More

    ಎಲ್ಲ ಸಹಕಾರ ಬ್ಯಾಂಕ್​ಗಳ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಿ: ಡಾ. ಶಂಕರ ಗುಹಾ ಆಗ್ರಹ

    ಬೆಂಗಳೂರು: ಸದನದಲ್ಲಿ ಸಹಕಾರಿ ಸಚಿವರು ಸುಳ್ಳು ನೆಪ ಹೇಳುವುದನ್ನು ಬಿಟ್ಟು ಗುರುರಾಘವೇಂದ್ರ ಬ್ಯಾಂಕ್ ಸಹಿತವಾಗಿ ಸಹಕಾರಿ ಬ್ಯಾಂಕ್​ಗಳ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ. ಶಂಕರ ಗುಹಾ ಆಗ್ರಹಿಸಿದ್ದಾರೆ.

    ಸಹಕಾರಿ ಬ್ಯಾಂಕುಗಳ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿರಿ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಕೊಡಿಸಿ ಎಂದು ವಿವಿಧ ರೀತಿಯಲ್ಲಿ ಒತ್ತಾಯಿಸುತ್ತ ಬಂದರೂ ಸರ್ಕಾರ ಇದಕ್ಕೆ ಕಿವಿಗೊಡುತ್ತಿಲ್ಲ. ಸ್ಥಳೀಯ ಶಾಸಕರಾದ ರವಿಸುಬ್ರಹ್ಮಣ್ಯ ಮತ್ತು ಸಂಸದ ತೇಜಸ್ವಿಸೂರ್ಯ ಅವರಿಗೆ ಎಲ್ಲ ವಿಚಾರ ಗೊತ್ತಿದ್ದರೂ ಈ ಬಗ್ಗೆ ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ಇವರೆಲ್ಲರೂ ಸೇರಿ ಯಾರನ್ನು ಕಾಪಾಡಲು ನೋಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅಲ್ಲದೇ ಇದೀಗ ಅನೇಕ ಹೋರಾಟಗಳಿಂದಾಗಿ, ಚಳುವಳಿಯಿಂದಾಗಿ ಈ ಕುರಿತು ಮೇಲ್ಮನೆಯಲ್ಲಿಯೂ ಚರ್ಚೆ ನಡೆಯುವಂತಾಗಿದ್ದು ಅಲ್ಲಿ ಸದಸ್ಯರುಗಳು ಚರ್ಚೆ ನಡೆಸಿದಾಗ ಸಹಕಾರಿ ಸಚಿವರು ಸರಿಯಾದ ಮಾಹಿತಿ ನೀಡದೆ ಜಾರಿಕೊಂಡಿದ್ದಾರೆ. ಎಂದು ಗುಹಾ ಬೇಸರ ವ್ಯಕ್ತಪಡಿಸಿದ್ದಾರೆ.

    ಮೇಲ್ಮನೆಯ ಕಲಾಪದ ಚರ್ಚೆಯಲ್ಲಿ, ನೀವು ಬಡವರ ಪರವಾಗಿದ್ದರೆ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ ಎಂದು ಬಿ.ಕೆ.ಹರಿಪಸ್ರಾದ್ ಅವರು ಕೇಳಿದ್ದಕ್ಕೆ, ಸಚಿವ ಸೋಮಶೇಖರ್ ಅವರು ಸಿಬಿಐಗೆ ಕೊಡಲು ಅಭ್ಯಂತರವಿಲ್ಲ, ಆದರೆ ವಿಳಂಬವಾಗುತ್ತದೆ. ನಮ್ಮ ಸಿಐಡಿಯವರೇ ಸಮರ್ಥರಿದ್ದಾರೆ. ಆದ್ದರಿಂದ ಕೊಡಲು ಆಗಲ್ಲ ಎಂದಿದ್ದರು. ಆದರೆ ಸತ್ಯ ಏನೆಂದರೆ ಈವರೆಗೂ ಸಹಕಾರಿ ಸಂಸ್ಥೆಗಳ ಹಗರಣಗಳ ಕುರಿತು 22 ಕೇಸ್​ಗಳನ್ನು ಸಿಐಡಿಗೆ ವಹಿಸಿದ್ದು ಒಂದು ಕೂಡ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. 850 ಸಹಕಾರಿ ಸಂಸ್ಥೆಗಳ ಅವ್ಯವಹಾರ ಕುರಿತು ಯಾವುದೇ ರೀತಿಯಾದ ನ್ಯಾಯ ದೊರಕಿಲ್ಲ. ಸುಮಾರು 20 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ಹಗರಣವಿದು. ಇದರಲ್ಲಿ ಬಿಜೆಪಿಯವರು ಇರುವ ಕಾರಣಕ್ಕೆ ವಿಳಂಬ ಆಗ್ತಾ ಇದೆ ಎಂಬ ಪಿ.ಆರ್ ರಮೇಶ ಅವರ ಪ್ರಶ್ನೆಗೆ ಸಚಿವರು ಇದರಲ್ಲಿ ರಾಜಕಾರಣ ಮಾಡೋದು ಬೇಡ ಎಂಬ ಉತ್ತರ ನೀಡಿದ್ದಾರೆ.

    ಹಗರಣದ ತನಿಖೆ ಬಗ್ಗೆ ಇಲ್ಲಿಯವರೆಗೂ ಯಾವುದೇ ಪ್ರಗತಿ ಆಗಿಲ್ಲ. ಅತ್ಯಂತ ಹೆಚ್ಚಿನ ಸಾಲ ಪಡೆದ 24 ಜನರ ಹೆಸರು ಪ್ರಕಟಿಸುವಂತೆ ಕೇಳಿದ್ದರೂ ಪ್ರಕಟಿಸಿಲ್ಲ. ಸಿಐಡಿ ತನಿಖೆ ಏನಾಯ್ತು? ಲೆಕ್ಕಪರಿಶೋಧಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಇ.ಡಿ. ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳ್ತಾರೆ, ಏನು ಪ್ರಗತಿ ಆಗಿದೆ ಎಂದು ಯು.ಬಿ.ವೆಂಕಟೇಶ್ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸಚಿವರು 1294 ಕೋಟಿ ಅವ್ಯವಹಾರ ಆಗಿದೆ ಎಂದು ಆಡಿಟ್ ರಿಪೋರ್ಟ್ ಕೊಟ್ಟಿದ್ದಾರೆ. ಎಫ್​ಐಆರ್ ಆಗಿದೆ, 819 ಕೋಟಿ ರೂ. ಸಾಲ ಪಡೆದವನ ಬಗ್ಗೆ ಇ.ಡಿ. ತನಿಖೆ ನಡೆಸುತ್ತಿದೆ. 1194 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಐಡಿ, ಇಡಿ ಸೂಚನೆ ನೀಡಿದೆ. ಹರಾಜು ಹಾಕಲು ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ. ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತಾಗಿದ್ದು ಜಾರಿಕೊಳ್ಳುವ ಉತ್ತರವಾಗಿದೆ. ಸಚಿವರು ಅಧಿಕಾರಿಗಳು ಬರೆದುಕೊಟ್ಟ ಉತ್ತರವನ್ನಷ್ಟೇ ಓದಿದ್ದಾರೆ.

    ಅದೇನೇ ಇರಲಿ ತನಿಖೆಯನ್ನು ಸಿಬಿಐಗೆ ವಹಿಸಲೇ ಬೇಕು, ಸಂತ್ರಸ್ತರಿಗೆ ಅವರು ಕಷ್ಟ ಪಟ್ಟ ಹಣ ವಾಪಸ್ ಸಿಗಬೇಕು, ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಶಂಕರ ಗುಹಾ ತಿಳಿಸಿದ್ದಾರೆ.

    Video | ಸ್ಟ್ರೆಚರ್​ನಲ್ಲಿ ರೋಗಿಯ ಕರೆದೊಯ್ಯುವಾಗ ನಡೆಯಿತು ಭೀಕರ ಘಟನೆ; ಕುಸಿದ ಲಿಫ್ಟಲ್ಲಿ ಸಿಕ್ಕಿಕೊಂಡ ಸ್ಟ್ರೆಚರ್​, ಕೆಳಕ್ಕೆ ಬಿದ್ದ ರೋಗಿ!

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಅರೆಬೆತ್ತಲೆಯಾಗಿ ಎರಡನೇ ಮಹಡಿಗೆ ಹತ್ತಿ ಒಂಟಿ ಮಹಿಳೆ ಇದ್ದ ಮನೆ ಬಾಗಿಲು ಬಡಿದ; ಇಡೀ ಕಟ್ಟಡದಲ್ಲಿ ಯಾರೂ ಇಲ್ಲದಾಗ ಅವಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts