More

    ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ: ಮದ್ದೂರು ಪುರಸಭೆ ವಿಶೇಷ ಸಭೆಯಲ್ಲಿ ನಿರ್ಣಯ

    ಮದ್ದೂರು: ಆಸ್ತಿ ತೆರಿಗೆಯನ್ನು ಶೇ.3ರಿಂದ ಶೇ.5ರಷ್ಟು ಪರಿಸ್ಕರಣೆ ಮಾಡಲು ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿರುವ ಸಂಬಂಧ ಪುರಸಭೆ ಆಡಳಿತ ಮಂಡಳಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಲು ತೀರ್ಮಾನಿಸಿದೆ.
    ಪಟ್ಟಣದ ಪುರಸಭೆ ಎಸ್.ಎಂ. ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷ ಸುರೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆ ವೇಳೆ ಮೇಲಿನ ನಿರ್ಣಯ ಕೈಗೊಳ್ಳಲಾಯಿತು. ಕಳೆದ ವರ್ಷ ಆಸ್ತಿ ತೆರಿಗೆ ದರ ಪರಿಷ್ಕರಣೆ ಕೈಗೊಂಡಿದ್ದು ಮತ್ತು ಮೈಸೂರು- ಬೆಂಗಳೂರು ಹೆದ್ದಾರಿ ರಸ್ತೆ ಅಗಲೀಕರಣದಿಂದಾಗಿ ವ್ಯಾಪಾರ-ವಹಿವಾಟು ಇಲ್ಲದ ಕಾರಣ ಆಸ್ತಿ ತೆರಿಗೆ ಹೆಚ್ಚಳವನ್ನು ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು.
    ನೀರಿನ ತೆರಿಗೆ ಪರಿಷ್ಕ್ಕರಿಸುವ ಸಂಬಂಧ ಚರ್ಚೆ ವೇಳೆ ಮಾತನಾಡಿದ ಸದಸ್ಯ ಎಂ.ಐ.ಪ್ರವೀಣ್, ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಹಾಗೂ ಮೀಟರ್ ಅಳವಡಿಕೆ ಕಾಮಗಾರಿ ಜರುಗುತ್ತಿದ್ದು ಕೆಲಸ ಪೂರ್ಣಗೊಂಡ ಬಳಿಕ ನೀರಿನ ದರ ಹೆಚ್ಚಳ ಜತೆಗೆ ಮೀಟರ್ ಅಳವಡಿಕೆಗೆ ಕ್ರಮವಹಿಸಲು ಸಭೆ ವೇಳೆ ಅಂಗೀಕರಿಸಲಾಯಿತು.
    2023-24ನೇ ಸಾಲಿನ ವಿವಿಧ ಬಾಬ್ತುಗಳಾದ ವಾರದ ಸಂತೆ ಶುಲ್ಕ, ಖಾಸಗಿ ಬಸ್ ನಿಲ್ದಾಣ, ಟೆಂಪೋ, ಆಟೋ ಶುಲ್ಕ ವಸೂಲಾತಿ, ದಿನವಹಿ ಸುಂಕ ವಸೂಲಿ ಮಾಡುವ ಹಕ್ಕನ್ನು ಹರಾಜು ಪ್ರಕ್ರಿಯೆ ಮಾಡಲು ಸಭೆ ತೀರ್ಮಾನಿಸಿತು.
    ಕಳೆದ ಸಾಲಿನಲ್ಲಿ ಸುಂಕ ವಸೂಲಾತಿಯಾಗದೆ ನಂದಿನಿ ಕ್ಷೀರ ಕೇಂದ್ರಗಳು ಬಾಕಿ ಉಳಿಸಿಕೊಂಡಿರುವ 3 ಲಕ್ಷ ರೂ.ಗಳನ್ನು ಒಂದು ವಾರದೊಳಗಾಗಿ ವಸೂಲಾತಿ ಮಾಡಿದ ಬಳಿಕ ಹರಾಜು ಪ್ರಕ್ರಿಯೆ ಮಾಡಲು ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ ಒತ್ತಾಯಿಸಿದರು.
    ಈ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಅಶೋಕ್ ಬಾಕಿ ಉಳಿಸಿಕೊಂಡಿರುವ ನಂದಿನಿ ಕ್ಷೀರ ಕೇಂದ್ರಗಳ ಹಣ ವಸೂಲಾತಿ ಕೈಗೊಳ್ಳುವುದಾಗಿ ಮತ್ತು 2023-24ನೇ ಸಾಲಿನ ಹರಾಜು ಪ್ರಕ್ರಿಯೆಗೂ ಮುಂದಾಗುವುದಾಗಿ ಹೇಳಿದರು.
    ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿರುವ ಚರಂಡಿ, ರಸ್ತೆ ಇನ್ನಿತರ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು ಕೂಡಲೇ ತ್ವರಿತಗತಿಯಲ್ಲಿ ಕೈಗೊಳ್ಳಲು ಸಂಬಂಧಿಸಿದ ಗುತ್ತಿಗೆದಾರನಿಗೆ ಸೂಚಿಸಬೇಕು. ತಪ್ಪಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಮರು ಟೆಂಡರ್ ಪ್ರಕ್ರಿಯೆ ಮಾಡಲು ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡರು.
    ಆತಗೂರು ಹೋಬಳಿ ವ್ಯಾಪ್ತಿಯ ಹೂತಗೆರೆ ಗ್ರಾಮದ ಕಸಸಂಗ್ರಹಣ ಕೇಂದ್ರಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಅಂತಹವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವಂತೆ ಆರೋಗ್ಯಾಧಿಕಾರಿ ರೋಜಾ ಅವರಿಗೆ ಸದಸ್ಯ ಎಸ್.ಮಹೇಶ್ ಮನವಿ ಮಾಡಿದರು.
    ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸದಸ್ಯರಾದ ಬಿ.ಸಿ.ಸರ್ವಮಂಗಳಾ, ವನಿತಾ, ಲತಾರಾಮು, ತ್ರಿವೇಣಿ, ಧನಂಜಯ, ಮ.ನ.ಪ್ರಸನ್ನಕುಮಾರ್, ತೀರ್ಥಾಚಾರ್, ಬಸವರಾಜು, ಮುಖ್ಯಾಧಿಕಾರಿ ಅಶೋಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts