More

  ಸಾಂಸ್ಕೃತಿಕ ನಾಯಕ ಬಸವಣ್ಣ ಪಟ ಅನಾವರಣ

  ಅವಳಿ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ

  ಬಳ್ಳಾರಿ : ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣ ಅವರ ಆದರ್ಶ ಜೀವನ ಮಾದರಿಯಾಗಿದ್ದು, ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.

  ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಶನಿವಾರ ಏರ್ಪಡಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಅವರ ಭಾವಚಿತ್ರ ಅನಾವರಣ ಸಮಾರಂಭದಲ್ಲಿ ಮಾತನಾಡಿದರು. ಬಸವಣ್ಣ ಅವರು ಲಿಂಗ, ಜಾತಿ ಮತ್ತು ಸಾಮಾಜಿಕ ಸ್ಥಾನಮಾನ ಲೆಕ್ಕಿಸದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಹೊಸ ಜೀವನ ವಿಧಾನ ಪ್ರತಿಪಾದಿಸಿದವರು ಎಂದರು.

  ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಬಸವಣ್ಣ ಅವರು ಎಲ್ಲ ವರ್ಗದ ಜನರ ಶೋಷಣೆ ವಿರುದ್ಧ ಹೋರಾಡಿದವರು. ಆದರ್ಶ ಸಮಾಜದ ಪರಿಕಲ್ಪನೆ ಮೂಡಿಸಿದವರು ಎಂದರು.

  ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಮಾತನಾಡಿ, 12ನೇ ಶತಮಾನದಲ್ಲಿಯೇ ಶೋಷಣೆ ವಿರುದ್ಧ ಧ್ವನಿ ಎತ್ತಿದವರು. ವಚನಗಳು ಕನ್ನಡ ಸಾಹಿತ್ಯದ ವಿಶಿಷ್ಟ ರೂಪವಾಗಿದ್ದು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಬಸವಣ್ಣ ಜನರಲ್ಲಿ ಜಾಗೃತಿ ಮೂಡಿಸುತ್ತ ಸಾಮಾಜಿಕ ಸುಧಾರಣೆಗಳಿಗೆ ಅಡಿಪಾಯ ಹಾಕಿದವರು ಎಂದರು. ಕೆ.ದೊಡ್ಡ ಬಸಪ್ಪ ಗವಾಯಿ ಅವರು ಬಸವಣ್ಣ ಅವರ ಕುರಿತ ವಚನ ಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಇತರರಿದ್ದರು.

  ಮಾನವೀಯ ಮೌಲ್ಯಗಳ ಮೈಗೂಡಿಸಿಕೊಳ್ಳಿ

  ಸಾಂಸ್ಕೃತಿಕ ನಾಯಕ ಬಸವಣ್ಣ ಪಟ ಅನಾವರಣ
  ಹೊಸಪೇಟೆಯ ಡಿಸಿ ಕಚೇರಿಯಲ್ಲಿ ಶನಿವಾರ ಸಾಂಸ್ಕೃತಿಕ ನಾಯಕ ಬಸವಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಸದಾಶಿವ ಬಿ.ಪ್ರಭು, ಎಸ್ಪಿ ಶ್ರೀಹರಿಬಾಬು ಇದ್ದರು.

  ಹೊಸಪೇಟೆ: ಜಗಜ್ಯೋತಿ ಬಸವಣ್ಣ ಅವರ ವಚನಗಳು ಮಾನವೀಯ ಮೌಲ್ಯಗಳಿಂದ ಕೂಡಿದ್ದು, ಅವರ ತತ್ವಗಳು ಮತ್ತು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

  ನಗರದ ಜಿಲ್ಲಾಧಿಕಾರಿ ಕಚೇರಿ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಸಾಂಸ್ಕೃತಿಕ ನಾಯಕ ಬಸವೇಶ್ವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಕೆ ಕಡ್ಡಾಯಗೊಳಿಸಿದೆ. ಅವರ ವಿಚಾರ, ವಚನ ಸಾಹಿತ್ಯದ ಒಳಾರ್ಥಗಳನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು. ಆಡಳಿತದ ನೈಪುಣ್ಯತೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

  ಕೊಪ್ಪಳ ಜಿಲ್ಲೆ ಹಿಟ್ನಾಳದ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಚ್.ಬಸವರಾಜ ಮಾತನಾಡಿ, ಬಸವಣ್ಣ ಅವರು ಪ್ರಸ್ತಾಪಿಸಿದ 5 ಆಚಾರಗಳಾದ ಸದಾಚಾರ, ಶಿವಾಚಾರ, ಲಿಂಗಾಚಾರ, ದೃತ್ಯಾಚಾರ, ಋಣಾಚಾರಗಳನ್ನು ನಮಗೆ ಗೊತ್ತಿಲ್ಲದೆ ಮೈಗೂಡಿಸಿಕೊಂಡಿದ್ದೇವೆ ಎಂದರು.

  ಜಿಪಂ ಸಿಇಒ ಸದಾಶಿವ ಬಿ.ಪ್ರಭು, ಎಸ್ಪಿ ಶ್ರೀಹರಿ ಬಾಬು, ಹೊಸಪೇಟೆ ಉಪವಿಭಾಗಾಧಿಕಾರಿ ಮಹಮದ್ ಅಲಿ ಅಕ್ರಮ್ ಷಾ, ತಹಸೀಲ್ದಾರ್ ಎಂ.ಎಂ.ಶ್ರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ, ಪ್ರಮುಖರಾದ ಜಿ.ತಮ್ಮನಾಳಪ್ಪ, ನಿಮಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಮಾವಿನಹಳ್ಳಿ ಬಸವರಾಜ, ಶರಣಸ್ವಾಮಿ, ಇಟಗಿ ಸಂಗಪ್ಪ, ಈಶ್ವರಪ್ಪ, ಸಂಗಪ್ಪ ಧರ್ಮಸಾಗರ, ಗುಜ್ಜಲ ಗಣೇಶ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts