More

    ಕೆರಿಬಿಯನ್ ಕಥಾನಕ ಚೇತೋಹಾರಿ ನೆನಪುಗಳು ಅನೇಕ

    savyasachi

    ಆಂಡಿ ರಾಬರ್ಟ್ಸ್, ಚಾರ್ಲಿ ಗ್ರಿಫಿತ್, ವೆಸ್ಲೆ ಹಾಲ್, ಜೋಯೆಲ್ ಗಾರ್ನರ್, ಮೈಕೆಲ್ ಹೋಲ್ಡಿಂಗ್, ರ್ಕ್ಲಟಿ ಆಂಬ್ರೋಸ್, ಮಾಲ್ಕಂ ಮಾರ್ಷಲ್, ರ್ಕ್ನಟಿ ವಾಲ್ಷ್, ಇಯಾನ್ ಬಿಷಪ್…
    ವೆಸ್ಟ್ ಇಂಡೀಸ್ ವಿರುದ್ಧ ಆಡುವುದೆಂದರೆ ಜಗತ್ತಿನ ಬ್ಯಾಟ್ಸ್​ಮನ್​ಗಳೆಲ್ಲ ನಡುಗುತ್ತಿದ್ದ ಕಾಲವೊಂದಿತ್ತು. ಕಾರಣ ಈ ದೈತ್ಯವೇಗಿಗಳು. ವೆಸ್ಟ್ ಇಂಡೀಸ್ ಕ್ರಿಕೆಟ್​ನ ಸುವರ್ಣಯುಗದ ಧ್ರುವತಾರೆಗಳು ಈ ಬೌಲರ್​ಗಳೇ. ಸರ್ ಎವರ್ಟನ್ ವೀಕ್ಸ್, ಕ್ಲೈಡ್ ವಾಲ್ಕಾಟ್, ಫ್ರಾಂಕ್ ವೋರೆಲ್, ಕ್ಲೈವ್ ಲಾಯ್್ಡ ಗ್ಯಾರಿ ಸೋಬರ್ಸ್, ವಿವಿಯನ್ ರಿಚರ್ಡ್ಸ್, ಡೆಸ್ಮಂಡ್ ಹೇಯ್್ನ ್ಸ ಬ್ರಿಯಾನ್ ಲಾರಾ, ಕ್ರಿಸ್ ಗೇಲ್ ಮೊದಲಾದ ಬ್ಯಾಟಿಂಗ್ ದಂತಕಥೆಗಳು ವಿಂಡೀಸ್ ಕ್ರಿಕೆಟ್ ಕೀರ್ತಿಯನ್ನು ಮುಗಿಲೆತ್ತರಕ್ಕೇರಿಸಿದರೂ, ವಿಂಡೀಸ್ ವಿರುದ್ಧ ಆಡುವುದೆಂದರೆ ಗುಹೆಯೊಳಗೆ ಸಿಂಹಗಳ ಸೈನ್ಯ ಎದುರಿಸಿದಂತೆ ಎಂಬ ಭೀತಿ ಮೂಡಿಸುತ್ತಿದ್ದುದು ಈ ಸುಪ್ರಸಿದ್ಧ ಬೌಲರ್​ಗಳೇ. ಅಂಥ ವಿಂಡೀಸ್ ಕ್ರಿಕೆಟ್​ನ ಮೇರುಕಥನಗಳು ಸದ್ಯ ನೆನಪು ಮಾತ್ರ. ಈಗ ಆಡುತ್ತಿರುವ ತಂಡಗಳು ಸುವರ್ಣಯುಗದ ತಂಡಗಳ ಹತ್ತಿರಕ್ಕೂ ಸುಳಿಯುವುದಿಲ್ಲ. ಹಾಗಿದ್ದರೂ, ವೆಸ್ಟ್ ಇಂಡೀಸ್​ನಲ್ಲಿ ಕ್ರಿಕೆಟ್ ಆಡುವುದೆಂದರೆ, ಈಗಲೂ ಪ್ರವಾಸಿ ತಂಡಗಳಿಗೆ ಅಂಥ ಸಲೀಸೇನೂ ಅಲ್ಲ. ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಟೆಸ್ಟ್, ಟಿ20 ಹಾಗೂ ಏಕದಿನ ಪಂದ್ಯಗಳ ಪೂರ್ಣ ಸರಣಿಗಾಗಿ ಕೆರಿಬಿಯನ್ ನೆಲಕ್ಕೆ ಬಂದಿಳಿದಿರುವ ಟೀಮ್ ಇಂಡಿಯಾ ಬುಧವಾರ ಡೊಮಿನಿಕಾದ ವಿಂಡ್ಸರ್ ಪಾರ್ಕ್​ನಲ್ಲಿ ಟೆಸ್ಟ್ ಅಭಿಯಾನ ಆರಂಭಿಸಿದೆ. ಈ ಸಂದರ್ಭದಲ್ಲಿ ಹಿಂದಿನ ವಿಂಡಿಸ್ ಪ್ರವಾಸಗಳ ಒಂದೆರಡು ಮರೆಯಲಾಗದ ಮೆಲುಕುಗಳು ಇಲ್ಲಿವೆ..

    ಮೊದಲ ಗೆಲುವಿನ ಸಿಹಿ: ಭಾರತ ಟೆಸ್ಟ್ ಪಂದ್ಯವೊಂದರಲ್ಲಿ ವಿಂಡೀಸ್ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿದ್ದು 1971ರಲ್ಲಿ. ಅಜಿತ್ ವಾಡೇಕರ್ ನಾಯಕತ್ವದ ತಂಡ ವಿಂಡೀಸ್ ಪ್ರವಾಸದಲ್ಲಿ ಮೊದಲ ಬಾರಿ ಪಂದ್ಯ ಮತ್ತು ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ವಿುಸಿತ್ತು. ಜಮೈಕಾದಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಭಾರತ ದಿಲೀಪ್ ಸರ್​ದೇಸಾಯಿ (212) ದ್ವಿಶತಕದ ಬಲದಿಂದ 387 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ವಿಂಡೀಸ್ ಪ್ರತಿಯಾಗಿ ಬಿಷನ್ ಸಿಂಗ್ ಬೇಡಿ (63ಕ್ಕೆ2), ಪ್ರಸನ್ನ (65ಕ್ಕೆ4), ವೆಂಕಟರಾಘವನ್ (46ಕ್ಕೆ3) ಸ್ಪಿನ್ ದಾಳಿ ಎದುರಿಸಲಾಗದೆ 217ಕ್ಕೆ ಕುಸಿದು ಫಾಲೋಆನ್​ಗೆ ಸಿಲುಕಿತು. 2ನೇ ಇನಿಂಗ್ಸ್​ನಲ್ಲಿ ರೋಹನ್ ಕನ್ಹಾಯ್ (158) ಶತಕ, ಗ್ಯಾರಿ ಸೋಬರ್ಸ್ (93) ಶತಕವಂಚಿತ ಸಾಹಸದ ನೆರವಿನಿಂದ 5ಕ್ಕೆ 385 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

    ಪೋರ್ಟ್ ಆಫ್ ಸ್ಪೇನ್​ನಲ್ಲಿ ನಡೆದ 2ನೇ ಪಂದ್ಯದ ಎರಡೂ ಇನಿಂಗ್ಸ್​ಗಳಲ್ಲಿ ಬಿಷನ್ ಬೇಡಿ (46ಕ್ಕೆ3, 50ಕ್ಕೆ2), ಪ್ರಸನ್ನ (54ಕ್ಕೆ4), ವೆಂಕಟರಾಘವನ್ (35ಕ್ಕೆ1, 95ಕ್ಕೆ5) ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ ಕ್ರಮವಾಗಿ 214 ಮತ್ತು 261 ರನ್​ಗೆ ಕುಸಿಯಿತು. ಪ್ರತಿಯಾಗಿ ಮೊದಲ ಇನಿಂಗ್ಸ್​ನಲ್ಲಿ ದಿಲೀಪ್ ಸರ್ದೇಸಾಯಿ ಶತಕ (112), ಸುನಿಲ್ ಗಾವಸ್ಕರ್ (65), ಏಕನಾಥ ಸೋಳ್ಕರ್ *55), ಅಶೋಕ್ ಮಂಕಡ್ (45) ಉತ್ತಮ ಬ್ಯಾಟಿಂಗ್ ಬಲದಿಂದ 352 ರನ್ ಪೇರಿಸಿದ ಭಾರತ, 2ನೇ ಇನಿಂಗ್ಸ್​ನಲ್ಲಿ 124 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಐತಿಹಾಸಿಕ ಗೆಲುವು ದಾಖಲಿಸಿತು. ಗಾವಸ್ಕರ್ 2ನೇ ಇನಿಂಗ್ಸ್​ನಲ್ಲೂ ಅಜೇಯ ಅರ್ಧ ಶತಕ (67) ಬಾರಿಸಿದರು. ಸರಣಿಯ ಮುಂದಿನ ಮೂರು ಪಂದ್ಯಗಳು ಡ್ರಾಗೊಳ್ಳುವುದರೊಂದಿಗೆ ಭಾರತ ಕೆರಿಬಿಯನ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿತ್ತು.

    ವೇಟರ್ ಜತೆ ಬೆಟ್ ಸೋತ ಸಚಿನ್!: 1997ರ ಕೆರಿಬಿಯನ್ ಪ್ರವಾಸದ ಮೆಲುಕು ಅದು. ಬಾರ್ಬಡಾಸ್​ನಲ್ಲಿ ಭಾರತ- ವೆಸ್ಟ್ ಇಂಡೀಸ್ 3ನೇ ಟೆಸ್ಟ್ ಪಂದ್ಯ. ಸಚಿನ್ ತೆಂಡುಲ್ಕರ್ ಪಾಲಿಗದು ನಾಯಕರಾಗಿ 2ನೇ ಟೆಸ್ಟ್ ಪ್ರವಾಸ. ಸಚಿನ್ ನಾಯಕತ್ವದಲ್ಲಿ ತವರಿನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ, ಬಳಿಕ ಪ್ರತಿಷ್ಠಿತ ಟೈಟಾನ್ ಕಪ್ ಗೆದ್ದು ಬೀಗುತ್ತಿದ್ದ ಭಾರತ, ತದನಂತರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹೀನಾಯ ಸೋಲು ಅನುಭವಿಸಿದ್ದರೂ, ಆಫ್ರಿಕಾದಲ್ಲಿ ಹೋದ ಮಾನವನ್ನು ವಿಂಡೀಸ್​ನಲ್ಲಿ ಮರಳಿ ಗಳಿಸುವ ಆತ್ಮವಿಶ್ವಾಸದಲ್ಲಿತ್ತು. ಮೊದಲ ಎರಡು ಟೆಸ್ಟ್ ಪಂದ್ಯಗಳು ಜಿದ್ದಾಜಿದ್ದಿ ಹೋರಾಟದ ಬಳಿಕ ಡ್ರಾಗೊಂಡಿದ್ದವು. ಬಾರ್ಬಡಾಸ್​ನ 3ನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್, ವೆಂಕಟೇಶ್ ಪ್ರಸಾದ್ (82ಕ್ಕೆ5) ದಾಳಿ ಎದುರಿಸಲಾಗದೆ 298 ರನ್​ಗೆ ಕುಸಿದಿತ್ತು. ಪ್ರತಿಯಾಗಿ ಭಾರತ ನಾಯಕ ಸಚಿನ್​ರ 92 ಮತ್ತು ರಾಹುಲ್ ದ್ರಾವಿಡ್​ರ 78 ರನ್ ನೆರವಿನಿಂದ 319 ರನ್ ಪೇರಿಸಿ 21 ರನ್​ಗಳ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. 2ನೇ ಇನಿಂಗ್ಸ್​ನಲ್ಲೂ ಅಬೆ ಕುರುವಿಲ್ಲ 68ಕ್ಕೆ5, ವೆಂಕಟೇಶ್ ಪ್ರಸಾದ್ 39ಕ್ಕೆ3, ದೊಡ್ಡಗಣೇಶ್ 28ಕ್ಕೆ2 ಮೂರೇ ಜನ ವಿಂಡೀಸ್ ಬ್ಯಾಟ್ಸ್​ಮನ್​ಗಳನ್ನು ಕೇವಲ 140 ರನ್​ಗೆ ಪೆವಿಲಿಯನ್​ಗಟ್ಟಿದ್ದರು. ಅಲ್ಲಿಗೆ ಭಾರತಕ್ಕೆ ಕೇವಲ 120 ರನ್ ಗಳಿಸಿದರೆ ಐತಿಹಾಸಿಕ ಗೆಲುವು ಸಾಧಿಸುವ ಅವಕಾಶ. 3ನೇ ದಿನದಾಟದಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿದ್ದಾಗ ಇನ್ನೇನು ಪಂದ್ಯ ಗೆದ್ದೇ ಬಿಟ್ಟ ಸಂಭ್ರಮ. ಆ ರಾತ್ರಿ ತಂಡದ ಆಟಗಾರರು ಭೋಜನಕ್ಕೆಂದು ಹೋಟೆಲ್​ಗೆ ತೆರಳಿದ್ದಾಗ ಊಟದ ನಡುವೆ ಮಾರನೇ ಮುಂಜಾನೆ ಬೇಗ ಗೆಲುವು ಸಾಧಿಸಿದರೆ, ಬಳಿಕ ಹೇಗೆಲ್ಲ ಸಂಭ್ರಮಾಚರಿಸಬಹುದು ಎಂಬುದೇ ಚರ್ಚೆ. ಆದರೆ, ಆಟಗಾರರಿಗೆ ಊಟ ಬಡಿಸುತ್ತಿದ್ದ ವೇಟರ್ ಒಬ್ಬ, ಈಗಲೇ ಖುಷಿ ಪಡಬೇಡಿ, ನಾಳೆ ನಿಮಗೆ ಬೌನ್ಸರ್​ಗಳನ್ನು ಹಾಕಿ ಆಲೌಟ್ ಮಾಡಲು ಆಂಬ್ರೋಸ್ ಒಬ್ಬರೇ ಸಾಕು ಎಂದು ಎಚ್ಚರಿಕೆ ನೀಡಿದ್ದ. ಆಟಗಾರರಿಗೆ ಇವನ್ಯಾರಪ್ಪ,ಅಪಶಕುನ ಎಂಬ ಅಸಹನೆ. ನಾಯಕ ತೆಂಡುಲ್ಕರ್ ಆ ವೇಟರ್ ಜತೆ ತಮಾಷೆಗಿಳಿದಿದ್ದರು. ‘ಮೊದಲ ಇನಿಂಗ್ಸ್ ನಲ್ಲಿ ವೇಗಿ ಫ್ರಾಂಕ್ಲಿನ್ ರೋಸ್ ಬೌನ್ಸರ್ ಎಸೆದಾಗ ನಾನು ಸಿಕ್ಸರ್ ಬಾರಿಸಿದ್ದೆ. ನಾಳೆ ಆಂಬ್ರೋಸ್ ಬೌನ್ಸರ್ ಎಸೆದರೂ ಆ ಚೆಂಡನ್ನು ಆಂಟಿಗಾದಲ್ಲಿ ಹೋಗಿ ಬೀಳುವಂತೆ ಬಾರಿಸುತ್ತೇನೆ’ ಎಂದು ಅವರು ತಮಾಷೆ ಮಾಡಿದ್ದರು. ‘ನೀನು ಈಗಲೇ ಒಂದು ಬಾಟಲಿ ಷಾಂಪೇನ್ ಅನ್ನು ವಿಶೇಷವಾಗಿ ರೆಫ್ರಿಜರೇಟರ್​ನಲ್ಲಿಟ್ಟುಬಿಡು. ನಾಳೆ ಇಲ್ಲೇ ಬಂದು ಸಂಭ್ರಮಾಚರಣೆ ಮಾಡುತ್ತೇವೆ’ ಎಂದೂ ಸಚಿನ್ ತಮಾಷೆ ಮಾಡಿದ್ದರು. ಆದರೆ, ಮಾರನೇ ಬೆಳಗ್ಗೆ ನಡೆದಿದ್ದೇ ಬೇರೆ. ಆಂಬ್ರೋಸ್, ಇಯಾನ್ ಬಿಷಪ್ ಮತ್ತು ಫ್ರಾಂಕ್ಲಿನ್ ರೋಸ್ ವಿರುದ್ಧ ಆಡಲು ತಡಬಡಾಯಿಸಿದ ಭಾರತ ಕೇವಲ 35.5 ಓವರ್​ಗಳಲ್ಲಿ 81 ರನ್​ಗೆ ಕುಸಿದಿತ್ತು. ಅಲ್ಲಿಗೆ ವಿಂಡೀಸ್ 38 ರನ್ ಗೆಲುವು ಸಾಧಿಸಿತ್ತು. ಆ ಸರಣಿಯ ಮುಂದಿನ ಎರಡೂ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಭಾರತಕ್ಕೆ ಸರಣಿಯೂ ಕೈತಪ್ಪಿತ್ತು. ಸಚಿನ್ ತಮ್ಮ ಆತ್ಮಕಥೆ ‘ಪ್ಲೇಯಿಂಟ್ ಇಟ್ ಮೈ ವೇ’-ದಲ್ಲಿ ಈ ಪ್ರಸಂಗ ನೆನಪಿಸಿಕೊಂಡಿದ್ದಾರೆ.

    ಕುಂಬ್ಳೆ ಸಾಹಸ: 2002ರಲ್ಲಿ ಸೇಂಟ್ ಜಾನ್ಸ್​ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯ. ಉಭಯ ತಂಡಗಳ ಬ್ಯಾಟ್ಸ್​ಮನ್​ಗಳ ಮೆರೆದಾಟಕ್ಕೆ ಸಾಕ್ಷಿಯಾದ ಈ ಪಂದ್ಯ ಭಾರತದ ಟ್ರಂಫ್​ಕಾರ್ಡ್ ಅನಿಲ್ ಕುಂಬ್ಳೆ ಅವರ ಸಾಹಸಿಕ ಆಟದಿಂದ ಅಜರಾಮರವೆನಿಸಿತು. ಕುಂಬ್ಳೆ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಿಂಡೀಸ್ ವೇಗಿ ಮೆರ್ವಿನ್ ಡಿಲ್ಲಾನ್ ಅವರ ಬೌನ್ಸರ್ ಎಸೆತ ಹೆಲ್ಮೆಟ್​ಗೆ ಅಪ್ಪಳಿಸಿತ್ತು. ಸ್ಕಾ್ಯನಿಂಗ್ ಮಾಡಿದಾಗ ದವಡೆಗೆ ಗಂಭೀರ ಪೆಟ್ಟು ಬಿದ್ದಿರುವುದು ಖಚಿತಪಟ್ಟಿತ್ತು. ಅಂಥ ಗಂಭೀರ ಗಾಯವಿದ್ದಾಗ ಯಾರೇ ಆದರೂ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಸಹಜ. ಆದರೆ, ಕುಂಬ್ಳೆ ದವಡೆ ಗಾಯಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಲಿಳಿದರು. ಕ್ರಿಕೆಟ್​ನ ಇತಿಹಾಸದಲ್ಲೇ ಅದೊಂದು ಅಪರೂಪದ ಸಂದರ್ಭ. ಗಾಯ, ನೋವು ಯಾವುದನ್ನೂ ಲೆಕ್ಕಿಸದೆ ತಂಡಸ್ಪೂರ್ತಿಯಿಂದ ಸಿಂಹಘರ್ಜನೆ ಮಾಡಿದ ಕುಂಬ್ಳೆ 14 ಓವರ್ ಬೌಲಿಂಗ್ ಮಾಡಿ ಬ್ಯಾಟಿಂಗ್ ದಂತಕಥೆ ಬ್ರಿಯಾನ್ ಲಾರಾ ಅವರ ವಿಕೆಟ್ ಸಹ ಕಬಳಿಸಿದರು. ಪಂದ್ಯ ಡ್ರಾಗೊಂಡಿತ್ತು. ಭಾರತ ಆ ಪ್ರವಾಸದಲ್ಲಿ ಟೆಸ್ಟ್ ಸರಣಿ ಸೋತರೂ, ಕುಂಬ್ಳೆ ಹೃದಯ ಗೆದ್ದಿದ್ದರು.

    ಎಲ್ಲರೂ ಬೌಲಿಂಗ್!: ಭಾರತ ಅದೇ ಪಂದ್ಯದಲ್ಲಿ ಮತ್ತೊಂದು ದಾಖಲೆ ಮಾಡಿತು. ಬ್ಯಾಟಿಂಗ್ ಸ್ವರ್ಗವಾಗಿದ್ದ ಸೇಂಟ್ ಜಾನ್ಸ್ ಪಿಚ್​ನಲ್ಲಿ ಲಕ್ಷ್ಮಣ್ (130), ವಿಕೆಟ್ ಕೀಪರ್ ಅಜಯ್ ರಾತ್ರಾ (115) ಶತಕ, ರಾಹುಲ್ ದ್ರಾವಿಡ್ (91), ವಾಸಿಂ ಜಾಫರ್ (86) ಶತಕಾರ್ಧಗಳ ಬಲದಿಂದ ಭಾರತ 9 ವಿಕೆಟ್​ಗೆ 513 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಪ್ರತಿಯಾಗಿ ವಿಂಡೀಸ್ ಕೂಡ 9 ವಿಕೆಟ್​ಗೆ 629 ರನ್ ಗಳಿಸಿ ಪಂದ್ಯ ಡ್ರಾಗೊಳಿಸಿತು. ಪೂರ್ತಿ ಪಂದ್ಯದಲ್ಲಿ ನಡೆದಿದ್ದು ಎರಡೇ ಇನಿಂಗ್ಸ್. ಮೊದಲ ಎರಡು ದಿನ ಭಾರತ ಬ್ಯಾಟಿಂಗ್ ಮಾಡಿ 196 ಓವರ್ ಆಡಿದರೆ, ಬಾಕಿ ಮೂರು ದಿನ ಕಾಲ ವಿಂಡೀಸ್ ಬ್ಯಾಟಿಂಗ್ ಮಾಡಿ 248 ಓವರ್ ಆಡಿ ಆಲ್​ಔಟ್ ಆಗದೇ ಉಳಿಯಿತು. ನಾಯಕ ಕಾರ್ಲ್ ಹೂಪರ್ (136), ಶಿವನಾರಾಯಣ ಚಂದ್ರಪಾಲ್ (136), ರಿಡ್ಲಿ ಜೇಕಬ್ಸ್ (118) ಶತಕ ಬಾರಿಸಿದರೆ, ವಾವೆಲ್ ಹೈಂಡ್ಸ್ (65) ಮತ್ತು ರಾಮನರೇಶ್ ಸರ್ವಾನ್ (51) ಅರ್ಧಶತಕ ಬಾರಿಸಿದರು. ವಿಂಡೀಸ್ ವಿಕೆಟ್ ಕಬಳಿಸಲು ಭಾರತದ ನಾಯಕ ಸೌರವ್ ಗಂಗೂಲಿ ಇನ್ನಿಲ್ಲದ ಪ್ರಯತ್ನ ಹಾಗೂ ಪ್ರಯೋಗ ನಡೆಸಿದರು. ಎಲ್ಲಿಯವರೆಗೆಂದರೆ ತಂಡದ ಎಲ್ಲ ಹನ್ನೊಂದು ಆಟಗಾರರು ಆ ಪಂದ್ಯದಲ್ಲಿ ಬೌಲಿಂಗ್ ನಡೆಸಿದರು! ಹೌದು, ಪ್ರಮುಖ ವೇಗಿಗಳಾದ ಜಾವಗಲ್ ಶ್ರೀನಾಥ್ 45, ಆಶಿಶ್ ನೆಹ್ರಾ 49 ಮತ್ತು ಜಹೀರ್ ಖಾನ್ 48 ಓವರ್ ಬೌಲಿಂಗ್ ಮಾಡಿದರೆ, ಸಚಿನ್ ತೆಂಡುಲ್ಕರ್ 34 ಓವರ್ ಬೌಲಿಂಗ್ ನಡೆಸಿದರು. ಗಂಗೂಲಿ 12, ಕುಂಬ್ಳೆ 14 ಓವರ್ ಮಾಡಿದರೆ, ಬ್ಯಾಟ್ಸ್​ಮನ್​ಗಳಾದ ವಿವಿಎಸ್ ಲಕ್ಷ್ಮಣ್ 17, ವಾಸಿಂ ಜಾಫರ್ 11, ರಾಹುಲ್ ದ್ರಾವಿಡ್ 9, ಶಿವಸುಂದರ್ ದಾಸ್ 8, ವಿಕೆಟ್ ಕೀಪರ್ ಅಜಯ್ ರಾತ್ರಾ 1 ಓವರ್ ಬೌಲಿಂಗ್ ಮಾಡಿದರು. ಇವರ ಪೈಕಿ ಜಹೀರ್, ತೆಂಡುಲ್ಕರ್, ವಾಸಿಂ ಜಾಫರ್ ತಲಾ 2 ವಿಕೆಟ್ ಪಡೆದರೆ, ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್ ತಲಾ 1 ವಿಕೆಟ್ ಕಬಳಿಸಿದರು. ವಿಂಡೀಸ್​ನ ಚಂದ್ರಪಾಲ್ ಮತ್ತು ಕ್ಯಾಮರೂನ್ ಕಫಿ ವಿಕೆಟ್ ಕಬಳಿಸುವುದು ಸಾಧ್ಯವಾಗಲಿಲ್ಲ. ಟೆಸ್ಟ್​ನ ಇನಿಂಗ್ಸ್ ಒಂದರಲ್ಲಿ ಎಲ್ಲ ಹನ್ನೊಂದು ಆಟಗಾರರು ಬೌಲಿಂಗ್ ಮಾಡಿದ್ದು ಇತಿಹಾಸದಲ್ಲೇ ಅದು 3ನೇ ಬಾರಿಯಾಗಿತ್ತು. ಅದಕ್ಕೆ ಮುನ್ನ 1884ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಹಾಗೂ 1980ರಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ಈ ಪ್ರಯೋಗ ಮಾಡಿದ್ದವು.

    ವಿಂಡೀಸ್ ನೆಲಕ್ಕೆ ಭಾರತದ ಪೂರ್ವ ಪ್ರವಾಸಗಳಲ್ಲಿ ಅವಿಸ್ಮರಣೀಯ ಸಾಧನೆಗಳು ಹಲವಾರು. 1971ರ ಪ್ರವಾಸದಲ್ಲಿ ದಿಲೀಪ್ ಸರ್ದೇಸಾಯಿ ದ್ವಿಶತಕ, ನವಜೋತ್ ಸಿಧು 1997ರಲ್ಲಿ ಟ್ರಿನಿಡಾಡ್​ನಲ್ಲಿ ಸಿಡಿಸಿದ ಚೊಚ್ಚಲ ಟೆಸ್ಟ್ ದ್ವಿಶತಕ, ವೇಗಿ ಜಸ್​ಪ್ರೀತ್ ಬುಮ್ರಾ 2019ರಲ್ಲಿ ಜಮೈಕಾದಲ್ಲಿ ಹ್ಯಾಟ್ರಿಕ್ ಸಹಿತ 27ಕ್ಕೆ 6 ವಿಕೆಟ್ ಕಬಳಿಸಿದ ಸಾಧನೆ, ವಿರಾಟ್ ಕೊಹ್ಲಿ 2016ರಲ್ಲಿ ಆಂಟಿಗಾದಲ್ಲಿ ಬಾರಿಸಿದ ಚೊಚ್ಚಲ ಟೆಸ್ಟ್ ದ್ವಿಶತಕ, ವಾಸಿಂ ಜಾಫರ್ 2006ರಲ್ಲಿ ಆಂಟಿಗಾದಲ್ಲಿ ಗಳಿಸಿದ ಹೋರಾಟದ ದ್ವಿಶತಕ… ಒಂದೇ ಎರಡೇ..? ವಿಂಡಿಸ್ ನೆಲದಲ್ಲಿ ಭಾರತೀಯರಿಗೆ ಚೇತೋಹಾರಿ ನೆನಪುಗಳು ಅನೇಕ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts