More

    ಶಿಕ್ಷಣದಿಂದ ಮಾತ್ರ ಹಕ್ಕು ಪಡೆಯಲು ಸಾಧ್ಯ

    ಕಕ್ಕೇರಾ: ಎಲ್ಲರೂ ಶಿಕ್ಷಣವಂತರಾದಾಗ ಮಾತ್ರ ನಮ್ಮ ಹಕ್ಕು ಪಡೆಯಲು ಸಾಧ್ಯವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು ತಾಲೂಕು ಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಂತೆ ಎಲ್ಲರೂ ಶಿಕ್ಷಣವಂತರಾಗಿ ಸಂಘಟಿತ ಹೋರಾಟದೊಂದಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳೆಯಬೇಕು ಎಂದರು.

    ಪುತ್ಥಳಿ ಅನಾವರಣದ ಕನಸು ಬಹುದಿನಗಳ ನಂತರ ನನಸಾಗಿದೆ. ವಾಲ್ಮೀಕಿ ಅವರ ತತ್ವಾದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲ ಸಮುದಾಯದೊಂದಿಗೆ ಸಹೋದರತ್ವ ಭಾವದಿಂದ ಬಾಳಬೇಕು ಎಂದು ಕಿವಿಮಾತು ಹೇಳಿದರು.

    ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದ್ದರು. ಅದೇ ರೀತಿ ಎರಡನೇ ಸಲ ಬಡವರಿಗೆ ಹಲವು ಗ್ಯಾರಂಟಿಗಳನ್ನು ಘೋಷಿಸುವ ಆರ್ಥಿಕ ಸಮಸ್ಯೆಗೆ ಸ್ಪಂದಿಸಿದ್ದಾರೆ. ನಮ್ಮ ಸಮಾಜಕ್ಕಾಗಿ ಹಲವು ಸಲ ಹೋರಾಟ ಮಾಡಿ ಮೀಸಲಾತಿ ಪಡೆದರೂ ಪ್ರಗತಿಯಾಗಿಲ್ಲ. ಪಕ್ಷಾತೀತವಾಗಿ ಸಮಾಜದ ಉನ್ನತಿಗಾಗಿ ಶ್ರಮಿಸುವ ಅಗತ್ಯವಿದೆ. ತಿಂಥಣಿ ಬಳಿ ೨೦ ಎಕರೆ ಭೂಮಿ ಖರೀದಿಸಿದ್ದು, ಶೀಘ್ರವೇ ವಾಲ್ಮೀಕಿ ಮಠ ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕವಾಗಿ ಸಮಾಜ ಪ್ರಗತಿ ಹೊಂದುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ವಾಲ್ಮೀಕಿ ಸಮಾಜದ ಉನ್ನತಿ ಮತ್ತು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಹಿಂದುಳಿದ ವರ್ಗಗಳ ಸಚಿವ ಬಿ.ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಬಸನಗೌಡ ದದ್ದಲ್, ಮಾಜಿ ಶಾಸಕ ನರಸಿಂಹ ನಾಯಕ, ಮಾಜಿ ಸಂಸದ ಬಿ.ವಿ. ನಾಯಕ ಮಾತನಾಡಿದರು.

    ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರ ಸ್ವಾಮೀಜಿ, ವೀರಗಟ್ಟದ ಶ್ರೀ ಅಡವಿಲಿಂಗ ಮಹಾರಾಜ, ಗೊಲಪಲ್ಲಿಯ ಶ್ರೀ ವರದಾನೇಶ್ವರ ಸ್ವಾಮೀಜಿ, ಭೀಮಣ್ಣ ಮುತ್ಯಾ, ಕರಿಮಡ್ಡೆಪ್ಪ ತಾತಾ, ಸುರಪುರ ಸಂಸ್ಥಾನದ ಅರಸು ರಾಜಾ ಕೃಷ್ಣಪ್ಪ ನಾಯಕ, ಶಾಸಕ ಹಂಪಯ್ಯ ನಾಯಕ, ಮುಖಂಡರಾದ ಶ್ರೀದೇವಿ ನಾಯಕ, ಸೀತಾರಾಮನಾಯಕ ಜಹಾಗೀರದಾರ್, ರಾಜಾ ವೇಣುಗೋಪಾಲ ನಾಯಕ, ಶಾಂತಗೌಡ ಚನ್ನಪಟ್ಟಣ, ಹನುಮಂತರಾಯ ಜಹಾಗೀರದಾರ್, ವೆಂಕಟೇಶ ನಾಯಕ ಜಹಾಗೀರದಾರ್, ಟಿಎಚ್‌ಒ ಡಾ.ರಾಜಾ ವೆಂಕಟಪ್ಪ ನಾಯಕ, ಗೌಡಪ್ಪಗೌಡ ಆಲ್ದಾಲ್, ವಿಠ್ಠಲ್ ಯಾದವ್, ವೆಂಕೋಬ ಸಾಹುಕಾರ, ರಾಜಶೇಖರಗೌಡ ವಜ್ಜಲ್, ಗುಂಡಪ್ಪ ಸೋಲಾಪುರ, ರಮೇಶ ದೊರೆ, ಸಿದ್ದನಗೌಡ ಕರಿಭಾವಿ, ಶರಣಕುಮಾರ ಸೋಲಾಪುರ, ಗಂಗಾಧರ ನಾಯಕ ಇತರರಿದ್ದರು.

    ಮಾನಯ್ಯ ಕವಾಲ್ದಾರ್ ಸ್ವಾಗತಗೀತೆ ಹಾಡಿದರು. ಗುರು ಹುಲಕಲ್ ಸ್ವಾಗತಿಸಿದರು. ಸಣ್ಣೆಕ್ಕೆಪ್ಪ ಪ್ರಾಸ್ತಾವಿಕ ಮಾತನಾಡಿದರು. ಚಂದ್ರು ವಜ್ಜಲ್ ವಂದಿಸಿದರು. ಶಿವಶರಣ ದೇಸಾಯಿ ನಿರೂಪಣೆ ಮಾಡಿದರು.

    ಕೇಕೆ ಹಾಕಿದ ಸಭಿಕರು: ವೇದಿಕೆ ಆಗಮಿಸಿದ ಸಚಿವ ಬಿ.ನಾಗೇಂದ್ರ ಅವರನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಬರಮಾಡಿಕೊಳ್ಳುತ್ತಿದ್ದಂತೆ ಮಾಜಿ ಶಾಸಕ ನರಸಿಂಹ ನಾಯಕ (ರಾಜುಗೌಡ) ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ನೆರೆದಿದ್ದ ಸಭಿಕರು ಕೇಕೆ ಹಾಕಿದರೆ, ವೇದಿಕೆಯಲ್ಲಿದ್ದ ಮುಖಂಡರು ಮುಗುಳ್ನಕ್ಕ ಪ್ರಸಂಗ ಜರುಗಿತು.

    ಗಮನಸೆಳೆದ ಮೆರವಣಿಗೆ: ಪುತ್ಥಳಿ ಅನಾವರಣ ನಿಮಿತ್ತ ಗ್ರಾಮದ ಪ್ರಮುಖ ಬೀದಿಯಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಈ ವೇಳೆ ಚಿತ್ರದುರ್ಗದ ಚಳ್ಳಿಕೆರೆಯ ಗೊಂಬೆಗಳ ನೃತ್ಯ, ಇದಕ್ಕೆ ಚಿಕ್ಕ ಮಕ್ಕಳು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ರೋಣ ತಾಲೂಕಿನ ಕೊತಬಾಳ ಕಲಾ ತಂಡದ ಜನಪದ ಹಾಡು ಮತ್ತು ನೃತ್ಯ ಮೆರಗಣಿಗೆಯ ಕೇಂದ್ರ ಬಿಂದು ಎನಿಸಿತು.

    ಸಮಾಜದ ಯುವಕರಲ್ಲಿ ಚೈತನ್ಯ ಕುಂಠಿತಗೊಂಡಿದೆ. ದುಶ್ಚಟಗಳನ್ನು ಬಿಟ್ಟು ಜೀವನ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಮುಂಬರುವ ದಿನಗಳಲ್ಲಿ ಸಮಾಜದ ನಾಯಕರೊಬ್ಬರು ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ.
    | ಬಿ.ನಾಗೇಂದ್ರ ಹಿಂದುಳಿದ ವರ್ಗಗಳ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts