More

  ಉದ್ಘಾಟನೆ ಭಾಗ್ಯ ಕಾಣದ ಬಸ್ ನಿಲ್ದಾಣ

  ವಿಜಯಾಚಾರ್ಯ ಪುರೋಹಿತ ಕೆಂಭಾವಿ: ಇಲ್ಲಿನ ಮಲ್ಲಾ ಕ್ರಾಸ್ ಹತ್ತಿರ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬೃಹತ್ ಸ್ಥಳದಲ್ಲಿ ಕಳೆದ ಏಳು ವರ್ಷಗಳ ಹಿಂದೆ ನಿರ್ಮಾಣವಾದ ಬಸ್ ನಿಲ್ದಾಣ ಉದ್ಘಾಟನೆ ಭಾಗ್ಯ ಕಾಣದೆ ಶಿಥಿಲಾವಸ್ಥೆಯತ್ತ ಸಾಗಿದೆ.

  ೭೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ನಿಲ್ದಾಣ ಈವರೆಗೂ ಉದ್ಘಾಟನೆ ಕಾಣದೆ ಇರುವುದು ಇಲ್ಲಿನ ಜನತೆಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಂಭಾವಿ, ಮಲ್ಲಾ, ಹದನೂರ ಹಾಗೂ ಜೇವರ್ಗಿ ತಾಲೂಕಿನ ವಡಗೇರಿ ಗ್ರಾಮಗಳಿಗೆ ಮುಖ್ಯ ಸಂಪರ್ಕದ ಕೇಂದ್ರ ಬಿಂದುವಾಗಿರುವ ಈ ಸ್ಥಳದಲ್ಲಿ ನಿತ್ಯ ಜನದಟ್ಟನೆ ಹೆಚ್ಚಿದ್ದು, ಬಸ್‌ಗಳೂ ಸಾಕಷ್ಟು ಪ್ರಯಾಣಿಸುತ್ತಿವೆ. ಕರ್ನಾಟಕ ಸೇರಿ ಮಹಾರಾಷ್ಟ್ರ, ತೆಲಂಗಾಣಾ ರಾಜ್ಯದ ಬಸ್‌ಗಳು ಸಂಚರಿಸುತ್ತಿದ್ದು ಅಷ್ಟೇ ಪ್ರಮಾಣದ ಪ್ರಯಾಣಿಕರ ಸಂಖ್ಯೆಯೂ ಇದೆ.

  ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದ ಪ್ರಮುಖ ಗ್ರಾಮಗಳೆಂದೆ ಗುರುತಿಸಿಕೊಳ್ಳುವ ಈ ಅವಳಿ ಗ್ರಾಮಗಳಿಗೆ ಬಸ್ ನಿಲ್ದಾಣದ ಕೊರತೆ ಏಕೆ ? ಎಂಬ ಮನೋಭಾವ ಜನರಲ್ಲಿ ಮೂಡಿದೆ. ಖಾಲಿ ಬಿದ್ದ ಈ ಬಸ್ ನಿಲ್ದಾಣದಲ್ಲಿ ಈಗಾಗಲೇ ಪ್ರತಿ ವರ್ಷ ಕೆಲ ಖಾಸಗಿಯವರು ತಾವು ಬೆಳೆದ ಭತ್ತ ಸೇರಿ ಹಲವು ಮೂಟೆಗಳನ್ನು ಸಂಗ್ರಹಿಸುತ್ತಿದ್ದಾರೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಇದ್ದು ಇಲ್ಲದಂತಿರುವ ನೂತನ ಬಸ್ ನಿಲ್ದಾಣವನ್ನು ಆದಷ್ಟು ಬೇಗ ಉದ್ಘಾಟಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಜನರ ಒತ್ತಾಯವಾಗಿದೆ.

  ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಉದ್ಘಾಟನೆಯಾಗಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಈ ನಿಲ್ದಾಣ ಶೀಘ್ರ ಉದ್ಘಾಟನೆ ಮಾಡಿ ಅನುಕೂಲ ಮಾಡಿಕೊಡಬೇಕು.
  | ಶರಣಗೌಡ ಪಾಟೀಲ್, ಹದನೂರ ಗ್ರಾಮಸ್ಥ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts