More

    ನರೇಗಲ್ಲ ಬಸ್ ನಿಲ್ದಾಣಕ್ಕೆ ಡಿಸಿ ಭೇಟಿ

    ನರೇಗಲ್ಲ: ಪಟ್ಟಣದದ ಬಸ್ ನಿಲ್ದಾಣಕ್ಕೆ ಶೀಘ್ರವೇ ಕಾಯಕಲ್ಪ ನೀಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ದೇವರಾಜ ಹೇಳಿದರು.

    ಗುರುವಾರ ಬೆಳಗ್ಗೆ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ನಿಲ್ದಾಣದಲ್ಲಿನ ಕಸದ ಡಬ್ಬಿ ತುಂಬಿ ತುಳುಕುತ್ತಿದ್ದರೂ ಅದನ್ನು ಸ್ವಚ್ಛ ಮಾಡಿಸದ ಸಾರಿಗೆ ನಿಯಂತ್ರಕರನ್ನು ತರಾಟೆಗೆ ತೆಗದುಕೊಂಡರು. ಕಸವನ್ನು ಅಲ್ಲಲ್ಲಿ ಗುಂಪಾಗಿಸಿ ಬೆಂಕಿ ಹಚ್ಚಿದ್ದನ್ನು ಕಂಡು ಕೆಂಡಾಮಂಡಲವಾದರು.

    ನಿಲ್ದಾಣದಲ್ಲಿ ಬಸ್​ಗಳನ್ನು ಅಡ್ಡಾದಿಡ್ಡಿ ನಿಲ್ಲಿಸದಂತೆ ಚಾಲಕರಿಗೆ ತಿಳಿಸಬೇಕೆಂದು ತಾಕೀತು ಮಾಡಿದರು. ಶೌಚಗೃಹ ಅವ್ಯವಸ್ಥೆ ಸರಿಪಡಿಸಬೇಕು, ನಿಲ್ದಾಣದಲ್ಲಿ ಬಿದ್ದ ಗೋಡೆಯನ್ನು ತಕ್ಷಣವೆ ಸರಿಪಡಿಸಬೇಕು ಎಂದು ಸಾರಿಗೆ ನಿಯಂತ್ರಕರಿಗೆ ಸೂಚಿಸಿದರು.

    ನಿಂಗಪ್ಪ ಲಕ್ಕನಗೌಡ್ರ ಮಾತನಾಡಿ, ಗಜೇಂದ್ರಗಡ-ಗದಗ ತಡೆರಹಿತ ಬಸ್​ಗೆ ನರೇಗಲ್ಲ ಪಟ್ಟಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಗಜೇಂದ್ರಗಡ ಘಟಕ ವ್ಯವಸ್ಥಾಪಕರೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳುವುದಾಗಿ ದೇವರಾಜ ಹೇಳಿದರು.

    ಆಗ್ರಹ

    ಸಾರಿಗೆ ನಿಯಂತ್ರಕರು ಮಧ್ಯಾಹ್ನ ನಾಲ್ಕೂವರೆ ನಂತರ ಇರುವುದಿಲ್ಲ. ಹೀಗಾಗಿ ಬಸ್​ಗಳ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಇಬ್ಬರು ಸಾರಿಗೆ ನಿಯಂತ್ರಕರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

    ಮನವಿ

    ಬಸ್ ನಿಲ್ದಾಣದೊಳಗೆ ಒಂದು ಭಾಗದಲ್ಲಿ ಆಟೋ ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಆಟೋ ಚಾಲಕರ ಸಂಘದ ಸದಸ್ಯರು ಅಧ್ಯಕ್ಷ ವಿಷ್ಣು ಜಕ್ಕಲಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಜಾಕೀರ ಬುಡ್ಡಾ ಗದಗ, ಹುಚ್ಚಪ್ಪ ಬೆಟಗೇರಿ, ಅಬ್ದುಲ್ ರೆಹೆಮಾನ್ ಲಕ್ಕುಂಡಿ, ಮಹಮ್ಮದ ನಶೇಖಾನ, ಪ್ರಕಾಶ ಸಂಕನೂರ, ಹುಸೇನ್ ಅತ್ತಾರ, ರಾಮು ಮಣ್ಣೊಡ್ಡರ, ಅಂದಪ್ಪ ಮಡಿವಾಳರ, ಮುತ್ತಣ್ಣ ಹಡಪದ, ಚಿನ್ನಪ್ಪ ಮಾರನಬಸರಿ, ಕೃಷ್ಣಪ್ಪ ಜುಟ್ಟಲ, ಇತರರಿದ್ದರು.

    ಪ್ರಯಾಣಿಕರಿಗೆ ಅನುಕೂಲ ಒದಗಿಸುವುದು ಇಲಾಖೆಯ ಮೊದಲ ಆದ್ಯತೆಯಾಗಿದೆ. ಪ್ರಯಾಣಿಕರೂ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಇಲಾಖೆಯವರೊಂದಿಗೆ ಸಹಕರಿಸಬೇಕು. ನಳಗಳನ್ನು ಕಿತ್ತಬಾರದು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಸಾರಿಗೆ ಸಿಬ್ಬಂದಿ ಪ್ರಯಾಣಿಕರೊಂದಿಗೆ, ಪ್ರಯಾಣಿಕರು ಸಿಬ್ಬಂದಿಯವರೊಂದಿಗೆ ಸೌಜನ್ಯ ಮತ್ತು ಗೌರವದಿಂದ ವರ್ತಿಸಬೇಕು.

    | ದೇವರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts