More

    ಮರವೂರು ಸೇತುವೆ ದುರಸ್ತಿ ಪೂರ್ಣ

    ಮಂಗಳೂರು: ಕುಸಿದಿದ್ದ ಮರವೂರು ಸೇತುವೆ ದುರಸ್ತಿ ಪೂರ್ಣಗೊಂಡು ಶುಕ್ರವಾರ ಸಾಯಂಕಾಲದಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೇರ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿದ್ದ ಮರವೂರು ಸೇತುವೆ ಒಂದುವರೆ ತಿಂಗಳ ಹಿಂದೆ ಎರಡು ಅಡಿಯಷ್ಟು ಕುಸಿದಿತ್ತು. ಬೆಂಗಳೂರಿನಿಂದ ಬಂದ ತಜ್ಞ ಇಂಜಿನಿಯರ್‌ಗಳು ಪರಿಶೀಲಿಸಿ, ಸರಿಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ವರದಿ ನೀಡಿದ ಬಳಿಕ ಕಾಮಗಾರಿ ಆರಂಭಿಸಲಾಗಿತ್ತು.

    ಪಿಡಬ್ಲುೃಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಕೆಲದಿನಗಳ ಹಿಂದೆಯೇ ಸೇತುವೆಗೆ ಜ್ಯಾಕ್ ಅಳವಡಿಸಿ ಪಿಲ್ಲರನ್ನು ಮೇಲಕ್ಕೆತ್ತಿ ಯಥಾಸ್ಥಿತಿಗೆ ತರಲಾಗಿತ್ತು. ಅದರ ಬಳಿಕ ವಾಹನ ಸಂಚಾರ ಸುಸೂತ್ರವಾಗುವಂತೆ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಅದು ಪೂರ್ಣಗೊಂಡಿದೆ. ಗುರುವಾರ ತಜ್ಞರ ಉಪಸ್ಥಿತಿಯಲ್ಲಿ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ಲೋಡ್ ಹೊಂದಿದ್ದ ಟಿಪ್ಪರ್‌ಗಳನ್ನು ಸೇತುವೆ ಮೇಲೆ ಚಲಾಯಿಸಿ ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ.

    ಸೇತುವೆ ತಜ್ಞ ಜೈ ಗೋಪಾಲ್, ಪಿಡಬ್ಲುೃಡಿ ಮಂಗಳೂರು ವೃತ್ತ ಸೂಪರಿಟೆಂಡೆಂಟ್ ಇಂಜಿನಿಯರ್ ಗಣೇಶ್ ಎಸ್., ಮಂಗಳೂರು ವಿಭಾಗದ ಪಿಡಬ್ಲುೃಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಯಶವಂತ ಎಸ್., ಎ.ಇ.ಇ. ಚಂದ್ರಶೇಖರಯ್ಯ, ಎ.ಇ. ರತ್ನಾಕರ್, ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ ಡಿ. ಶೆಟ್ಟಿ ಉಪಸ್ಥಿತರಿದ್ದರು.

    ಮರವೂರು ಸೇತುವೆ ದುರಸ್ತಿ ಕಾಮಗಾರಿ ಪೂರ್ಣಗೊಂಡು ಪರೀಕ್ಷೆಯೂ ಯಶಸ್ವಿಯಾಗಿದೆ. ಶುಕ್ರವಾರ ಸಂಜೆಯಿಂದ ಎಲ್ಲ ತರಹದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು.
    – ಡಾ.ರಾಜೇಂದ್ರ ಕೆ.ವಿ.
    ಜಿಲ್ಲಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts