More

    ದುಬೈನಿಂದ ಸಂಸದೆ ಮಹುವಾ ಮೊಯಿತ್ರಾ ಸಂಸತ್​ ಖಾತೆಗೆ 47 ಬಾರಿ ಲಾಗಿನ್​! ಇಂದು TMC ನಾಯಕಿಯ ವಿಚಾರಣೆ

    ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮತ್ತು ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರ ಸಂಸತ್ ಖಾತೆಯನ್ನು ದುಬೈನಿಂದ 47 ಬಾರಿ ಪ್ರವೇಶಿಸಲಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

    ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹಣ ಪಡೆದಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಆರೋಪ ಮಾಡಿದ್ದು, ಇದರ ತನಿಖೆ ನಡೆಸುತ್ತಿರುವ ಲೋಕಸಭಾ ನೈತಿಕ ಸಮಿತಿ, ಮಹುವಾ ಮೊಯಿತ್ರಾರನ್ನು ಇಂದು ವಿಚಾರಣೆಗೆ ಕರೆದಿದೆ. ಇದರ ನಡುವೆಯೇ ಮೊಯಿತ್ರಾ ಅವರ ಸಂಸತ್ತಿನ ಖಾತೆಗೆ ದುಬೈನಿಂದ 47 ಬಾರಿ ಪ್ರವೇಶ ಪಡೆದಿರುವ ಸಂಗತಿ ಬಯಲಾಗಿದೆ.

    ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಹಿರಾನಂದಿನ ಬಳಿ ಮೊಯಿತ್ರಾ ಅವರು ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಅವರು ಆರೋಪ ಮಾಡಿದ್ದಾರೆ. ಅಲ್ಲದೆ, ಲೋಕಸಭೆಯ ಲಾಗಿನ್ ಐಡಿಗಳನ್ನು ಸಹ ಉದ್ಯಮಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ದೂರಿದ್ದಾರೆ. ಮೊಯಿತ್ರಾ ಮತ್ತು ಉದ್ಯಮಿ ದರ್ಶನ್​ ಹಿರಾನಂದನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿರುವ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಸಭೆಯ ನೈತಿಕ ಸಮಿತಿ ತನಿಖೆ ನಡೆಸುತ್ತಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಮೊಯಿತ್ರಾಗೆ ಸಮನ್ಸ್​ ನೀಡಿದೆ.

    ಲಾಗಿನ್​ ಐಡಿ ಹಂಚಿಕೆ ಒಪ್ಪಿಕೊಂಡ ಸಂಸದೆ
    ಈ ಪ್ರಕರಣದ ಬೆಳವಣಿಗೆ ನಡುವೆ ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮೊಯಿತ್ರಾ ಅವರು ತಮ್ಮ ಲಾಗಿನ್​ ಐಡಿಗಳನ್ನು ಉದ್ಯಮಿ ದರ್ಶನ್​ ಹಿರಾನಂದನಿ ಜತೆ ಹಂಚಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹಿರಾನಂದನಿ ಬಹುಕಾಲದ ಗೆಳೆಯ ಎಂದು ಹೇಳಿದ್ದಾರೆ. ಆದರೆ, ಯಾವುದೇ ಹಣಕಾಸಿನ ಉದ್ದೇಶ ಇದರ ಹಿಂದೆ ಇರಲಿಲ್ಲ ಎಂದು ದೃಢವಾಗಿ ಹೇಳಿದ್ದು, ತನ್ನ ಖಾತೆಯನ್ನು ಬಳಸಿಕೊಂಡು ಕೇಳಲಾದ ಪ್ರಶ್ನೆಗಳು ನನ್ನದೇ ಎಂದು ಖಚಿತಪಡಿಸಿದ್ದಾರೆ.

    ವಿದೇಶ ಪ್ರವಾಸ
    ಮಹುವಾ ಮೊಯಿತ್ರಾ ಅವರು ಸಂಸತ್ತಿನ ಸದಸ್ಯರಾಗಿದ್ದ ಅವಧಿಯಲ್ಲೇ ಲೆಕ್ಕಕ್ಕೆ ಸಿಗದ 14 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಈ ಪ್ರವಾಸಗಳಿಗೆ ಸಂಬಂಧಿಸಿದಂತೆ ಸ್ಪೀಕರ್ ಕಚೇರಿಗೆ ಅಗತ್ಯ ಮಾಹಿತಿ ನೀಡಿಲ್ಲ ಎಂದು ಬಿಜೆಪಿ ಮೂಲಗಳು ಆರೋಪಿಸಿವೆ. 2022ರ ಮೇ 10ರಂದು ಯುಕೆ, 2022ರ ನವೆಂಬರ್​ 20ರಂದು ಯುನೈಟೆಡ್ ಅರಬ್ ಎಮಿರೇಟ್ಸ್, 2013 ಮೇ 13ರಂದು ಯುನೈಟೆಡ್ ಸ್ಟೇಟ್ಸ್, 2023 ಜೂನ್ 13 ರಂದು ಫ್ರಾನ್ಸ್, 2023ರ ಆಗಸ್ಟ್ 11ರಂದು​ ಯುಎಇ ಹಾಗೂ 2023ರ ಸೆಪ್ಟೆಂಬರ್​ 1ರಂದು ಮತ್ತೊಮ್ಮೆ ಫ್ರಾನ್ಸ್​ ಪ್ರವಾಸ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದಲ್ಲದೆ, ಮೊಯಿತ್ರಾ ಅವರ ಅಂತಾರಾಷ್ಟ್ರೀಯ ಪ್ರವಾಸಗಳಲ್ಲಿ 2013ರ ಫೆಬ್ರವರಿ 13 ರಂದು ಯುಕೆ, 2019ರ ಸೆಪ್ಟೆಂಬರ್ 2 ರಂದು ಯುನೈಟೆಡ್ ಸ್ಟೇಟ್ಸ್, 2019ರ ಅಕ್ಟೋಬರ್ 8 ರಂದು ಬಾಂಗ್ಲಾದೇಶ ಮತ್ತು 2020ರ ಜನವರಿ 12 ರಂದು ಯುಕೆ ಪ್ರವಾಸಗಳು ಸೇರಿವೆ. ಹೆಚ್ಚುವರಿಯಾಗಿ 2020 ಫೆಬ್ರವರಿ 13ರಂದು ಯುನೈಟೆಡ್ ಸ್ಟೇಟ್ಸ್​ಗೆ ಭೇಟಿ ನೀಡಿದರು. 2020ರ ಮಾರ್ಚ್ 6 ರಂದು ನೇಪಾಳ, 2020ರ ಅಕ್ಟೋಬರ್ 1 ರಂದು ಯುಕೆ ಮತ್ತು 2021ರ ನವೆಂಬರ್ 7 ರಂದು ಯಎಇ ಪ್ರವಾಸ ಮಾಡಿದ್ದಾರೆಂದು ತಿಳಿದುಬಂದಿದೆ.

    ವಕೀಲ ದೆಹದ್ರಾಯಿ ಅವರ ಆರೋಪವನ್ನು ಆಧರಿಸಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಇದಾದ ಬಳಿಕ ನೈತಿಕ ಸಮಿತಿಗೆ ಪತ್ರ ಬರೆದಿದ್ದು, ಉದ್ಯಮಿ ದರ್ಶನ್ ಹಿರಾನಂದನಿ ಅವರ ಸೂಚನೆಯಂತೆ ಟಿಎಂಸಿ ಸಂಸದರು ತಮ್ಮ ಸಂಸದೀಯ ಖಾತೆಯ ಮೂಲಕ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಪ್ರತಿಪಾದಿಸಿದರು. ಇದರ ಹಿಂದೆ ಹಣದ ಉದ್ದೇಶಗಳನ್ನು ಉಲ್ಲೇಖಿಸಿರುವ ದುಬೆ, ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ಹಿರಾನಂದನಿ, ಮಹುವಾ ಮೊಯಿತ್ರಾ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ತೃಣಮೂಲ ನಾಯಕಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. (ಏಜೆನ್ಸೀಸ್​)

    ದುಡ್ಡಿದ್ದವರಿಗಷ್ಟೇ ಸರ್ಕಾರಿ ನೌಕ್ರಿ!: ಪ್ರತಿ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ; ಜೈಲಿಂದ ಹೊರಬಂದ ಹಳೇ ಆರೋಪಿಗಳಿಂದಲೇ ಮತ್ತೆ ಡೀಲ್

    ಬರ ಸಂಕಷ್ಟಕ್ಕೆ ಅನಪೇಕ್ಷಿತ ಪರಿಹಾರ: ಎನ್​ಡಿಆರ್​ಎಫ್ ನಿಯಮಗಳಲ್ಲಿನ ಅವಕಾಶ ಬಳಕೆಗೆ ಮುಂದಾದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts