More

    ಮನೋಲ್ಲಾಸ | ಜೀವನದ ಹಾದಿಯಲ್ಲಿ ಸಾಗುವಾಗ…

    ಮನೋಲ್ಲಾಸ | ಜೀವನದ ಹಾದಿಯಲ್ಲಿ ಸಾಗುವಾಗ...| ಭಾರತಿ ಎ. ಕೊಪ್ಪ
    ಅವನೊಬ್ಬ ಪರಿಪೂರ್ಣ ವಾಹನ ಚಾಲಕ. ಬಹಳ ವರ್ಷಗಳಿಂದ ಬಸ್ ಚಾಲನೆ ಮಾಡುತ್ತಿದ್ದ. ಆತನ ಬಸ್ಸಿನಲ್ಲಿ ಪ್ರತಿದಿನ ಪ್ರಯಾಣಿಸುವವರಿಗೆಲ್ಲರಿಗೂ ಅವನ ಚಾಲನೆಯಲ್ಲಿ ವಿಶೇಷ ನಂಬಿಕೆ ಹಾಗೂ ಅವನ ಜೊತೆಯ ಪ್ರಯಾಣ ನಿರಾಳವಾದದ್ದು ಎಂಬ ದೃಢವಿಶ್ವಾಸ. ಚಾಲಕನಿಗೂ ಅಷ್ಟೇ- ಪ್ರತಿದಿನ ಸಾಗುವ ಮಾರ್ಗದಲ್ಲಿನ ತಿರುವುಗಳು, ರಸ್ತೆಯ ಇಕ್ಕೆಲಗಳ ಪರಿಸರ ಎಲ್ಲವೂ ಅಭ್ಯಾಸವಾಗಿದ್ದವು. ಹೀಗಾಗಿ ಆತ ಯಾವುದೇ ಪ್ರಯಾಸವಿಲ್ಲದೆ ತನ್ನ ಕರ್ತವ್ಯ ನಿಭಾಯಿಸುತ್ತಿದ್ದ.

    ಆದರೆ, ಏಕತಾನತೆಯ ಕೆಲಸ ಮತ್ತು ಜೀವನಶೈಲಿ ಆತನ ಜಾಗೃತಪ್ರಜ್ಞೆಯನ್ನು ಮಂಕಾಗಿಸುವಂತೆ ಮಾಡಿತು. ಹೇಗಿದ್ದರೂ ಇದು ತಾನು ಪ್ರತಿದಿನ ಚಲಿಸುವ ಮಾರ್ಗ ಎಂಬ ಮೈಮರೆಯುವಿಕೆ ಆತನಲ್ಲಿ ಮೂಡಿತು. ಇದ್ದಕ್ಕಿದ್ದಂತೆ ಒಂದು ದಿನ ಕಡಿದಾದ ತಿರುವಿನಲ್ಲಿ ಬಸ್ಸು ಸ್ವಲ್ಪ ಪ್ರಮಾಣದಲ್ಲಿ ಮಗುಚಿ ಬಿದ್ದಿತು. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದವು. ಚಾಲಕನಿಗೂ ಪೆಟ್ಟಾಯಿತು. ಸುಧಾರಿಸಿಕೊಳ್ಳಲು ಕೆಲದಿನಗಳು ಬೇಕಾದವು. ಅಪಘಾತದ ಕಾರಣವನ್ನು ಆತ ಪರಾಮರ್ಶೆ ಮಾಡಿದಾಗ ತನ್ನಲ್ಲಿನ ಜಾಗೃತಪ್ರಜ್ಞೆ ಕುಂಠಿತವಾಗಿ, ಮೈಮರೆತ ಕಾರಣದಿಂದ ಅಪಘಾತವಾಯಿತು ಎಂಬ ಅರಿವು ಮೂಡಿತು.

    ಇಂತಹ ಘಟನೆಗಳು ನಮ್ಮ ಜೀವನದಲ್ಲಿಯೂ ಹಲವು ಬಾರಿ ಬಂದೊದಗುತ್ತವೆ. ‘ನನ್ನ ಜೀವನದ ಹಾದಿ ಬಹಳ ಚೆನ್ನಾಗಿದೆ. ಯಾವ ಸಮಸ್ಯೆಯೂ ಇಲ್ಲ. ಎಲ್ಲವೂ ಸಹಜವಾಗಿ ಸಾಗುತ್ತಿದೆ ಮತ್ತು ಮುಂದೆಯೂ ಸಹಜವಾಗಿಯೇ ಸಾಗುತ್ತದೆ’ ಎಂದು ಒಮ್ಮೊಮ್ಮೆ ಜಾಗೃತಪ್ರಜ್ಞೆಯಿಂದ ವಿಚಲಿತರಾಗುತ್ತೇವೆ. ಜೀವನವೆಂಬ ಯಾನದಲ್ಲಿ ಸುಖ-ಸಂತೋಷದ ದಿನಗಳಲ್ಲಿ ಮೈಮರೆತು, ಸಾಗಿಬಂದ ತಿರುವುಗಳನ್ನು ಮರೆಯುತ್ತೇವೆ. ಮುಂದೆ ಸಾಗುವ ಹಾದಿಯಲ್ಲಿನ ತಿರುವುಗಳನ್ನೂ ಎಚ್ಚರಿಕೆಯಿಂದ ಗಮನಿಸುವುದಿಲ್ಲ. ಈ ರೀತಿಯ ಸಣ್ಣ ಉದಾಸೀನ ಜೀವನದ ಹಾದಿಯಲ್ಲಿ ದೊಡ್ಡ ಆಘಾತವನ್ನೇ ತಂದೊಡ್ಡಬಹುದು. ನಮ್ಮ ಜೊತೆಯಲ್ಲಿ ಸಾಗುವವರಿಗೂ ಅದು ಹಿನ್ನಡೆ ತರಬಹುದು.

    ನಮ್ಮೊಳಗಿನ ದೂರದೃಷ್ಟಿ, ನಂಬಿಕೆ, ಕರ್ತವ್ಯಪ್ರಜ್ಞೆ ಸದಾ ಜಾಗೃತವಾಗಿರಬೇಕು. ಆಗ ಮಾತ್ರ ಅನಿರೀಕ್ಷಿತವಾಗಿ ಬಂದೊದಗುವ ಅಡೆತಡೆಗಳು ಸುಲಲಿತವಾಗಿ ದೂರವಾಗುತ್ತವೆ. ಅದರಿಂದಾಗಿ ಜೀವನದ ಗುರಿಯನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ತಲುಪಲು ಸಾಧ್ಯವಾಗುತ್ತದೆ. ಒಂದೊಮ್ಮೆ ಅಜಾಗ್ರತೆಯಿಂದ ಜೀವನದ ಯಾವುದೇ ಹಂತದಲ್ಲಿ ಸೋಲೆಂಬ ಪ್ರಪಾತಕ್ಕೆ ಬಿದ್ದರೂ, ಅದನ್ನು ಸುಧಾರಿಸಿಕೊಂಡು ಮೇಲೇಳಲು ಹಲವು ವರ್ಷಗಳೇ ಬೇಕಾಗಬಹುದು. ಅದರಿಂದ ಬದುಕಿನ ಯಶಸ್ಸಿನ ಓಟಕ್ಕೆ ನಾವೇ ಹಿನ್ನಡೆ ತಂದುಕೊಂಡಂತಾಗುತ್ತದೆ. ಬದುಕಿನ ಗುರಿಯೆಂಬ ದಿಗಂತವನ್ನು ಯಶಸ್ವಿಯಾಗಿ ತಲುಪಲು ನಮ್ಮೊಳಗಿನ ಅಂತಃಶಕ್ತಿ, ಕಾರ್ಯತತ್ಪರತೆ, ದೂರದೃಷ್ಟಿ ಇವೆಲ್ಲವು ಸದಾ ಜಾಗೃತವಾಗಿರಬೇಕು, ಚಲನಶೀಲವಾಗಿರಬೇಕು.

    ‘ಮನುಷ್ಯನಿಗೆ ಬೇರೆ ಯಾವ ಸಹಾಯವೂ ದೊರಕದು. ಹಿಂದೆ ಅದು ಇರಲಿಲ್ಲ, ಈಗಲೂ ಅದು ದೊರಕದು, ಮುಂದೆಯೂ ಅದು ದೊರಕುವುದಿಲ್ಲ. ನಿನ್ನ ಸಂಕಷ್ಟಗಳಿಂದ ಪಾರುಮಾಡಿಕೊಳ್ಳಬೇಕಾದವನು ನೀನೆ!’ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ, ಜೀವನದ ಅಡೆತಡೆಗಳನ್ನು ಎಚ್ಚರಿಕೆಯಿಂದ ನಿಭಾಯಿಸುತ್ತ, ನೆಮ್ಮದಿಯಿಂದ ಯಶಸ್ವಿಯಾಗಿ ಜೀವನದ ಗುರಿ ತಲುಪೋಣವಲ್ಲವೆ?

    (ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts