿಕಾರ ವಹಿಸಿಕೊಂಡಿದ್ದರು.

    ಈವರೆಗೆ 200 ಕೋಟಿಗೂ ಅಧಿಕ​ ಡೋಸ್​ ಕೋವಿಡ್​ ಲಸಿಕೆ ನೀಡಿಕೆ: ಮತ್ತೆ ಮೈಲಿಗಲ್ಲು ಸಾಧಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts