More

    ಮನೋಲ್ಲಾಸ | ವಿನಯವಿದ್ದರೆ ಮಾತ್ರ ವಿಜಯ

    ಮನೋಲ್ಲಾಸ | ವಿನಯವಿದ್ದರೆ ಮಾತ್ರ ವಿಜಯ| ಡಾ.ಕೆ.ಪಿ.ಪುತ್ತೂರಾಯ

    ಒಮ್ಮೆ ಬಾಳೆಎಲೆ, ಕರಿಬೇವು ಸೊಪ್ಪಿನ ಎಲೆ ಮತ್ತು ವೀಳ್ಯೆದೆಲೆಗಳ ಮಧ್ಯೆ- ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದರ ಬಗ್ಗೆ ಚರ್ಚೆಯಾಯಿತಂತೆ. ಬಾಳೆಎಲೆ ಹೇಳಿತು- ‘ಮದುವೆ ಮುಂಜಿಗಳ, ಹಬ್ಬಗಳ ಮೃಷ್ಟಾನ್ನ ಊಟ ಸವಿಯಲು ನಾನೇ ಬೇಕು. ವಿಧವಿಧವಾದ ಭಕ್ಷ್ಯಭೋಜ್ಯಗಳನ್ನು ನನ್ನ ಮೇಲೆ ಹರಡಿ, ಬಂದ ಅತಿಥಿಗಳಿಗೆ ಉಣಿಸಿದಾಗ ಮಾತ್ರ ಅವರಿಗೆ ಸಂತೃಪ್ತಿ. ಆದುದರಿಂದ ನಾನೇ ಶ್ರೇಷ್ಠ’. ಇದನ್ನು ಕೇಳಿದ ಕರಿಬೇವು ಸೊಪ್ಪಿನ ಎಲೆ ಹೇಳಿತು- ‘ನೀನೇನು ಮಹಾಶ್ರೇಷ್ಠ! ಜನ ಊಟವಾಗುವವರೆಗೆ ನಿನ್ನನ್ನು ಉಪಯೋಗಿಸುತ್ತಾರೆ. ಊಟ ಮುಗಿದಾಕ್ಷಣ ಎತ್ತಿ ಕಸದ ತಿಪ್ಪೆಗೆ ಹಾಕುತ್ತಾರೆ. ಆದರೆ ನಾನಾದರೋ ಯಾವುದೇ ಅಡಿಗೆಯ ಅಂತ್ಯದಲ್ಲಿ ಹಾಕುವ ಒಗ್ಗರಣೆಗೆ ಬೇಕೇಬೇಕು. ನಾನಿದ್ದರೆ ಮಾತ್ರ ಅಡಿಗೆಗೊಂದು ರುಚಿ ಅಲ್ಲವೇ? ಆದುದರಿಂದ ನಾನೇ ಶ್ರೇಷ್ಠ’. ಉತ್ತರವಾಗಿ ಬಾಳೆಎಲೆ ಹೇಳಿತು- ‘ಒಗ್ಗರಣೆ ಹಾಕುವ ವೇಳೆ ನಿನ್ನನ್ನು ಉಪಯೋಗಿಸುತ್ತಾರೆ. ಆದರೆ ಊಟದ ವೇಳೆ ನಿನ್ನನ್ನು ಹುಡುಕಿ ಹುಡುಕಿ ಎತ್ತಿ ಎಲೆಯ ಮೂಲೆಯಲ್ಲಿಡುತ್ತಾರೆ. ಯಾರಿಗೂ ನೀನು ಬೇಡ ಅಂದಮೇಲೆ ನನಗಿಂತ ಶ್ರೇಷ್ಠವಾಗಲು ಹೇಗೆ ಸಾಧ್ಯ?’ ಇವರಿಬ್ಬರ ಮಾತುಗಳನ್ನು ಕೇಳಿಸಿಕೊಂಡ ವೀಳ್ಯದೆಲೆ, ‘ಹೊಟ್ಟೆತುಂಬ ಉಂಡಮೇಲೆ ಉಂಡದ್ದನ್ನು ಜೀರ್ಣಿಸಿಕೊಳ್ಳಲು ಹಾಕಿಕೊಳ್ಳುವ ತಾಂಬೂಲದಲ್ಲಿ ಯಾರನ್ನು ಇಟ್ಟಿರುತ್ತಾರೆ? ನನ್ನನ್ನಲ್ಲವೇ? ತಾಂಬೂಲ ಹಾಕಿಕೊಂಡು ತುಟಿ ಕೆಂಪಗೆ ಮಾಡಿಕೊಂಡಾಗ ಸಿಗುವ ಆನಂದಕ್ಕೆ ಎಣೆಯುಂಟೇ? ಆದುದರಿಂದ ನಾನೇ ಶ್ರೇಷ್ಠ!’ ಈ ಮಾತನ್ನು ಕೇಳಿ ಬಾಳೆಲೆ ಮತ್ತು ಕರಿಬೇವಿನ ಎಲೆ ಒಟ್ಟಾಗಿ ಹೇಳಿದವು- ‘ಊಟವಾದ ಮೇಲೆ ಜನ ನಿನ್ನನ್ನು ಬಾಯಿಯೊಳಗೆ ಸುಣ್ಣ ಅಡಕೆಯೊಂದಿಗೆ ತುರುಕುತ್ತಾರೇನೋ ನಿಜ. ನಂತರ ನಿನ್ನೊಳಗಿನ ಜೀವರಸ ಜಗಿದು, ಕೊನೆಗೆ ದಾರಿಮೇಲೆ ಉಗುಳಿ ಬಿಡುತ್ತಾರಲ್ಲವೇ? ನಿನ್ನ ಜೀವನ ಅಷ್ಟೆ. ಆದುದರಿಂದ ನೀನು ಶ್ರೇಷ್ಠನಾಗಲು ಸಾಧ್ಯವೇ ಇಲ್ಲ’. ಅಷ್ಟರಲ್ಲಿ ಮೂಲೆಯಲ್ಲಿದ್ದ ತುಳಸೀ ದಳದ ಎಲೆಗಳನ್ನು ಭಕ್ತನೊಬ್ಬ ಜೋಡಿಸಿ ಭಗವಂತನ ಪಾದಕಮಲಗಳ ಮೇಲಿಟ್ಟು ಉಳಿದ ಎಲೆಗಳಿಗೆ ಹೇಳಿದನಂತೆ- ‘ನೀವುಗಳೆಲ್ಲ ನಿಮ್ಮ ಬಗ್ಗೆ ಅಹಂಕಾರಪಟ್ಟಿರಿ. ಅಹಂಕಾರ ಪಟ್ಟು ಏನಾಯಿತು? ಓ ಬಾಳೆಲೆಯೇ ನೀನು ತಿಪ್ಪೆಗೆ ಸೇರಿದೆ; ಕರಿಬೇವಿನ ಎಲೆ ಮೂಲೆಗೆ ಸೇರಿದೆ ಮತ್ತು ವೀಳ್ಯೆದೆಲೆ ನೀನಂತೂ ಬೀದಿಪಾಲಾದೆ. ಆದರೆ ತುಳಸಿ ಎಲೆ ತನ್ನ ಬಗ್ಗೆ ಎಂದೂ ಏನೂ ಹೇಳಿಕೊಳ್ಳಲಿಲ್ಲ. ಅಹಂಕಾರ ಪಡದ ತುಳಸಿ ಭಗವಂತನ ಪೂಜೆಗೆ ಬೇಕಾಯಿತು. ಅವನ ಪಾದ ಸೇರಿತು. ಈಗ ಹೇಳಿ ನಿಮ್ಮಲ್ಲಿ ಸರ್ವಶ್ರೇಷ್ಠರು ಯಾರೆಂದು! ಆದುದರಿಂದ ನಾನೇ ಶ್ರೇಷ್ಠವೆಂಬ ಅಹಂಕಾರವನ್ನು ಬಿಟ್ಟು ಬಿಡಿ’.

    ‘ನಾನು’ ಎಂಬುದು ಮನುಷ್ಯನ ಮೊದಲ ಹೆಸರು. ‘ನಾನು’ ಎಂಬ ಮೂಲಶಬ್ದದಿಂದ ಹುಟ್ಟಿದ ಕೆಟ್ಟ ಕೂಸುಗಳೆಂದರೆ ‘ನಾನೇ, ನನ್ನದೇ-ನನ್ನಿಂದಲೇ-ನಾನೊಬ್ಬನೇ-ನನಗಾಗಿಯೇ’ ಇತ್ಯಾದಿ. ಒಟ್ಟಿನಲ್ಲಿ ಅಹಂಕಾರ ಪಟ್ಟರೆ ಉಳಿಗಾಲವಿಲ್ಲ. ಆದುದರಿಂದ ವಿನಯವಿದ್ದರೆ ಮಾತ್ರ ವಿಜಯ.

    (ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts