More

    ಮಡಿವಾಳ ಮಾಚಿದೇವ ಶ್ರಮಿಕರ ನೈಜ ನೇತಾರ: ಸಚಿವ ಈಶ್ವರಪ್ಪ ಬಣ್ಣನೆ

    ಶಿವಮೊಗ್ಗ: ಕೇವಲ ಮಾತು ಮತ್ತು ಉಪನ್ಯಾಸ ನೀಡದೆ ಕಾಯಕಯೋಗಿಯಾಗಿದ್ದ ಮಡಿವಾಳ ಮಾಚಿದೇವ ಅವರು ಬೆವರು ಸುರಿಸುವ ವರ್ಗದ ನೈಜ ನೇತಾರ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
    ಕುವೆಂಪುರಂಗಮಂದಿರದಲ್ಲಿ ಮಂಗಳವಾರ ಮಡಿವಾಳ ಮಾಚಿದೇವರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮಾಚಿದೇವರು ಎಲ್ಲ ವರ್ಗದವರ ಬಟ್ಟೆಗಳನ್ನು ಸ್ವಚ್ಛ ಮಾಡುವ ಮೂಲಕ ಇಡೀ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದರು.
    ಮಾಚಿದೇವರು ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ಬಟ್ಟೆ ಮಡಿ ಮಾಡದಿದ್ದರೆ ಸಮಾಜದ ಗೌರವ ಉಳಿಯುತ್ತಿರಲಿಲ್ಲ. ಹೀಗೆ ಸಮಾಜಕ್ಕೆ ಗೌರವ ತಂದ ಮಡಿವಾಳ ಮಾಚಿದೇವರ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಮಾಚಿದೇವರು ತ್ಯಾಗಿಗಳು, ನನಗೆ ಎನ್ನುವುದಕ್ಕಿಂತ ಸಮಾಜಕ್ಕಾಗಿ ಬದುಕಿದವರು. ಸೋಮಾರಿತನ ಬಿಟ್ಟು ನಿತ್ಯ ಕಾಯಕದಲ್ಲಿ ತೊಡಗುವಂತೆ ಸಂದೇಶ ನೀಡಿದ ಅವರು ನಮ್ಮೆಲ್ಲರ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.
    ಚಿತ್ರದುರ್ಗ ಮಠದ ಬಸವ ಮಾಚಿದೇವರ ನೇತೃತ್ವದಲ್ಲಿ ಸೋಮವಾರವಷ್ಟೇ ದಲಿತ ಮತ್ತು ಹಿಂದುಳಿದ ಮಠಗಳ ಮಠಾಧೀಶರು ಒಟ್ಟಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದುಳಿದವರ ಶಿಕ್ಷಣಕ್ಕೆ ಬೆಂಬಲ ನೀಡುವಂತೆ ಮನವಿ ಸಲ್ಲಿಸಿರುವುದು ಸಂತಸದ ವಿಷಯ. ಕರೊನಾ ಹಿನ್ನೆಲೆಯಲ್ಲಿ ಜಯಂತಿಯನ್ನು ಈ ವರ್ಷ ಸರಳವಾಗಿ ಆಚರಿಸುತ್ತಿದ್ದು, ಮುಂದಿನ ವರ್ಷ ವಿಜೃಂಭಣೆಯಿಂದ ಆಚರಿಸೋಣ ಎಂದು ಆಶಿಸಿದರು.
    ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ಎಂ.ಎಸ್.ಸುರೇಶ್ ಮಾತನಾಡಿ, ಮಡಿವಾಳ ಮಾಚಿದೇವರ ಕುರಿತು ಮಕ್ಕಳಿಗೂ ಪಾಠ ಪ್ರವಚನದ ಮೂಲಕ ತಿಳಿಸುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಪ್ರಧಾನ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷರಾದ ವೈ.ಮುನಿಯಪ್ಪ, ಮಂಜಪ್ಪ, ಕಾರ್ಯದರ್ಶಿ ಎಚ್.ಆರ್.ಬಸವರಾಜ್, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಎಸ್.ಅರುಣ್‌ಕುಮಾರ್, ಮುಖಂಡರಾದ ಎನ್.ಮಂಜುನಾಥ್, ಸಿದ್ದಲಿಂಗಪ್ಪ, ಹಿರಣಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts