More

    ಜಾರಿಯಾಗದ ಮನಪಾ ನಿರ್ಣಯ

    ಹರೀಶ್ ಮೋಟುಕಾನ ಮಂಗಳೂರು

    ಮಹಾನಗರಪಾಲಿಕೆಯಲ್ಲಿ ಕುಡಿಯುವ ನೀರಿನ ದರ ಹಾಗೂ ಘನ ತ್ಯಾಜ್ಯ ತೆರಿಗೆ ಇಳಿಕೆ ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಸಭೆಯಲ್ಲಿ ಅಂಗೀಕಾರಗೊಂಡ ಈ ಮಹತ್ವದ ನಿರ್ಧಾರ ನಾಲ್ಕು ತಿಂಗಳು ಕಳೆದರೂ ಜಾರಿಗೆ ಬಂದಿಲ್ಲ. ದರ ಇಳಿಕೆಯ ಲಾಭ ಇನ್ನೂ ಜನರಿಗೆ ಲಭ್ಯವಾಗಿಲ್ಲ.
    ಜನಸಾಮಾನ್ಯರಿಗೆ ಹೊರೆಯಾಗಿದ್ದ ಕುಡಿಯುವ ನೀರಿನ ದರ ಹಾಗೂ ಘನ ತ್ಯಾಜ್ಯ ತೆರಿಗೆ ಇಳಿಸುವ ಬಗ್ಗೆ ಮೇಯರ್ ದಿವಾಕರ ಪಾಂಡೇಶ್ವರ ಅಧಿಕಾರ ಸ್ವೀಕರಿಸಿದಾಗ ಘೋಷಣೆ ಮಾಡಿದ್ದರು. ಬಳಿಕ ಕರೊನಾದಿಂದಾಗಿ ಮನಪಾ ಸಭೆ ನಡೆದಿರಲಿಲ್ಲ. ಆಗಸ್ಟ್‌ನಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದವರ ಸಹಮತದೊಂದಿಗೆ ಈ ನಿರ್ಧಾರಕ್ಕೆ ಅಂಗೀಕಾರ ನೀಡಲಾಗಿತ್ತು.

    ನೀರಿನ ದರ ಹಾಗೂ ಘನ ತ್ಯಾಜ್ಯ ತೆರಿಗೆ ಇಳಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಇನ್ನೂ ಅನುಮೋದನೆ ಸಿಗದ ಕಾರಣ ಜಾರಿ ವಿಳಂಬವಾಗಿದೆ ಎನ್ನುವುದು ಪಾಲಿಕೆ ವಾದ. ರಾಜ್ಯದಲ್ಲಿ ತಮ್ಮದೇ ಸರ್ಕಾರ ಇರುವಾಗ ಆಡಳಿತ ಪಕ್ಷದ ಶಾಸಕರು, ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಮಂಗಳೂರಿನವರೇ ಇರುವಾಗ ಅನುಮೋದನೆ ಪಡೆಯಲು ಯಾಕೆ ಸಾಧ್ಯವಾಗಿಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

    ಇಳಿಕೆಯಾದ ನೀರಿನ ದರ: ಕಳೆದ ಬಾರಿ 8 ಸಾವಿರ ಲೀಟರ್ ತನಕ(ಪ್ರತಿ ಸಾವಿರ ಲೀ. ಬಳಕೆಗೆ) 7 ರೂ., 8ರಿಂದ 15 ಸಾವಿರ ಲೀ.ಗೆ 9 ರೂ., 15ರಿಂದ 25 ಸಾವಿರ ಲೀ.ಗೆ 11 ರೂ., ಹಾಗೂ 25 ಸಾವಿರ ಲೀ.ಗಿಂತ ಅಧಿಕ ಬಳಕೆಗೆ 13 ರೂ. ನಿಗದಿಪಡಿಸಲಾಗಿತ್ತು. ಪ್ರಸ್ತುತ ಮಾಸಿಕ ಕನಿಷ್ಠ ದರ 60 ರೂ.ಗೆ ನಿಗದಿಪಡಿಸಿ 10 ಸಾವಿರ ಲೀ.ತನಕ ಬಳಕೆಗೆ(ಪ್ರತಿ ಸಾವಿರ ಲೀಟರ್‌ಗೆ) 6 ರೂ., 10ರಿಂದ 15 ಸಾವಿರ ಲೀ.ಗೆ 7ರೂ., 15 ಸಾವಿರದಿಂದ 20 ಸಾವಿರ ಲೀ.ಗೆ 9 ರೂ., 20 ಸಾವಿರದಿಂದ 30 ಸಾವಿರ ಲೀ.ಬಳಕೆಗೆ 11 ರೂ., ಹಾಗೂ 30 ಸಾವಿರ ಲೀ.ಗಿಂತ ಹೆಚ್ಚಿನ ಬಳಕೆಗೆ 13 ರೂ. ನಿಗದಿಪಡಿಸಲಾಗಿದೆ.

    ಘನ ತ್ಯಾಜ್ಯ ತೆರಿಗೆ ಇಳಿಕೆ: ಆಸ್ತಿ ತೆರಿಗೆಯೊಂದಿಗೆ ವಿಧಿಸಲಾಗಿರುವ ಘನ ತ್ಯಾಜ್ಯ ಉಪಕರದಲ್ಲಿ 500 ಚ.ಅಡಿವರೆಗಿನ ಆಸ್ತಿ ತೆರಿಗೆಯೊಂದಿಗೆ ವಿಧಿಸಲಾಗಿದ್ದ ಘನತ್ಯಾಜ್ಯ ಉಪಕರವನ್ನು ಈ ಹಿಂದಿನ 50 ರೂ. ಬದಲಿಗೆ 30 ರೂ.ಗೆ, 501 ಚ.ಅಡಿಯಿಂದ 1 ಸಾವಿರ ಚ.ಅಡಿವರೆಗಿನ ಆಸ್ತಿಗಳ ಮೇಲಿನ ಘನತ್ಯಾಜ್ಯ ತೆರಿಗೆಯನ್ನು 75 ರೂ. ನಿಂದ 60 ರೂ., 1001 ಚ.ಅಡಿಯಿಂದ 1500 ಚ.ಅಡಿವರೆಗಿನ ಆಸ್ತಿ ತೆರಿಗೆಯನ್ನು 100 ರೂ.ನಿಂದ 80 ರೂ. ಇಳಿಕೆ ಮಾಡಿ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ.

    ಜನಸಾಮಾನ್ಯರಿಗೆ ಹೊರೆಯಾಗಿದ್ದ ಕುಡಿಯುವ ನೀರಿನ ದರ ಹಾಗೂ ಘನ ತ್ಯಾಜ್ಯ ತೆರಿಗೆ ಇಳಿಕೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲಿ ಅನುಮೋದನೆಗೆ ವಿಳಂಬವಾಗಿರುವುದರಿಂದ ಇನ್ನೂ ಇಳಿಕೆಯಾದ ದರ ಜಾರಿಗೆ ಬಂದಿಲ್ಲ. ಫಾಲೋಅಪ್ ಮಾಡಿ ಶೀಘ್ರ ಅದರ ಲಾಭ ಸಾರ್ವಜನಿಕರಿಗೆ ಸಿಗುವಂತೆ ಮಾಡಲಾಗುವುದು.
    ದಿವಾಕರ ಪಾಂಡೇಶ್ವರ, ಮೇಯರ್

    ಕುಡಿಯುವ ನೀರಿನ ದರ ಹಾಗೂ ಘನತ್ಯಾಜ್ಯ ತೆರಿಗೆ ಇಳಿಕೆ ಘೋಷಣೆ ಮಾಡಿರುವುದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಆಡಳಿತ ಪಕ್ಷದ ಸರ್ಕಾರ ಇರುವಾಗ ನಗರಾಭಿವೃದ್ಧಿ ಇಲಾಖೆಯಲ್ಲಿ ಇಲ್ಲಿಂದ ಕಳುಹಿಸಿದ ನಿರ್ಣಯಕ್ಕೆ ಒಂದು ಸಹಿ ಮಾಡಿಸಲು ಇಷ್ಟೊಂದು ಸಮಯ ಯಾಕಾಗಿ? ಸಚಿವರು, ಶಾಸಕರು ಬೆಂಗಳೂರಿಗೆ ಹೋಗುವಾಗ ಈ ಬಗ್ಗೆ ಯಾಕೆ ಫಾಲೋಅಪ್ ಮಾಡುತ್ತಿಲ್ಲ?
    ಜಿ.ಕೆ.ಭಟ್, ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts