More

    ಆನೆ ದಾಳಿಗೆ ವ್ಯಕ್ತಿ ಬಲಿ

    ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಮುಂದುವರೆದಿದ್ದು, ಭಾನುವಾರ ಕಾಡಾನೆ ದಾಳಿಗೆ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಕಲ್ ದುರ್ಗಾ ಸಮೀಪದ ಕೆಸುವಿನಕಲ್ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ.

    ಕೂಲಿ ಕಾರ್ಮಿಕ ಆನಂದ ಪೂಜಾರಿ (55) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿ. ಎಂದಿನಂತೆ ಭಾನುವಾರ ಬೆಳಗ್ಗೆಯೂ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸಕ್ಕೆ ತೆರಳಿದ ವೇಳೆ ಒಂಟಿ ಸಲಗ ದಾಳಿ ನಡೆಸಿದ ಪರಿಣಾಮ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆನೆ ತುಳಿತಕ್ಕೆ ಆನಂದ ಪೂಜಾರಿ ಬಲಿಯಾಗಿದ್ದಾರೆ.
    ನೂರ್ ಅಹಮದ್ ಎನ್ನುವವರಿಗೆ ಸೇರಿದ ಕೆಸುವಿನಕಲ್ ಎಸ್ಟೇಟ್ ನಲ್ಲಿ ಆನಂದ ಪೂಜಾರಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ಬೆಳಗ್ಗೆಯೂ ಆನಂದ ಪೂಜಾರಿ ಎಸ್ಟೇಟ್ ಗೆ ಕೆಲಸಕ್ಕೆ ಎಂದು ತೆರಳುತ್ತಿರುವಾಗ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಆನಂದ ಪೂಜಾರಿ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಅದು ಸಾಧ್ಯವಾಗಲೇ ಇಲ್ಲ.

    15 ಲಕ್ಷ ಪರಿಹಾರ
    ಕಾಡಾನೆ ದಾಳಿಯಿಂದ ಮೃತಪಟ್ಟ ಆನಂದ ಪೂಜಾರಿ ಅವರ ಪತ್ನಿ ಬೇಬಿ ಅವರಿಗೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ ಪರಿಹಾರದ ಚೆಕ್ ವಿತರಿಸಲಾಯಿತು. ಘಟನೆ ನಡೆದ ವಿಷಯ ತಿಳಿದಾಕ್ಷಣ ಸ್ಥಳಕ್ಕೆ ತೆರಳಿದ ಡಿಎಫ್ಓ ರಮೇಶ್ ಬಾಬು ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ಆನಂದ ಪೂಜಾರಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಣೆ ಮಾಡಿದರು.
    ಮಂಗಳೂರು ಮೂಲದವರಾದ ಆನಂದ ಪೂಜಾರಿ ಹಲವು ವರ್ಷಗಳ ಹಿಂದೆ ಬಂದು ಕೂಲಿ ಶೆಡ್ ನಲ್ಲಿ ವಾಸವಾಗಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೀಗ ಆನೆ ದಾಳಿಯಿಂದ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಪತ್ನಿ ಬೇಬಿ ಅವರಿಗೆ ಪರಿಹಾರದ ಹಣವಲ್ಲದೆ ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿ ಪರಿಹಾರದ ಹಣ ನೀಡಲಾಗುವುದು ಎಂದು ಡಿಎಫ್ ಒ ರಮೇಶ್ ಬಾಬು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts