More

    ಮಡಿಕೇರಿ ಎಫ್‌ಎಂಕೆಎಂಸಿ ತಂಡ ಚಾಂಪಿಯನ್

    ವಿರಾಜಪೇಟೆ: ಸೇಂಟ್ ಆನ್ಸ್ ಪದವಿ ಕಾಲೇಜಿನ ಬಿಬಿಎ ವಿಭಾಗ ಮತ್ತು ದೈಹಿಕ ಶಿಕ್ಷಣ ವಿಭಾಗಗಳ ವತಿಯಿಂದ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗೆ ಬುಧವಾರ ತೆರೆ ಬಿದ್ದಿತು.

    ಒಟ್ಟು ಹದಿನಾರು ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಎರಡನೇ ದಿನ ವಿರಾಜಪೇಟೆಯ ಕಾವೇರಿ ಕಾಲೇಜು ಎ ತಂಡ ಮತ್ತು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ನಡುವೆ ಪ್ರಥಮ ಸೆಮಿಫೈನಲ್ ಪಂದ್ಯ ನಡೆಯಿತು. ಮೂರ್ನಾಡು ಪ್ರಥಮ ದರ್ಜೆ ತಂಡ ಕಾವೇರಿ ಕಾಲೇಜು ತಂಡವನ್ನು 2-0 ಗೋಲುಗಳಿಂದ ಮಣಿಸಿತು.

    ಎರಡನೇ ಸೆಮಿಫೈನಲ್ ಪಂದ್ಯವು ಕಾವೇರಿ ಕಾಲೇಜು ಬಿ ತಂಡ ಮತ್ತು ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಎ ತಂಡಗಳ ನಡುವೆ ನಡೆಯಿತು. ಇದರಲ್ಲಿ ಕಾರ್ಯಪ್ಪ ಕಾಲೇಜು ತಂಡವು 3-0 ಗೋಲುಗಳಿಂದ ಕಾವೇರಿ ಕಾಲೇಜು ತಂಡವನ್ನು ಮಣಿಸಿತು. ಅಂತಿಮವಾಗಿ ಮಡಿಕೇರಿಯ ಎಫ್‌ಎಂಕೆಎಂ ಸಿ ಕಾಲೇಜು ತಂಡ ಮತ್ತು ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡ ಫೈನಲ್ ಪ್ರವೇಶಿಸಿದವು.

    ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ಸಮಾನವಾಗಿ 3-3 ಗೋಲು ದಾಖಲಿಸಿದವು. ತದನಂತರ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಮಡಿಕೇರಿಯ ಎಫ್‌ಎಂಕೆಎಂಸಿ ತಂಡ 6-5 ಗೋಲುಗಳ ಅಂತರದಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

    ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸೇಂಟ್ ಆನ್ಸ್ ಪಿಯು ಕಾಲೇಜು ಪ್ರಾಂಶುಪಾಲ ರೆ.ಫಾ.ಮದಲೈ ಮುತ್ತು, ಕ್ರೀಡೆಯಿಂದ ಒಗ್ಗಟ್ಟು ಮೂಡಲಿದೆ. ಮಾತ್ರವಲ್ಲದೆ ರಾಷ್ಟ್ರದ ಪ್ರಗತಿಗೆ ಪೂರಕವಾಗಿದೆ ಎಂದರು.

    ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ರಾಷ್ಟ್ರಮಟ್ಟಕ್ಕೂ ವ್ಯಾಪಿಸಬೇಕು. ವಿದ್ಯಾರ್ಥಿಗಳು ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಗುರಿಯನ್ನು ಮುಟ್ಟಲು ಸಾಧ್ಯ ಎಂದರು.

    ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಬಿಬಿಎ ವಿಭಾಗದ ಮುಖ್ಯಸ್ಥೆ ಆಯೋಜಕಿ ಬಿ.ಡಿ.ಹೇಮಾ , ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ.ರಾಜ ರೈ, ಕ್ರೀಡಾ ನಾಯಕ ತನಿಷ್ ಉಪಸ್ಥಿತರಿದ್ದರು. ಅತಿಥಿಗಳು ಆಟಗಾರರಿಗೆ ಪಾರಿತೋಷಕ ವಿತರಿಸಿದರು.

    ವೈಯಕ್ತಿಕ ವಿಭಾಗದಲ್ಲಿ ಬೆಸ್ಟ್ ಗೋಲ್ಕೀಪರ್ ಪ್ರಶಸ್ತಿಯನ್ನು ಮಡಿಕೇರಿ ಎಫ್‌ಎಂಕೆಎಂಸಿ ಕಾಲೇಜಿನ ಯಶ್‌ವಂತ್, ಮ್ಯಾನ್ ಆಫ್‌ದ ಮ್ಯಾಚ್ ಪ್ರಶಸ್ತಿಯನ್ನು ಮೂರ್ನಾಡು ಕಾಲೇಜಿನ ಸುಬ್ರಮಣಿ, ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ಮಡಿಕೇರಿ ಎಫ್‌ಎಂಕೆಎಂಸಿ ತಂಡದ ಸುಗುಣ್, ಶಿಸ್ತುಬದ್ಧ ಆಟಗಾರ ಪ್ರಶಸ್ತಿಯನ್ನು ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪೊನ್ನಣ್ಣ ಪಡೆದುಕೊಂಡರು.

    ಪಂದ್ಯಾವಳಿಯ ರೆಫ್ರಿಗಳಾಗಿ ಕುಪ್ಪಂಡ ದಿಲನ್, ಕೊಡಿಮಣಿಯಂಡ ಅಪ್ಪಣ್ಣ, ಅಪ್ಪಚಟ್ಟೋಳಂಡ ಅಯ್ಯಪ್ಪ, ಕಾಳಿಮಾಡ ಕಿರಣ್ ಕಾರ್ಯ ನಿರ್ವಹಿಸಿದರು. ಪಂದ್ಯಾಟದ ವೀಕ್ಷಕ ವಿವರಣೆಯನ್ನು ಮೂಕಚಂಡ ಬೊಳ್ಳಮ್ಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts