More

    ಅಂಬಾಗಿಲು, ಮಣಿಪಾಲ ರಸ್ತೆ ಚತುಷ್ಪಥ, 25 ಕೋಟಿ ರೂ.ವೆಚ್ಚದ ಕಾಮಗಾರಿ

    ಗೋಪಾಲಕೃಷ್ಣ ಪಾದೂರು

    ಉಡುಪಿ: ಮಣಿಪಾಲದಿಂದ ಸಂತೋಷನಗರ ಪೆರಂಪಳ್ಳಿ ಮಾರ್ಗವಾಗಿ ಅಂಬಾಗಿಲು ಸಂಪರ್ಕಿಸುವ ರಸ್ತೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಉಡುಪಿಯಲ್ಲಿ ಮೊದಲ ಬಾರಿ ಅಭಿವೃದ್ಧಿ ಹಕ್ಕುಗಳನ್ನು ವರ್ಗಾಯಿಸುವ (ಟಿಡಿಆರ್) ಪ್ರಕ್ರಿಯೆ ಮೂಲಕ ಖಾಸಗಿ ಭೂಮಾಲೀಕರಿಂದ ಭೂಸ್ವಾಧೀನ ಮಾಡಿಕೊಳ್ಳಲು ಲೋಕೋಪಯೋಗಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

    ಅಂಬಾಗಿಲಿನಿಂದ-ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲವರೆಗಿನ 3.90 ಕಿ.ಮೀ. ರಸ್ತೆಯನ್ನು ಮಧ್ಯಮ ಪಥದಿಂದ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಟೆಂಡರ್ ಪೂರ್ಣಗೊಂಡಿದೆ. 30 ಮೀ. ಅಗಲದಲ್ಲಿ ನಿರ್ಮಾಣವಾಗಲಿರುವ ಈ ಕಾಮಗಾರಿಗೆ 197 ಸರ್ವೇ ನಂಬರ್‌ಗಳ 7.32 ಎಕರೆ ಜಮೀನು ಅಗತ್ಯವಾಗಿದ್ದು, ಸಂತ್ರಸ್ತರಿಗೆ ಪರಿಹಾರದ ಬದಲು ಟಿಡಿಆರ್ ಸರ್ಟಿಫಿಕೆಟ್ ನೀಡಲು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

    ಏನಿದು ಟಿಡಿಆರ್?: ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆ ರಸ್ತೆ ವಿಸ್ತರಣೆ ಸಂದರ್ಭ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ಧನದ ಬದಲು ನಗರಾಭಿವೃದ್ಧಿ ಪ್ರಾಧಿಕಾರದಿಂದ ಡಿಆರ್(ಡೆವಲಪ್‌ಮೆಂಟ್ ರೈಟ್ಸ್) ಸರ್ಟಿಫಿಕೆಟ್ ನೀಡಲಾಗುತ್ತದೆ. ಉಡುಪಿಯಲ್ಲಿ ಮೊದಲ ಬಾರಿ ಟಿಡಿಆರ್ ಪ್ರಕ್ರಿಯೆ ಮೂಲಕ ಜಮೀನುಗಳನ್ನು ಪಡೆದು ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಭೂ ಮಾಲೀಕರಿಗೆ 1 ಸೆಂಟ್ಸ್‌ಗೆ 1.5 ಸೆಂಟ್ಸ್‌ನಷ್ಟು ಅಭಿವೃದ್ಧಿ ಹಕ್ಕುಗಳು ಲಭಿಸಲಿದೆ. ಕಟ್ಟಡ ನಿರ್ಮಾಣ ಸಂದರ್ಭ ಎಫ್‌ಎಆರ್(ಫ್ಲೋರ್ ಏರಿಯಾ ರೇಶಿಯೊ) ಹೆಚ್ಚು ಲಭಿಸುತ್ತದೆ. ಈ ಹಕ್ಕುಪತ್ರವನ್ನು ಮಕ್ಕಳಿಗೂ ವರ್ಗಾಯಿಸಬಹುದಾಗಿದ್ದು, ಸಮಯ ಮಿತಿ ಹೊಂದಿಲ್ಲ. ಅಲ್ಲದೆ ಡಿಆರ್ ಹಕ್ಕುಪತ್ರ ಮಾರಾಟ ಮಾಡಲು ಅವಕಾಶವಿದೆ. ಭೂಮಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತಿದ್ದು, ರಸ್ತೆ ವಿಸ್ತರಣೆ ಸಂದರ್ಭ ತೆರವುಗೊಳಿಸಲಾಗುವ ಕಟ್ಟಡ ಮತ್ತು ಕಾಂಪೌಂಡ್ ಗೋಡೆಗಳಿಗೆ ಪರಿಹಾರ ನೀಡಲಾಗುತ್ತಿದೆ.

    ಟ್ರಾಫಿಕ್ ಒತ್ತಡಕ್ಕೆ ಬ್ರೇಕ್: ಪ್ರಸ್ತುತ ಕುಂದಾಪುರದಿಂದ ಬರುವ ವಾಹನಗಳು ಅಂಬಾಗಿಲು ರಸ್ತೆಯಲ್ಲಿ ಕಲ್ಸಂಕಕ್ಕೆ ಬಂದು ಮಣಿಪಾಲಕ್ಕೆ ತೆರಳುತ್ತಿವೆ. ಇದರಿಂದ ನಗರದಲ್ಲಿ ಸಂಚಾರ ಒತ್ತಡ ಹೆಚ್ಚುತ್ತಿದೆ. ಅಂಬಾಗಿಲು ಪೆರಂಪಳ್ಳಿ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಕುಂದಾಪುರ, ಭಟ್ಕಳದಿಂದ ಆಗಮಿಸುವ ಆಂಬುಲೆನ್ಸ್ ಸಹಿತ ಇತರ ವಾಹನಗಳು ನಗರವನ್ನು ಸಂಪರ್ಕಿಸದೆ ನೇರವಾಗಿ ಮಣಿಪಾಲಕ್ಕೆ ತೆರಳಲು ಅನುಕೂಲವಾಗಲಿದೆ. ಹೀಗಾಗಿ ಈ ರಸ್ತೆಯನ್ನು ರಿಂಗ್‌ರೋಡ್ ಎಂದು ಪರಿಗಣಿಸಿ ಅಭಿವೃದ್ಧಿಪಡಿಸಲಾಗುತ್ತಿದೆ.

    ಅಂಬಾಗಿಲು-ಮಣಿಪಾಲ ರಸ್ತೆ ಚತುಷ್ಪಥ ಕಾಮಗಾರಿಗೆ 16 ಕೋಟಿ ರೂ. ಬಿಡುಗಡೆಯಾಗಿ, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಟಿಡಿಆರ್ ಮೂಲಕ ಭೂ ಸ್ವಾಧೀನಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದ್ದು, ಅಗತ್ಯ ಜಾಗದ ಸರ್ವೇ ನಂಬರ್ ಸಹಿತ ವಿವರಗಳ ಅಧಿಸೂಚನೆ ಹೊರಡಿಸಲಾಗುವುದು.

    ಜಗದೀಶ್ ಭಟ್
    ಸಹಾಯಕ ಕಾರ್ಯನಿರ್ವಾಹಕ ಅಭಿಯಂತ
    ಲೋಕೋಪಯೋಗಿ ಇಲಾಖೆ, ಉಡುಪಿ ವಿಭಾಗ

    25 ಕೋಟಿ ರೂ. ವೆಚ್ಚದಲ್ಲಿ ಅಂಬಾಗಿಲು-ಮಣಿಪಾಲ ರಸ್ತೆ ಚತುಷ್ಪಥ ಕಾಮಗಾರಿ ನಡೆಯಲಿದೆ. ರಸ್ತೆಗಾಗಿ ಭೂಮಿ ಕಳೆದುಕೊಳ್ಳುವವರಿಗೆ ಡಿಆರ್ ಹಕ್ಕುಪತ್ರ ನೀಡಲು ನಿರ್ಧರಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ರಸ್ತೆ ಮಧ್ಯಭಾಗದಿಂದ 15 ಮೀಟರ್ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು. ಬೇರೆ ಸಂದರ್ಭ ಜನ ಇದನ್ನು ಉಚಿತವಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಬೇಕು. ಪ್ರಸ್ತುತ ಪ್ರಾಧಿಕಾರ ಭೂ ಮಾಲೀಕರಿಗೆ ಡಿಆರ್ ಸರ್ಟಿಫಿಕೇಟ್ ನೀಡುತ್ತದೆ. ಇದರಿಂದ ಕಟ್ಟಡ ನಿರ್ಮಿಸುವವರಿಗೆ ಹೆಚ್ಚುವರಿ ಸ್ಥಳಾವಕಾಶ ಲಭಿಸಲಿದ್ದು, ಪರಿಹಾರ ಧನಕ್ಕಿಂತ ಹೆಚ್ಚಿನ ಪ್ರಯೋಜನವಿದೆ.

    ಕೆ.ರಘುಪತಿ ಭಟ್
    ಶಾಸಕ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts