ಬಳ್ಳಾರಿ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಪೌಷ್ಟಿಕ ಮಕ್ಕಳ ರಕ್ಷಣೆಗೆ ಬಾಲಚೈತನ್ಯ ಕೇಂದ್ರ ಆರಂಭಿಸಿರುವ ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ತಾಳೂರು ರಸ್ತೆಯ ವಸತಿ ನಿಲಯದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ಆರಂಭವಾದ ಬಾಲಚೈತನ್ಯ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಕರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪೌಷ್ಟಿಕ ಮಕ್ಕಳಿಗಿಂತ ಅಪೌಷ್ಟಿಕ ಮಕ್ಕಳ ಮೇಲೆ ಕರೊನಾ ಸೋಂಕು ಬೇಗನೇ ಪರಿಣಾಮ ಬೀರಬಹುದು ಎಂಬ ಮುಂದಾಲೋಚನೆಯಿಂದ ಪ್ರಥಮವಾಗಿ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳನ್ನು ಸೋಂಕು ಬರುವುದಕ್ಕಿಂತ ಮುಂಚಿತವಾಗಿ ಕ್ವಾರಂಟೈನ್ ಮಾಡಲು ಬಾಲಚೈತನ್ಯ ಯೋಜನೆ ಪ್ರಾರಂಭಿಸಿರುವುದು ಸಂತಸದ ಸಂಗತಿಯಾಗಿದೆ.
ಇಲ್ಲಿ ಮಕ್ಕಳಿಗೆ ಆಹಾರದ ಜತೆ ಸೂಕ್ತ ಚಿಕಿತ್ಸೆಯೂ ನೀಡಲಾಗುತ್ತಿದೆ. ಬಡತನದಿಂದ ಬಂದವರಿಗೆ ಸಮಸ್ಯೆಗಳು ಬೇಗನೇ ಅರ್ಥವಾಗುತ್ತವೆ. ಹೀಗಾಗಿ ಜಿಲ್ಲಾಧಿಕಾರಿ, ಸಿಇಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಡವರಿಗೆ ಏನಾದರೂ ಸಾಮಾಜಿಕ ಸೇವೆ ಸಲ್ಲಿಸಬೇಕೆಂಬ ಸಂಕಲ್ಪದಿಂದ ಮುತುವರ್ಜಿ ವಹಿಸಿ ಇಂತಹದ್ದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಕೆಲಸ ಇಡೀ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿರುವುದು ಗಣಿನಾಡಿನ ಹೆಮ್ಮೆಯ ಸಂಗತಿ ಎಂದರು.
ಜಿಪಂ ಮುಖ್ಯ ಕಾರ್ ನಿರ್ವಾಹಕ ಅಧಿಕಾರಿ ಕೆ.ನಂದಿನಿ ಮಾತನಾಡಿ, ಕರೊನಾ ಮೂರನೇ ಅಲೆಯಿಂದ ಮಕ್ಕಳನ್ನು ಕಾಪಾಡುವುದಕ್ಕಾಗಿ ಬಾಲಚೈತನ್ಯ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲಾದ್ಯಂತ ಪ್ರಾರಂಭಿಸಿರುವ ಈ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಪಾಲಿಕೆ ಸದಸ್ಯರಾದ ಮೋತ್ಕರ್ ಶ್ರೀನಿವಾಸ, ಹನುಮಂತ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ ಸೇರಿ ಇತರರು ಇದ್ದರು.