More

    ತೀವ್ರತೆ ಕಳೆದುಕೊಂಡ ಮಳೆ, ಕರಾವಳಿಯ ನದಿಗಳಲ್ಲಿ ನೀರಿನ ಮಟ್ಟ ಇಳಿಕೆ

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ನೈಋತ್ಯ ಮುಂಗಾರು ತೀವ್ರತೆ ಕಳೆದುಕೊಂಡಿದೆ. ಮಂಗಳವಾರ ಸಾಮಾನ್ಯ ಮಳೆ, ಮೋಡ ಮುಸುಕಿದ ಬಿಸಿಲಿನ ವಾತಾವರಣ ಕಂಡುಬಂತು. ಘಟ್ಟದ ತಪ್ಪಲಿನ ಭಾಗದಲ್ಲಿ ಸ್ವಲ್ಪ ಮಳೆ ಸುರಿದಿದೆ.

    ದ.ಕ.ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಬುಧವಾರವೂ ಯೆಲ್ಲೊ ಅಲರ್ಟ್ ಮುಂದುವರಿಯಲಿದ್ದು, ಸಾಮಾನ್ಯ ಮಳೆ ನಿರೀಕ್ಷೆಯಿದೆ. ಸಮುದ್ರದಲ್ಲಿ ಗಾಳಿ ಕಡಿಮೆ ಆಗದ ಕಾರಣ, ಸಣ್ಣ ಮಳೆಯಾದರೂ ಬಲವಾದ ಗಾಳಿ ಬೀಸುತ್ತಿದೆ. 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಮಂಗಳವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 34.4, ಬೆಳ್ತಂಗಡಿ 40.7, ಮಂಗಳೂರು 52.5, ಪುತ್ತೂರು 34.5, ಸುಳ್ಯ 29.1ಮಿ.ಮೀ. ಸೇರಿದಂತೆ ಸರಾಸರಿ 38.2 ಮಿ.ಮೀ. ಮಳೆ ಸುರಿದಿದೆ.

    ಉಡುಪಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಂಗಳವಾರ ಬಿಸಿಲ ವಾತಾವರಣದ ನಡುವೆ ಸಾಧಾರಣ ಮಳೆಯಾಗಿದೆ. ಸೋಮವಾರ ತಡರಾತ್ರಿ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಐದು ಮನೆಗಳಿಗೆ ಸೇರಿದಂತೆ ಹಲವು ಕಡೆಗಳಲ್ಲಿ ಬೆಳೆಗಳಿಗೆ ಹಾನಿ ಸಂಭವಿಸಿದೆ.
    ಹಂಗಳೂರು, ಹೇರಾಡಿ, ಪಾರಂಪಳ್ಳಿ, ನೀಲಾವರ, ಶಿರೂರಿನಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಹೆಬ್ರಿ ಮಡಾಮಕ್ಕಿ ಪರಿಸರದಲ್ಲಿ ಐವರು ಕೃಷಿಕರಿಗೆ ಸಂಬಂಧಿಸಿದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

    ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಸೌಪರ್ಣಿಕಾ, ಸ್ವರ್ಣಾ, ಸೀತಾ ನದಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಬಜೆ ಡ್ಯಾಂನಲ್ಲಿ ಸ್ವರ್ಣಾ ನದಿ ನೀರಿನ ಮಟ್ಟ 8.5 ರಿಂದ 6.65ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ 82.6 ಕುಂದಾಪುರ 52.5, ಕಾರ್ಕಳ 68ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 64 ಮಿ.ಮೀ. ಮಳೆಯಾಗಿದೆ.

    ಕಾಸರಗೋಡಿನಲ್ಲಿ ಆರೆಂಜ್ ಅಲರ್ಟ್
    ಕುಂಬಳೆ: ಜಿಲ್ಲೆಯಲ್ಲಿ ಮಂಗಳವಾರ ಸಾಮಾನ್ಯ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ.ವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಆರೆಂಜ್ ಎಚ್ಚರಿಕೆ ನೀಡಿದೆ. ನದಿಗಳಲ್ಲಿ ಪ್ರವಾಹ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮೀನುಗಾರಿಕೆ ಅಥವಾ ಇತರ ಉದ್ದೇಶಗಳಿಗಾಗಿ ನದಿಗಳನ್ನು ದಾಟಬಾರದು ಅಥವಾ ನದಿ ಹಾಗೂ ಇತರ ಜಲಮೂಲಗಳಲ್ಲಿ ಸ್ನಾನ ಮಾಡಬಾರದು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts