More

    ಕಾರ್ಯಗತವಾಗದ ಜೀನ್ಸ್ ಅಪರೆಲ್ ಪಾರ್ಕ್

    ಬಳ್ಳಾರಿ: ಕಳೆದ ವಿಧಾನಸಭಾ ಚುನಾವಣೆ ವೇಳೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಯಲ್ಲಿ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ನಿರ್ಮಾಣದ ಭರವಸೆ ನೀಡಿದ್ದರು. ಒಂದು ವರ್ಷ ಕಳೆದರೂ ಅವರ ಭರವಸೆ ಈಡೇರಿಲ್ಲ. ಇದೀಗ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಏ.26ರಂದು ನಗರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಮತ್ತೆ ಯಾವ ಭರವಸೆ ನೀಡಲಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ ಬಳ್ಳಾರಿ ಮೂಲಕ ಹಾದು ಹೋಗಿತ್ತು. ರಾಜ್ಯದ ಬಳ್ಳಾರಿಯಲ್ಲಿ ಮಾತ್ರ ಭಾರತ್ ಜೋಡೋ ಯಾತ್ರೆಯ ಸಮಾವೇಶ ಆಯೋಜಿಸಿಲಾಗಿತ್ತು. ಈ ಸಂದರ್ಭದಲ್ಲಿ ಮೂರು ದಿನ ಬಳ್ಳಾರಿಯಲ್ಲೇ ಇದ್ದ ರಾಹುಲ್ ಗಾಂಧಿ ಕೌಲ್ ಬಜಾರ್ ಪ್ರದೇಶದ ಜೀನ್ಸ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದರು.

    ಜೀನ್ಸ್ ತಯಾರಿಕೆ, ಏನೆಲ್ಲ ಸೌಕರ್ಯಗಳು ಬೇಕು ಎಂದು ಮಾಲೀಕರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದರು. ನಂತರ ವಿಧಾನಸಭಾ ಚುನಾವಣೆ ವೇಳೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸಚಿವ ಬಿ.ನಾಗೇಂದ್ರ, ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಾಸಕ ನಾರಾ ಭರತರೆಡ್ಡಿ ಪರ ಪ್ರಚಾರ ಕೈಗೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದು, ಎರಡು ಬಜೆಟ್ ಮಂಡಿಸಲಾಗಿದೆ. ಆದರೆ, ಜೀನ್ಸ್ ಅಪರೆಲ್ ಪಾರ್ಕ್‌ಗೆ ಅನುದಾನ ನೀಡಿಲ್ಲ. ಇದರಿಂದಾಗಿ ರಾಹುಲ್ ಗಾಂಧಿ ನೀಡಿದ್ದ ಜೀನ್ಸ್ ಅಪರೆಲ್ ಪಾರ್ಕ್ ಭರವಸೆ ಯಾವಾಗ ಈಡೇರಲಿದೆ ಎಂಬುದು ಪ್ರಶ್ನೆಯಾಗಿದೆ.

    ಕಾಂಗ್ರೆಸ್ ಅಧಿಕಾರ ಅವಧಿಯಲ್ಲೇ ಜಿಲ್ಲೆಯಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ಆರಂಭಿಸಲಾಗುವುದು. ಈ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದ್ದು, ಡಿಪಿಆರ್ ಮಾಡಲು ಸೂಚಿಸಲಾಗಿದೆ.
    | ಬಿ.ನಾಗೇಂದ್ರ ಜಿಲ್ಲಾ ಉಸ್ತುವಾರಿ ಸಚಿವ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts