More

  ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು

  ಮಂಗಳೂರು: ಬಜೆಟ್‌ನಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತೆರಿಗೆ ಸಂಗ್ರಹ ಸರಿಯಾಗಿ ಆಗದೆ, ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಅದನ್ನು ತಡೆಯಲು ಹಾಗೂ ವಿವಿಧ ಮೂಲಗಳಿಂದ ಪಾಲಿಕೆಗೆ ಬಾಕಿ ಇರುವ ಬೃಹತ್ ಮೊತ್ತದ ತೆರಿಗೆ ಸಂಗ್ರಹಿಸಲು ಬಜೆಟ್‌ನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಬುಧವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಅಭಿಪ್ರಾಯ ಮಂಡಿಸಿದರು.

  ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ಮನೆ ತೆರಿಗೆ ಶೇ.15ರಷ್ಟು ಏರಿಕೆ ಮಾಡುವ ಪಾಲಿಕೆ, ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ 1992ರ ಬಳಿಕ ಪರಿಷ್ಕರಣೆ ಮಾಡಿಲ್ಲ. ಅದರಲ್ಲಿ ಕೆಲವೊಂದು ಶುಲ್ಕ ಇನ್ನೂ ಪೈಸೆ ಲೆಕ್ಕದಲ್ಲಿದೆ ಎಂದರು.
  ಕೋಟೆಕಾರು, ಉಳ್ಳಾಲ ನಗರ ಸ್ಥಳೀಯ ಸಂಸ್ಥೆ, ಗ್ರಾಪಂಗಳಿಂದ ಲಕ್ಷಾಂತರ ರೂ. ತೆರಿಗೆ ಬಾಕಿ ಇದೆ. ಜಾಹೀರಾತು ಸಂಸ್ಥೆಗಳೂ ಕೋಟ್ಯಂತರ ರೂ. ಬಾಕಿ ಇರಿಸಿಕೊಂಡಿವೆ. ಬಂದರಿನ ಗುಜರಿ ಯಾರ್ಡ್‌ನಿಂದಲೂ ಎರಡು ವರ್ಷದಿಂದ ತೆರಿಗೆ ಪಾವತಿ ಬಾಕಿಯಿದೆ. ಪಚ್ಚನಾಡಿ ಬಳಿ ಡಾಂಬರು ಘಟಕಕ್ಕೆ ನೀಡಲಾಗಿರುವ ಪಾಲಿಕೆ ಜಾಗಕ್ಕೆ ವಾರ್ಷಿಕ ಕೇವಲ 5 ಸಾವಿರ ರೂ. ಪಡೆಯಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
  ಮೇಯರ್ ದಿವಾಕರ ಪಾಂಡೇಶ್ವರ, ಉಪಮೇಯರ್ ವೇದಾವತಿ, ಆಯುಕ್ತ ಅಕ್ಷಯ್ ಶ್ರೀಧರ್, ಸ್ಥಾಯಿ ಸಮಿತಿ ಸದ್ಯರಾದ ಕಿರಣ್ ಕುಮಾರ್, ಜಗದೀಶ್ ಶೆಟ್ಟಿ, ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಉಪಾಯುಕ್ತ ಡಾ.ಸಂತೋಷ್ ಕುಮಾರ್, ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತರಾದ ಗೋಪಾಲಕೃಷ್ಣ ಭಟ್, ಪದ್ಮನಾಭ ಉಳ್ಳಾಲ ಅಭಿಪ್ರಾಯ ಮಂಡಿಸಿದರು.

  ತೆರಿಗೆ ಕಟ್ಟದವರ ಹೆಸರು ಡಿಸ್‌ಪ್ಲೇ
  ಮಹಾನಗರ ಪಾಲಿಕೆ ಮುಂಭಾಗ ದೊಡ್ಡ ಡಿಸ್‌ಪ್ಲೇ ಹಾಕಿ ತೆರಿಗೆ ಕಟ್ಟದವರ ಹೆಸರು ಅದರಲ್ಲಿ ಪ್ರಕಟಿಸಿ, ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು. ಪಾಲಿಕೆ ವ್ಯಾಪ್ತಿಯ ಪಾರ್ಕಿಂಗ್ ಇಲ್ಲದ ಕಟ್ಟಡಗಳಿಗೆ ಮೂರು ಪಟ್ಟು ಹೆಚ್ಚು ತೆರಿಗೆ ವಿಧಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಯುವ ಸಮುದಾಯಕ್ಕೆ ಉದ್ಯೋಗಕ್ಕೆ ಪೂರಕ ಕಾರ್ಯಕ್ರಮ ರೂಪಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಯುವತಿಯರಿಬ್ಬರು ಮನವಿ ಮಾಡಿದರು.

  ಬೆರಳೆಣಿಕೆ ಮಂದಿ ಭಾಗಿ
  ಬಜೆಟ್ ತಯಾರಿಕೆಗೆ ಪೂರ್ವಭಾವಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲು ಕರೆದ ಸಭೆಯಲ್ಲಿ ಬೆರಳೆಣಿಕೆ ಮಂದಿಯಷ್ಟೇ ಭಾಗವಹಿಸಿದ್ದರು. ಜನರಿಗೆ ಸರಿಯಾಗಿ ಮಾಹಿತಿ ನೀಡದಿರುವುದಕ್ಕೆ ಮೇಯರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು, ಕಾರ್ಪೊರೇಟರ್‌ಗಳು ಭಾಗವಹಿಸದಿರುವುದಕ್ಕೂ ಆಕ್ಷೇಪ ವ್ಯಕ್ತವಾಯಿತು. ಹಿಂದಿನ ವರ್ಷಗಳಲ್ಲೂ ಕಾಟಾಚಾರಕ್ಕೆ ಸಭೆ ನಡೆಯುತ್ತಿತ್ತು, ಈ ಬಾರಿಯೂ ಅದೇ ರೀತಿ ನಡೆಯುತ್ತಿದೆ ಎಂಬ ಅಭಿಪ್ರಾಯ ಕೇಳಿಬಂತು.

  ಸಾರ್ವಜನಿಕರ ಅಭಿಪ್ರಾಯ
  *ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಕೋಟ್ಯಂತರ ರೂ. ಪಡೆಯುತ್ತಿರುವ ಆ್ಯಂಟನಿ ವೇಸ್ಟ್ ಸಂಸ್ಥೆಯ ಗುತ್ತಿಗೆ ರದ್ದು ಮಾಡಬೇಕು.
  *ಖಾಸಗಿ ಕನ್ಸಲ್ಟೆಂಟ್ ಸಂಸ್ಥೆ ಬದಲು ಪಾಲಿಕೆ ಇಂಜಿನಿಯರ್‌ಗಳಿಂದಲೇ ಯೋಜನಾ ವರದಿ, ಅಂದಾಜು ವೆಚ್ಚ ತಯಾರಿಸಬೇಕು.
  *ಮಧ್ಯಾಹ್ನ 3 ಗಂಟೆಯಿಂದ ಕಾರ್ಯನಿರ್ವಾಹಕ ಇಂಜಿನಿಯರ್ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಇರಬೇಕು.
  *ಆರ್‌ಟಿಒದಿಂದ ಪಾಲಿಕೆಗೆ ಬರಬೇಕಾದ ಹಣ ವಸೂಲಿಗೆ ಕ್ರಮ ಕೈಗೊಳ್ಳಬೇಕು.
  *ಇ-ಖಾತಾ ತಡವಾಗುತ್ತಿದ್ದು, ಬೇಗ ಮಾಡುವುದರಿಂದ ಪಾಲಿಕೆಗೆ ತೆರಿಗೆ ಬೇಗ ಬರುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts