ತೀರ್ಥಹಳ್ಳಿ: ಜಲಜೀವನ್ ಯೋಜನೆಯಡಿ ತಾಲೂಕಿಗೆ ಮಂಜೂರಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕೆಲವರು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಇದರಿಂದ ತಾಲೂಕಿನ 36 ಗ್ರಾಪಂಗಳ ಜನರಿಗೆ ಕುಡಿಯುವ ನೀರಿಗೆ ದ್ರೋಹ ಬಗೆದಂತೆ ಎಂದು ತಾಲೂಕು ಗ್ರಾಪಂಗಳ ಒಕ್ಕೂಟದ ಅಧ್ಯಕ್ಷ ಟಿ.ಜೆ.ಅನಿಲ್ ಹೇಳಿದರು.
ಸ್ಥಳೀಯ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಣಿ ಡ್ಯಾಂ ನೀರು ತರಲು ಸರ್ಕಾರ 334 ಕೋಟಿ ರೂ.ಗಳ ಯೋಜನೆಯನ್ನು ಪರಿಷ್ಕರಿಸಿ 353 ಕೋಟಿ ರೂ. ಅನುದಾನದ ಮೂಲಕ ಆದೇಶವನ್ನೂ ಹೊರಡಿಸಿದೆ. ಈ ಎಲ್ಲ ವಿಚಾರಗಳನ್ನು ಅರಿತಿದ್ದರೂ ಕೆಲವೇ ಜನರ ತಂಡ ಈ ಯೋಜನೆಗೆ ವಿರೋಧಿಸುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಯೋಜನೆಗೆ ಅಗತ್ಯವಿರುವುದು ಕೇವಲ 0.129 ಟಿಎಂಸಿ ನೀರು ಮಾತ್ರ. ಇದರಿಂದ ಮಾಣಿ ಡ್ಯಾಮಿನ ವಿದ್ಯುತ್ ಉತ್ಪಾದನೆಗೂ ನೀರಿನ ಕೊರತೆ ಆಗುವುದಿಲ್ಲ ಎಂಬುದು ತಂತ್ರಜ್ಞರ ಸಲಹೆ. ತಾಲೂಕಿನ 36 ಗ್ರಾಪಂಗಳ ವ್ಯಾಪ್ತಿಯ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ಸುಳ್ಳು ಹೇಳಿ ದಾರಿ ತಪ್ಪಿಸದೇ ಯೋಜನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಮೇಲಿನಕುರುವಳ್ಳಿ ಗ್ರಾಪಂ ಅಧ್ಯಕ್ಷ ಬಂಡೆ ವೆಂಕಟೇಶ್, ಗುಡ್ಡೆಕೊಪ್ಪ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಪವಾರ್, ಮೇಳಿಗೆ ಗ್ರಾಪಂ ಉಪಾಧ್ಯಕ್ಷ ಎನ್.ಮುರಳಿ ಹಾಗೂ ಆರಗ ಮತ್ತು ನೆರಟೂರು ಗ್ರಾಪಂಗಳ ಅಧ್ಯಕ್ಷರು ಇದ್ದರು.
ಸಕಾರಣವಿಲ್ಲದೆ ಪ್ರತಿಭಟನೆ
ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಸಕಾರಣಗಳಿಲ್ಲದೇ ಯೋಜನೆ ಅವೈಜ್ಞಾನಿಕ ಎಂಬ ಪ್ರತಿಭಟನಾಕಾರರ ಹೇಳಿಕೆ ಬಾಲಿಶವಾಗಿದೆ. ಮುಖ್ಯವಾಗಿ ಈ ವ್ಯಕ್ತಿಗಳ ವಿರೋಧಕ್ಕೆ ಕಾರಣವೂ ಇಲ್ಲ. ಇದರಲ್ಲಿ ಸ್ಥಳೀಯರನ್ನು ವಂಚಿಸುವ ಯಾವ ಪ್ರಯತ್ನವೂ ಇಲ್ಲ. ಕೇವಲ ನಾಲ್ಕೈದು ಜನರಿಂದಾಗಿ ಅತ್ಯಂತ ಮಹತ್ವದ ಯೋಜನೆಗೆ ಹಿನ್ನಡೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಅನಿಲ್ ಹೇಳಿದರು.