More

    ಬೈಕ್​ ಮೇಲೆ ಭಾರತದ ಉದ್ದಗಲ ಸಂಚರಿಸುತ್ತಿರುವ ಯುವಕ! ಸರ್ದಾರ್​ ಪಟೇಲ್​ ಸ್ಮರಣೆಯಲ್ಲಿ ಏಕತಾ ಯಾತ್ರೆ

    ಬೆಂಗಳೂರು: ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರು ದೇಶಾದ್ಯಂತ ಸಂಚರಿಸಿ, ದೇಶವನ್ನು ಒಗ್ಗೂಡಿಸುವ ಮಹತ್ತರ ಕಾರ್ಯ ಮಾಡಿದರು. ಅವರಿಂದ ಪ್ರೇರಿತರಾಗಿರುವ ಗುಜರಾತಿನ ಸೂರತ್​ ನಿವಾಸಿ ಜೀತ್​ ಮಕ್ವಾನ, ಭಾರತದ ಯಾತ್ರೆ ಕೈಗೊಂಡಿದ್ದಾರೆ. ತಮ್ಮ ಬೈಕ್​ ಮೇಲೆ 15 ರಾಜ್ಯಗಳ 15 ಮುಖ್ಯ ನಗರಗಳಿಗೆ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ‘ರೈಡ್​ ಫಾರ್​ ಯೂನಿಟಿ’ ಆರಂಭಿಸಿದ್ದಾರೆ.

    ತಮ್ಮ ಈ ಏಕತಾ ಯಾತ್ರೆಯ ಅಂಗವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬಂದಿರುವ ಮಕ್ವಾನ, ವಿಜಯವಾಣಿಯೊಂದಿಗೆ ತಮ್ಮ ಆಶಯಗಳನ್ನು ಹಂಚಿಕೊಂಡಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸರ್ದಾರ್​ ಪಟೇಲರು​ ನಮ್ಮ ದೇಶವನ್ನು ಒಗ್ಗೂಡಿಸಿದ ಸವಿನೆನಪು ಮತ್ತು ಸದ್ಭಾವವನ್ನು ಬಿತ್ತರಿಸುವುದು ನನ್ನ ಉದ್ದೇಶ. ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ. ಅದನ್ನು ಬಿಂಬಿಸುವ ಪ್ರಯತ್ನ ನನ್ನದು ಎಂದಿದ್ದಾರೆ.

    ಇದನ್ನೂ ಓದಿ: ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ’ ಎಂದ ಮಾಜಿ ಸಿಎಂ

    ಗುಜರಾತಿನ ಕೇವಡಿಯಾದಲ್ಲಿರುವ ‘ಸ್ಟಾಚ್ಯೂ ಆಫ್​ ಯೂನಿಟಿ’ಯಿಂದ ಸೆಪ್ಟೆಂಬರ್ 24ಕ್ಕೆ ಪ್ರಯಾಣ ಆರಂಭಿಸಿದ ಜೀತ್ ಮಕ್ವಾನ, ಈವರೆಗೆ 11 ಪ್ರಮುಖ ನಗರಗಳಿಗೆ ಭೇಟಿ ನೀಡಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಭೇಟಿ ಮಾಡಿ ತಮ್ಮ ಲಾಗ್​​ ಬುಕ್​ನಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕ್ಷೇತ್ರದ ಉದ್ಯೋಗಿಗಳೊಂದಿಗೆ ಒಡನಾಟ ನಡೆಸಿ ಇಂದು ಸಂಜೆಯ ನಂತರ ಕನ್ಯಾಕುಮಾರಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

    ಒಟ್ಟು 10 ರಿಂದ 11 ಸಾವಿರ ಕಿಲೋಮೀಟರ್​ಗಳ ಪ್ರಯಾಣದ ಯೋಜನೆ ಇದ್ದು, ಈಗಾಗಲೇ 6500 ಕಿಲೋಮೀಟರ್​​ನಷ್ಟು ದೂರವನ್ನು ಅವರು ಕ್ರಮಿಸಿದ್ದಾರೆ. ಲಢಾಕಿನ ಲೇಹ್​ ಪ್ರಾಂತ್ಯದಲ್ಲಿರುವ ವಾಹನಸಂಚಾರಕ್ಕೆ ಯೋಗ್ಯವಾದ ಜಗತ್ತಿನ ಅತ್ಯಂತ ಎತ್ತರದ ಮಾರ್ಗ ಖಾದುಂಗ್ಲಾಕ್ಕೂ ಮಕ್ವಾನ ಭೇಟಿ ನೀಡಿದ್ದಾರೆ. ಇದೀಗ ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿರುವ ಅವರು, ಮುಂದೆ ಕನ್ಯಾಕುಮಾರಿಗೆ ತೆರಳಲಿದ್ದಾರೆ. ಅಕ್ಟೋಬರ್​ 31ಕ್ಕೆ ಮತ್ತೆ ‘ಸ್ಟಾಚ್ಯೂ ಆಫ್​ ಯೂನಿಟಿ’ ಇರುವ ಕೇವಡಿಯಾ ತಲುಪುವ ಯೋಜನೆ ಇದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಸರ್ದಾರ್​ ಪಟೇಲ್​ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಇದನ್ನೂ ಓದಿ: 100 ದೇಶಗಳಿಗೆ ಮಾದರಿಯಾದ ಕೋವಿನ್! ಲಸಿಕೆ ಸಾಧನೆಯಲ್ಲಿ ಈ ಆ್ಯಪ್​ನ ಪಾತ್ರ ಮಹತ್ತರ

    ಎಂಟೆಕ್​ ಮಾಡಿ ಸ್ಟ್ರಕ್ಷರಲ್ ಇಂಜಿನಿಯರಿಂಗ್​ನಲ್ಲಿ ಪಿಎಚ್​ಡಿ ಮಾಡುತ್ತಿರುವ 25 ವರ್ಷ ವಯಸ್ಸಿನ ಜೀತ್​ ಮಕ್ವಾನ, ಸೂರತ್​ನ ಭಗವಾನ್ ಮಹಾವೀರ್​ ಯೂನಿವರ್ಸಿಟಿಯಲ್ಲಿ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಯಾತ್ರೆಯ ಮತ್ತೊಂದು ವಿಶೇಷವೆಂದರೆ ಅವರು ಭೇಟಿ ನೀಡುತ್ತಿರುವ ಪ್ರಮುಖ ನಗರಗಳು ಮತ್ತು ಈಗಾಗಲೇ ಸಂಚರಿಸಿರುವ 50 ಕ್ಕೂ ಹೆಚ್ಚು ಊರುಗಳ ಮಣ್ಣನ್ನು ಅವರು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸುತ್ತಿದ್ದಾರೆ. ತಮ್ಮ ಪಯಣ ಮುಗಿದ ಮೇಲೆ ಈ ಮಣ್ಣಿನಿಂದ ಭಾರತಮಾತೆಯ ಮೂರ್ತಿಯನ್ನು ನಿರ್ಮಿಸುವ ಆಸೆ ಹೊಂದಿದ್ದಾರೆ.

    ಮುಂದುವರೆದ ಡ್ರಗ್ಸ್​ ಕೇಸ್​ ತನಿಖೆ… ಯುವ ನಟಿಗೆ ಎನ್​ಸಿಬಿ ಸಮನ್ಸ್​!

    ಕರೊನಾ ಲಸಿಕಾ ಅಭಿಯಾನದಲ್ಲಿ ಸೆಂಚುರಿ ಬಾರಿಸಿದ ಭಾರತ! 100 ಕೋಟಿ ಡೋಸ್​​ ನೀಡಿದ ಜಗತ್ತಿನ 2ನೇ ದೇಶ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts