More

  VIDEO| ಯಾರಿಗೆ ಬೇಕು ಸ್ವಾತಂತ್ರ್ಯ? ನಾನು ನೀಡುತ್ತೇನೆಂದು ಕೂಗಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್​

  ನವದೆಹಲಿ: ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯ ಜಾಮಿಯಾ ಏರಿಯಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಫೈರಿಂಗ್​ ನಡೆಸುವ ಮುನ್ನ “ಯಾರಿಗೆ ಸ್ವಾತಂತ್ರ್ಯ ಬೇಕು? ಅದನ್ನ ನಾನು ನೀಡುತ್ತೇನೆ” ಎಂದು ಘೋಷಣೆ ಕೂಗುತ್ತಿದ್ದ ಎಂದು ತಿಳಿದುಬಂದಿದೆ.

  ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಸೇರಿದಂತೆ ಕೆಲವರು ರಾಜ್​ಘಾಟ್​ವರೆಗೆ ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದರು. ಈ ವೇಳೆ ಅಪರಿಚಿತನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.

  ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಕಪ್ಪು ಬಣ್ಣದ ಜಾಕೆಟ್​ ಧರಿಸಿರುವ ವ್ಯಕ್ತಿಯೊಬ್ಬ ಸಿಂಗಲ್​ ಬ್ಯಾರೆಲ್​ ಪಿಸ್ತೂಲ್​ ಹಿಡಿದು ಹಿಮ್ಮುಖವಾಗಿ ಚಲಿಸುತ್ತಾ ಜಾಮಿಯಾ ಏರಿಯಾದ ಹೋಲಿ ಫ್ಯಾಮಿಲಿ ಹಾಸ್ಪಿಟಲ್​ ಬಳಿ ಗುಂಡಿನ ದಾಳಿ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರತಿಭಟನೆಗೆ ನಿಯೋಜಿಸಲಾಗಿದ್ದ ಪೊಲೀಸರ ನಡುವೆಯೇ ಫೈರಿಂಗ್​ ನಡೆಸಲಾಗಿದೆ.

  ಆರೋಪಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯೇ ತನ್ನ ಹೆಸರು ಗೋಪಾಲ್​ ಎಂದು ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ದೆಹಲಿ ಪೊಲೀಸರು ವ್ಯಕ್ತಿಯ ಹೆಸರನ್ನು ಖಚಿತಪಡಿಸಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.

  ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಮಾಸ್​ ಕಮ್ಯೂನಿಕೇಷನ್​ ಆ್ಯಂಡ್​ ರೀಸರ್ಚ್​ ಸೆಂಟರ್​ ವಿದ್ಯಾರ್ಥಿ ಶಾದಬ್​ ನಾಜರ್​ ಎಂದು ತಿಳಿದುಬಂದಿದೆ. ಆತನನ್ನು ಹೋಲಿ ಫ್ಯಾಮಿಲಿ ಹಾಸ್ಪಿಟಲ್​ಗೆ ದಾಖಲಿಸಲಾಗಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts