More

    ಆಸ್ತಿ ತೆರಿಗೆ ಪರಿಷ್ಕರಣೆ

    ವಿಜಯವಾಣಿ ಸುದ್ದಿಜಾಲ ಬಂಟ್ವಾಳ

    ಪುರಸಭೆಯಲ್ಲಿ ಆಡಳಿತ ಪಕ್ಷ ತನ್ನ ಮಿತ್ರಪಕ್ಷದ ಸದಸ್ಯರ ಲಿಖಿತ ವಿರೋಧ, ವಿಪಕ್ಷಗಳ ಸಹಮತದೊಂದಿಗೆ 2021-22ನೇ ಸಾಲಿನಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಾಡಳಿತ ನಿರ್ದೇಶಕರ ಸುತ್ತೋಲೆಯಂತೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದ್ದು, ಅದರನ್ವಯ ಖಾಲಿ ಜಾಗಕ್ಕೆ ಶೇ.0.2, ವಾಣಿಜ್ಯಕ್ಕೆ ಶೇ.1 ಹಾಗೂ ವಾಸ್ತವ್ಯಕ್ಕೆ ಶೇ.0.6ರಷ್ಟು ತೆರಿಗೆ ವಿಧಿಸಿ ಜಾರಿಗೆ ತರಲು ಶನಿವಾರ ನಡೆದ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಯಿತು.

    ನೀರಿನ ದರ ಪರಿಷ್ಕರಣೆಯನ್ನು ಸದ್ಯಕ್ಕೆ ತಡೆ ಹಿಡಿದಿದ್ದು, ಯಥಾಸ್ಥಿತಿಯಲ್ಲಿ ಮುಂದುವರಿಯಲು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಯಿತು. ಆಸ್ತಿ ತೆರಿಗೆ ಶುಲ್ಕ ವಿಧಿಸುವ ಕುರಿತಂತೆ ಮಾಹಿತಿಯನ್ನು ಕಂದಾಯ ನಿರೀಕ್ಷಕರು ಸಭೆಯ ಮುಂದಿಟ್ಟರು. ಆರಂಭಿಕ ಹಂತದಲ್ಲಿ ಈ ಸುತ್ತೋಲೆಯನ್ನು ಆಕ್ಷೇಪಿಸಿದ ಸದಸ್ಯ ಜನಾರ್ದನ ಚಂಡ್ತಿಮಾರ್, ಈ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆಯೇ? ಸರ್ಕಾರ ಬೇಕಾದಾಗೆ ಸುತ್ತೋಲೆ ಹೊರಡಿಸುತ್ತದೆ. ನಮಗೆ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಿದ್ದು, ಜನರು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದರು.

    ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಗೋವಿಂದ ಪ್ರಭು ಅವರು ತೆರಿಗೆ ವಿಧಿಸುವ ವಿಚಾರದಲ್ಲಿರುವ ಗೊಂದಲದ ಬಗ್ಗೆ ಸಭೆಯ ಗಮನಸೆಳೆದರು. ಇದಕ್ಕೆ ಕಂದಾಯ ನಿರೀಕ್ಷಕರು ಉತ್ತರಿಸಿ, ಇದನ್ನು ಜಾರಿಗೆ ತರದಿದ್ದಲ್ಲಿ ಸ್ವಚ್ಛ ಭಾರತ್, 15ನೇ ಹಣಕಾಸು ಯೋಜನೆಯಡಿ ಅನುದಾನ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ ಎಂದರು.

    ಉಳ್ಳಾಲ, ಬಂಟ್ವಾಳಕ್ಕೆ ಬೇರೆ ಬೇರೆ ಡಿ.ಸಿ. ಇದ್ದಾರೆಯೇ?: ಹಸಿಕಸವನ್ನು ಕಂಚಿನಡ್ಕಪದವಿನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕೊಂಡೊಯ್ಯಬಾರದು ಎಂದು ಸ್ಥಳೀಯರು ಆಕ್ಷೇಪಿಸಿದ ಹಿನ್ನೆಲೆ ಏನು ಮಾಡುವುದು ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸಭೆಯ ಗಮನಕ್ಕೆ ತಂದರು. ಮಂಗಳೂರು ಶಾಸಕರು, ಸ್ಥಳೀಯ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿಯವರು ಸಭೆ ನಡೆಸಿದನ್ವಯ ಮಾರ್ಚ್ 13ರವರೆಗೆ ಮಾತ್ರ ಕಸ ಸಾಗಾಟಕ್ಕೆ ಅನುಮತಿ ಕೊಟ್ಟಿದ್ದಾರೆ. ಅಂದು ಜಿಲ್ಲಾಧಿಕಾರಿಯವರು ಘಟಕದ ಪರಿಶೀಲನೆ ನಡೆಸಲಿದ್ದಾರೆ ಎಂದು ಮುಖ್ಯಾಧಿಕಾರಿಯವರು ಸಭೆಯ ಗಮನಕ್ಕೆ ತಂದರು. ಸದಸ್ಯ ಗೋವಿಂದಪ್ರಭು ಪ್ರತಿಕ್ರಿಯಿಸಿ, ಘಟಕದ ಮುಂದುವರಿದ ಕಾಮಗಾರಿಗೆ ಟೆಂಡರ್ ಕರೆದು ಇನ್ನು ಕೂಡ ಕಾಮಗಾರಿ ಆರಂಭಿಸದ ಬಗ್ಗೆ ಇಂಜಿನಿಯರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಕಾಮಗಾರಿ ಆರಂಭಿಸದ ಗುತ್ತಿಗೆದಾರನಿಗೆ ನೋಟಿಸ್ ಯಾಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಸದಸ್ಯ ಜನಾರ್ದನ ಮಧ್ಯಪ್ರವೇಶಿಸಿ ಉಳ್ಳಾಲಕ್ಕೆ ಬೇರೆ, ಬಂಟ್ವಾಳಕ್ಕೆ ಬೇರೆ ಡಿ.ಸಿ. ಇದ್ದಾರಾ? ಅವರು ನಮ್ಮ ಸಮಸ್ಯೆಯನ್ನು ಕೂಡ ಆಲಿಸಬೇಕು ಎಂದರು. ಸದಸ್ಯ ರಾಮಕೃಷ್ಣ ಆಳ್ವ, ಸಿದ್ದಿಕ್, ಮಹಮ್ಮದ್ ನಂದರ ಬೆಟ್ಟು, ಲುಕ್ಮಾನ್ ಇದಕ್ಕೆ ಧ್ವನಿಗೂಡಿಸಿದರು.

    ಕಚೇರಿಗೆ ಬೀಗ ಹಾಕಿ: ಪುರಸಭೆ ಸಿಬ್ಬಂದಿಯನ್ನು ಶಿಕ್ಷಣ ವಂಚಿತ ಮಕ್ಕಳ ಸರ್ವೇ ಸಹಿತ ಅನ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸದಸ್ಯರು ಆಕ್ಷೇಪಿಸಿ, ಜಿಲ್ಲಾಧಿಕಾರಿ ವಿರುದ್ಧ ಪಕ್ಷ ಭೇದ ಮರೆತು ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ಬೀಗ ಹಾಕಿ ಎಂದು ಕಿಡಿಕಾರಿದರು. ಸಿಬ್ಬಂದಿ ಇಲ್ಲದೆ ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಬಿಪಿಎಲ್ ಪಡಿತರ ಸರ್ವೇಗೆ ಕಂದಾಯ ಇಲಾಖೆ ಇದೆ. ಮಕ್ಕಳ ಸರ್ವೇಗೆ ಶಿಕ್ಷಣ ಇಲಾಖೆ ಇದೆ. ಅವರು ಮಾಡಬೇಕಾದ ಕಾರ್ಯವನ್ನು ಪುರಸಭಾ ಸಿಬ್ಬಂದಿಗೆ ಹೊರಿಸುವುದು ಸರಿಯಲ್ಲ ಎಂದು ಸದಸ್ಯರು ಅಸಮಾಧಾನ ಹೊರಹಾಕಿದರು.

    ನೀರಿನ ದರ ಯಥಾಸ್ಥಿತಿ: ನೀರಿನ ದರ ಪರಿಷ್ಕರಣೆ ಕುರಿತಂತೆ ಶಾಸಕ ರಾಜೇಶ್ ನಾಕ್ ಅವರು ಆಡಳಿತಾಧಿಕಾರಿಯವರ ಕಾಲದಲ್ಲಿ ನೀರಿನ ದರ ಏರಿಕೆಯನ್ನು ತಡೆ ಹಿಡಿಯುವಂತೆ ಸಹಾಯಕ ಕಮಿಷನರ್‌ಗೆ ಬರೆದಿರುವ ಪತ್ರದ ಆಧಾರದಲ್ಲಿಯೇ ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡ ಬಳಿಕ ದರ ಪರಿಷ್ಕರಿಸಲು ನಿರ್ಣಯ ಕೈಗೊಳ್ಳಲಾಯಿತು. ಅದುವರೆಗೆ ಯಥಾಸ್ಥಿತಿಯಾಗಿ ಹಿಂದಿನ ಶುಲ್ಕದಲ್ಲೇ ಮುಂದುವರಿಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

    ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಇದ್ದರು. ಸದಸ್ಯರಾದ ಹರಿಪ್ರಸಾದ್, ವಿದ್ಯಾವತಿ, ಶಶಿಕಲಾ, ಮೊನೀಶ್ ಆಲಿ, ಲುಕ್‌ಮಾನ್, ಮಹಮ್ಮದ್ ನಂದರಬೆಟ್ಟು ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮೊದಲು ವಿಕಲಚೇತನ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts