ಮಕ್ಕಳಿಗಾಗಿ 'ಏಕೈಕ ಹಸು' ಮಾರಿದ ಘಟನೆಗೆ ಟ್ವಿಸ್ಟ್‌: ಕೊಟ್ಟಿಗೆ ತುಂಬಾ ದನಗಳು!

cowsale--factcheck
Published on

ಶಿಮ್ಲಾ: ನಿಜವಾಗಿಯೂ ಬಡತನದಲ್ಲಿದ್ದು, ಸಹಾಯಕ್ಕಾಗಿ ಅಂಗಲಾಚಿದರೂ ಅವರ ಗೋಳು ಕೇಳುವವರೇ ಇಲ್ಲದ ಇಂದಿನ ಸ್ಥಿತಿಯಲ್ಲಿ, ಆರಾಮಾಗಿ, ಚೆನ್ನಾಗಿ ಜೀವನ ನಡೆಸಿಕೊಂಡು ಹೋಗುತ್ತಿರುವ ದಂಪತಿಗೆ ನೆರವು ಬೇಕಾಗಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದೆ!

ತಮ್ಮ ಮಕ್ಕಳಿಗೆ ಕ್ಲಾಸ್‌ ಮಿಸ್‌ ಆಗಬಾರದು ಎನ್ನುವ ಕಾರಣಕ್ಕೆ ಕುಟುಂಬದ ಏಕೈಕ ಆಧಾರವಾಗಿರುವ ಹಸುವನ್ನೇ ಮಾರಾಟ ಮಾಡಿ ಸ್ಮಾರ್ಟ್‌ಫೋನ್‌ ತರಿಸಿಕೊಟ್ಟಿರುವುದಾಗಿ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ತಹಸಿಲ್‌ನ ಗುಮ್ಮರ್ ಗ್ರಾಮದ ನಿವಾಸಿ ಕುಲದೀಪ್ ಕುಮಾರ್ ಅವರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ತಮ್ಮ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು, ಆದ್ದರಿಂದ ಹಸುವನ್ನು ಮಾರಿರುವುದಾಗಿ ಹೇಳಿದ್ದಾರೆ ಎಂದೂ ಸ್ಥಳೀಯ ಪತ್ರಿಕೆಯಲ್ಲಿ ತಿಳಿಸಲಾಗಿತ್ತು. ಈ ದಂಪತಿಗೆ ನೆರವಾಗುವ ನಿಟ್ಟಿನಲ್ಲಿ ದೇಶದ ಹಲವಾರು ಭಾಷೆಗಳ ಪತ್ರಿಕೆಗಳಲ್ಲಿಯೂ ಈ ವಿಷಯ ವರದಿಯಾಗಿತ್ತು. ಇವರ ಕುಟುಂಬಕ್ಕೆ ಇದ್ದುದು ಒಂದು ಹಸು ಮಾತ್ರ. ಅದರ ಹಾಲನ್ನು ಮಾರಿ ಜೀವನ ಸಾಗಿಸುತ್ತಿದೆ ಈ ಕುಟುಂಬ. ಆದರೆ ಈಗ ಕೇವಲ ಆರು ಸಾವಿರ ರೂಪಾಯಿಗೆ ಅದನ್ನು ಮಾರಿ ಫೋನ್‌ ತರಿಸಿಕೊಟ್ಟಿದ್ದಾರೆ ಎನ್ನಲಾಗಿತ್ತು.

ವರದಿಯನ್ನು ನೋಡಿದ ಹಲವು ರಾಜಕೀಯ ಮುಖಂಡರು ಮಾತ್ರವಲ್ಲದೇ ಇದಾಗಲೇ ಹಲವಾರು ಮಂದಿಗೆ ಸಹಾಯಹಸ್ತ ನೀಡುತ್ತಿರುವ ಬಾಲಿವುಡ್‌ ನಟ ಸೋನು ಸೂದ್‌ ಕೂಡ ಈ ದಂಪತಿ ನೆರವಿಗೆ ಧಾವಿಸಿದ್ದರು.

ಅಂತೂ ಇಂತೂ ಈ ದಂಪತಿ ಮನೆಗೆ ಅಧಿಕಾರಿಗಳು ಹೋಗಿ ನೋಡಿದಾಗ ವಸ್ತುಸ್ಥಿತಿಯೇ ಬೇರೆಯದ್ದಿದೆ. ಕುಲದೀಪ್‌ ಕೊಟ್ಟಿಗೆಯಲ್ಲಿ ಈಗಾಗಲೇ 7 ಹಸುಗಳಿದ್ದು, ಅವುಗಳಿಗೆ ನಿಲ್ಲಲೂ ಜಾಗವಿರಲಿಲ್ಲ. ಹೀಗಾಗಿ ಈ ಪೈಕಿ ಒಂದು ಹಸುವನ್ನು ಅವರು ಜು.10ರಂದು ತನ್ನ ಪರಿಚಯಸ್ಥನಿಗೇ ಮಾರಿದ್ದಾರೆ. ಹಸು ಮಾರುವ ಮೂರು ತಿಂಗಳ ಹಿಂದೆಯೇ, ತಮ್ಮ ಮಗಳಿಗೆ ಆನ್‌ಲೈನ್‌ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್‌ ಕೊಡಿಸಿಯಾಗಿದೆ. ಮಗಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಎನ್ನುವ ಕಾರಣಕ್ಕೆ, ಸಮೀಪದಲ್ಲಿರುವ ಸರ್ಕಾರಿ ಶಾಲೆ ಬದಲು ಖಾಸಗಿ ಶಾಲೆಗೆ ಸೇರಿಸಿದ್ದಾರೆ.

ನನಗೆ ಯಾವ ಸಹಾಯವೂ ಬೇಡ, ನನ್ನ ಬಳಿ ಸಾಕಷ್ಟು ಹಸುವಿದೆ. ಈ ವರದಿಯೆಲ್ಲ ಸುಳ್ಳು ಎಂದು ಕುಲದೀಪ್‌ ಹೇಳಿದ್ದಾರೆ. ಆದರೆ ಮನೆ ಹುಡುಕಿ ಹೋಗಿರುವ ಅಧಿಕಾರಿಗಳು ‘ನೀವು ಮಾರಿರುವ ಹಸುವನ್ನು ಖರೀದಿಸಿ ಪುನಃ ನಿನಗೆ ಕೊಡಿಸುತ್ತೇವೆ’ ಎಂದು ಹೇಳಿದ್ದಾರೆ. ಅದಕ್ಕೆ ಕುಲದೀಪ್‌, ‘ನನ್ನ ಕೊಟ್ಟಿಗೆಯಲ್ಲಿ ಅದನ್ನು ಸಾಕಲು ಜಾಗವಿಲ್ಲ. ಅದು ನನಗೆ ಬೇಡ. ನಾನು ಪರಿಚಯಸ್ಥರೊಬ್ಬರಿಗೆ ಸ್ವ ಇಚ್ಛೆಯಿಂದ ಕೊಟ್ಟಿದ್ದೇನೆ’ ಎಂದಿದ್ದಾರೆ!

ಹಾಗಿದ್ದರೆ ಈ ಸುದ್ದಿಯ ಮೂಲ ಯಾವುದು? ಈ ಸುದ್ದಿ ಮಾಡಿದ್ದು ಯಾರು ಎಂಬ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net