More

    ಮಂಗಳೂರು ವಿಮಾನ ನಿಲ್ದಾಣ ಸ್ತಬ್ಧವಾಗಿ ಒಂದೂವರೆ ತಿಂಗಳು

    ಪಿ.ಬಿ.ಹರೀಶ್ ರೈ ಮಂಗಳೂರು
    ಪ್ರತಿದಿನ 15ಕ್ಕೂ ಅಧಿಕ ವಿಮಾನಗಳ ಆಗಮನ, ನಿರ್ಗಮನದ ಕೇಂದ್ರವಾಗಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಕ್‌ಡೌನ್ ಪರಿಣಾಮ ಕಳೆದ ಒಂದೂವರೆ ತಿಂಗಳಿಂದ ಸ್ತಬ್ಧವಾಗಿದೆ.
    ಈಗ ವಿದೇಶದಲ್ಲಿರುವ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಪ್ರಥಮ ಸುತ್ತಿನಲ್ಲಿ ದಕ್ಷಿಣ ಭಾರತಕ್ಕೆ ಬರುವ 36 ವಿಶೇಷ ವಿಮಾನಗಳಲ್ಲಿ 3 ವಿಮಾನ ಬೆಂಗಳೂರು ವಿಮಾನ ಇದ್ದರೂ ಮಂಗಳೂರು ನಿಲ್ದಾಣ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಒತ್ತಡದ ಬಳಿಕ ಈಗ ಮೇ 12ರಂದು ಮೊದಲ ವಿಮಾನ ಬರುವುದು ಖಚಿತವಾಗಿದೆ.

    ಮಾ.25ರಂದು ಮುಂಬೈಯಿಂದ ಮಂಗಳೂರಿಗೆ ಬಂದಿಳಿದ ವಿಮಾನವೇ ಕೊನೆಯದ್ದು. ಬಳಿಕ ಯಾವುದೇ ವಿಮಾನ ಮಂಗಳೂರಿನಲ್ಲಿ ಹಾರಾಟ ನಡೆಸಿಲ್ಲ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮೂರು ವಿಮಾನಗಳು ಲಾಕ್‌ಡೌನ್‌ಗೆ ಸಿಲುಕಿ ಮಂಗಳೂರಿನಲ್ಲೇ ಇವೆ. ಏ.21ರಂದು ಕೊಯಮತ್ತೂರಿನ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಏರ್ ಆಂಬುಲೆನ್ಸ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆತಂದು ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ನಿತ್ಯ ಪರಿಶೀಲನೆ: ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರ್ಯ ನಿರ್ವಹಿಸುತ್ತಿರುವ ಸಿಐಎಸ್‌ಎಫ್ ಸಿಬ್ಬಂದಿ ಹಾಗೂ ಏರ್ ಇಂಡಿಯಾ ಸಿಬ್ಬಂದಿ ಲಾಕ್‌ಡೌನ್ ಅವಧಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಲ್ದಾಣದಲ್ಲಿ ಬಾಕಿ ಇರುವ ಮೂರು ವಿಮಾನಗಳನ್ನು ತಜ್ಞ ಇಂಜಿನಿಯರ್‌ಗಳು ಪರಿಶೀಲನೆ ನಡೆಸಿ ಕೆಲ ತಾಸು ಇಂಜಿನ್ ಚಾಲೂ ಸ್ಥಿತಿಯಲ್ಲಿ ಇಡುತ್ತಾರೆ. ಏರ್‌ಲೈನ್ ಸೆಕ್ಯುರಿಟಿ ಸಿಬ್ಬಂದಿ ವಿಮಾನದ ಭದ್ರತಾ ಕಾರ್ಯ ವಹಿಸುತ್ತಿದ್ದಾರೆ.

    ಮೇ 12ರಂದು ದುಬೈಯಿಂದ ಮಂಗಳೂರಿಗೆ ಪ್ರಥಮ ವಿಮಾನ
    ಲಾಕ್‌ಡೌನ್ ಬಳಿಕ ದುಬೈಯಿಂದ ಮಂಗಳೂರಿಗೆ ಪ್ರಥಮ ವಿಮಾನ ಮೇ 12ರಂದು ಮಂಗಳೂರಿಗೆ ಹೊರಡಲಿದೆ.
    ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಈ ಮಾಹಿತಿಯನ್ನು ದೃಢೀಕರಿಸುವುದಾಗಿ ಅನಿವಾಸಿ ಭಾರತೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಪ್ರಥಮ ವಿಮಾನದಲ್ಲಿ ಗರ್ಭಿಣಿಯರು, ವೈದ್ಯಕೀಯ ತುರ್ತು ಇರುವವರು ಆದ್ಯತೆಯಲ್ಲಿ ಅವಕಾಶ ಪಡೆಯಲಿದ್ದಾರೆ ಎಂದವರು ತಿಳಿಸಿದ್ದಾರೆ.
    ಆರಂಭದಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ಇಲ್ಲದಿರುವ ಬಗ್ಗೆ ಅನಿವಾಸಿ ಭಾರತೀಯ ಸಂಘ ಕರ್ನಾಟಕ ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕರ್ನಾಟಕದ ಜನರ ಬೇಡಿಕೆಗೆ ಕೇಂದ್ರ ಸ್ಪಂದಿಸಿದೆ.

    ಅದಾನಿ ಸಂಸ್ಥೆಗೆ ಹಸ್ತಾಂತರವೂ ವಿಳಂಬ
    ಸದ್ಯ ಮಂಗಳೂರು ವಿಮಾನ ನಿಲ್ದಾಣ ಅದಾನಿ ಸಮೂಹದ ಪಾಲಾಗಿದ್ದು, ಹಸ್ತಾಂತರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆರಂಭಿಕ ಹಂತದಲ್ಲಿ ಒಂದೆರಡು ಸಿಬ್ಬಂದಿಯನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸಿದ್ದ ಅದಾನಿ ಸಂಸ್ಥೆ, ಏಪ್ರಿಲ್ ನಂತರ ಪೂರ್ಣಪ್ರಮಾಣದ ನಿರ್ವಹಣೆಗೆ ಮುಂದಾಗಿತ್ತು. ಲಾಕ್‌ಡೌನ್ ಕಾರಣ ಅದು ಮುಂದೂಡಿಕೆಯಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವವರೆಗೆ ಕಾಯುವ ಅನಿವಾರ್ಯತೆ ಇದೆ. ನಂತರವೇ ಹಸ್ತಾಂತರದ ಬಗ್ಗೆ ನಿರ್ಣಯ ಎಂದು ಅದಾನಿ ಗ್ರೂಪ್‌ಅಧ್ಯಕ್ಷ (ಕರ್ನಾಟಕ) ಕಿಶೋರ್ ಆಳ್ವ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಅನಿವಾಸಿ ಭಾರತೀಯರನ್ನು ಹಂತಹಂತವಾಗಿ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಗರ್ಭಿಣಿಯರು, ವೃದ್ಧರು, ತುರ್ತು ವೈದ್ಯಕೀಯ ಸೇವೆ, ಪ್ರವಾಸಿಗರನ್ನು ಆದ್ಯತೆ ಮೇರೆಗೆ ಕರೆತರಲಾಗುತ್ತಿದೆ. ಕರಾವಳಿ ಭಾಗದ ಸಾಕಷ್ಟು ಮಂದಿ ಭಾರತಕ್ಕೆ ಮರಳಲು ಹೆಸರು ನೋಂದಾಯಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಶೀಘ್ರ ಕರೆತರಲು ಪ್ರಯತ್ನ ನಡೆದಿದೆ.
    -ನಳಿನ್‌ಕುಮಾರ್ ಕಟೀಲ್, ಸಂಸದ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts