More

    ಶಿವನಾಲಯಗಳಲ್ಲಿ ಮಹಾಶಿವರಾತ್ರಿ ಸಂಭ್ರಮ

    ಪಡುಬಿದ್ರಿ: ಉಚ್ಚಿಲ, ಪಲಿಮಾರು ಹಾಗೂ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ವಾರ್ಷಿಕೋತ್ಸವ ಪೂರ್ವಭಾವಿ ಮಹಾಶಿವರಾತ್ರಿ ದಿನ ಶುಕ್ರವಾರ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಧ್ವಜಾರೋಹಣ ನೆರವೇರಿತು. ಉಚ್ಚಿಲ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿ ಕಂಬ್ಳಕಟ್ಟ ಸುರೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ನವಗ್ರಹ ಹೋಮ, ವೃಷಾಧಿವಾಸ ಹೋಮಗಳು ನಡೆದು ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ನವಕ ಪ್ರಧಾನ ಹೋಮ, ಕಲಶಾಭಿಷೇಕಗಳು ಜರುಗಿ ಮಹಾಪೂಜೆ ಸಂಪನ್ನಗೊಂಡಿತು. ಶಿವರಾತ್ರಿ ವಿಶೇಷ ಭಜನೆ, ಬಿಲ್ವ ಪತ್ರಾರ್ಚನೆ, ಉಚ್ಚಿಲ ಬ್ರಾಹ್ಮಣ ಮಹಾಸಭಾ ವತಿಯಿಂದ ರುದ್ರ ಪಾರಾಯಣಗಳು ನಡೆದವು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದ್ಯುಮಣಿ ಭಟ್, ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಯು.ಸೀತಾರಾಮ ಭಟ್, ಸದಸ್ಯರಾದ ಕಿಶೋರ್ ಎಂ.ಶೆಟ್ಟಿ, ಜಯಕರ ಶೆಟ್ಟಿ, ಗಣೇಶ್ ಮೇಸ್ತ್ರಿ, ನಾರಾಯಣ ಬೆಳ್ಚಡ, ಪುಟ್ಟಮ್ಮ ಶ್ರೀಯಾನ್, ಸುಲೋಚನಾ ದೇವಾಡಿಗ, ಚಂದ್ರಶೇಖರ ಶೆಟ್ಟಿ, ಚಂದ್ರಶೇಖರ ಕೋಟ್ಯಾನ್, ಗಂಗಾಧರ ಸುವರ್ಣ ಉಚ್ಚಿಲ, ವೈ.ಗಂಗಾಧರ ಸುವರ್ಣ, ಎನ್.ಡಿ.ಬಂಗೇರ, ಶ್ರೀಧರ ಭಟ್ ಉಚ್ಚಿಲ, ಕುಶ ಭಟ್ ಬದ್ಧಿಂಜೆ ಮಠ ಇದ್ದರು. ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.24ರಂದು ಮಹಾರಥೋತ್ಸವ ಸಂಪನ್ನಗೊಳ್ಳಲಿದೆ. ಫೆ.22ರಂದು ರಾತ್ರಿ ಜವನೆರ್ ಉಚ್ಚಿಲ ತಂಡದಿಂದ ಕಣಂಜಾರು ದಿನಕರ ಭಂಡಾರಿ ರಚನೆಯ ಅಮ್ಮೆರ್ ನೆರ್ಪೆರ್ ತುಳು ಹಾಸ್ಯಮಯ ನಾಟಕ ನಡೆಯಲಿದೆ.

    ಪಲಿಮಾರು ದೇಗುಲದಲ್ಲಿ 25ರಂದು ರಥೋತ್ಸವ
    ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಧರ್ಮಶಾಸ್ತ ದೇವಸ್ಥಾನದಲ್ಲಿ ಪ್ರಧಾನ ತಂತ್ರಿ ಪಿ.ವಾಸುದೇವ ಉಡುಪ ಮತ್ತು ಪ್ರಧಾನ ಅರ್ಚಕ ಪಿ.ಆರ್.ಶ್ರೀನಿವಾಸ ಉಡುಪ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಧ್ವಜಾರೋಹಣ ನೆರವೇರಿತು. ದೇವರಿಗೆ ಕಲಶಾಭಿಷೇಕ, ಬಲಿ, ಮಹಾಪೂಜೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ವಿಮಾನೋತ್ಸವ ಹಾಗೂ ಶಿವಪೂಜೆ ನಡೆಯಿತು. ಫೆ.25ರಂದು 11.30ಕ್ಕೆ ರಥಾರೋಹಣ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ 9.30ಕ್ಕೆ ರಥೋತ್ಸವ ಸಂಪನ್ನಗೊಳ್ಳಲಿದೆ. ಫೆ.23ರಂದು ಬಡಗು ಸವಾರಿ, 24ರಂದು ಮೂಡು ಸವಾರಿ, ಗೋಪುರ ದೀಪ, 26ರಂದು ಸಾಯಂಕಾಲ 5.30ರಿಂದ ಸಾರ್ವಜನಿಕ ಹರಕೆ ಹೂವಿನ ಪೂಜೆ ನೆರವೇರಲಿದೆ.

    ಹೆಜಮಾಡಿಯಲ್ಲಿ 26ರಂದು ಮಹಾರಥೋತ್ಸವ
    ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಊರವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಫೆ.23ರಂದು ಬೆಳಗ್ಗೆ ರುದ್ರಯಾಗ, 24ರಂದು ಬೆಳಗ್ಗೆ ದುರ್ಗಾಹೋಮ, ರಾತ್ರಿ ಉತ್ಸವ ಬಲಿ, ಬಾಕಿಮಾರು ದೀಪ, 25ರಂದು ರಾತ್ರಿ ಉತ್ಸವ ಬಲಿ, ಪಡು ಸವಾರಿ, 26ರಂದು ಮಧ್ಯಾಹ್ನ ಮಹಾರಥಾರೋಹಣ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10.30ಕ್ಕೆ ಮಹಾರಥೋತ್ಸವ, 27ರಂದು ಬೆಳಗ್ಗೆ ಕವಾಟೋದ್ಘಾಟನೆ, 28ರಂದು ಮುಂಜಾನೆ ಧ್ವಜಾವರೋಹಣ, ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ಸಂಪನ್ನಗೊಳ್ಳಲಿದೆ. ಉತ್ಸವ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts