More

    ಪ್ರೇಮಕಥೆ: ಮನ ಗೆದ್ದವಳು ಮನೆಗೇ ಬಂದಳು…

    ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ… ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

    ಇಳಿ ಸಂಜೆಯ ಸೂರ್ಯ ಭುವಿಯೊಡಲು ಸೇರುತ್ತಿದ್ದ. ರಂಗೇರಿದ್ದ ಬಾನೊಡಲಿಂದ ಪನ್ನೀರ ಜಡಿಮಳೆ. ಗಾಳಿ ಜೋರಾದ ಕಾರಣ ಮಳೆ ನಿಂತು ಮುಗಿಲು ಜಗಮಗಿಸುತ್ತಿತ್ತು. ಆ ಸಂಜೆಯ ಸೊಬಗ ರಮಣೀಯತೆಗೆ ಮೈ ಮರೆತಿದ್ದ ಮನಸು, ತಂಗಾಳಿಯಲ್ಲಿ ತೇಲಿ ಬಂದ ಕಿಲಕಿಲ ನಗೆ ಕೇಳಿ, ತಿರುಗಿ ನೋಡಿದೆ. ತಂಗಾಳಿಗೆ ಹಾರಾಡುತ್ತಿದ್ದ ಮುಂಗುರುಳನ್ನು ಕೈ ಬೆರಳಿನಿಂದ ಸರಿಮಾಡಿಕೊಂಡಳು. ಆ ರೂಪ ಲಾವಣ್ಯ ಬೆರಗುಗೊಳಿಸುವಂತಿತ್ತು. ಎಂದೋ ಕಂಡ ಕನಸು ನನಸಾಗುತ್ತಿದೆ ಎನಿಸಿತು. ಕನಸಲ್ಲಿ ಕಂಡ ಚೆಂದುಳ್ಳಿ ಚೆಲುವೆ ಇವಳೇನಾ? ಗೊತ್ತಿಲ್ಲ. ಕಾಲುಗಳು ಮುಂದುವರೆಯಲು ಹವಣಿಸುತ್ತಿದ್ದವು. ಧೈರ್ಯ ಬರದೇ ನಿಂತಿದ್ದೆ. ಅಷ್ಟರಲ್ಲೇ ಒಮ್ಮೆಕಿರು ನೋಟ ಬೀರಿದಳು. ಇಷ್ಟು ಸಾಕಿತ್ತು ನನಗೆ. ಕೊಂಚ ಭಯದಿಂದ ಅವಳ ಆ ಕೋಮಲ ನಯನಗಳ ನೋಡುತ್ತ ನಾಚಿಹೋದೆ. ಕೆಲವೇ ನಿಮಿಷಗಳಲ್ಲಿ ಅಚಾನಕ್ಕಾಗಿ ಮತ್ತೊಮ್ಮೆಮೇಘ ಮೇಳೈಸಿದಂತೆ ನಕ್ಕಳು. ಮನದ ಮಾತು ಅರಿತಳೇನೋ?.. ಅಲ್ಲಿಗೆ ಮನಸಿನಂಗಳದಲ್ಲಿ ಆಸೆಯ ತುಂತುರು ಶುರುವಾಗಿತ್ತು. ನಾನು ಪ್ರತಿ ಸಾರಿ, ಪ್ರತಿ ಬಾರಿ ಬೇಡಿಕೊಳ್ಳುತಿದ್ದೆ ದೇವರಲ್ಲಿ, ನನ್ನಮ್ಮನ ಇಚ್ಛೆಯ ಸೊಸೆಯನ್ನೆಲ್ಲಿ ಹುಡುಕಿ ತರಲೆಂದು. ಕಲ್ಪನೆಯೊ, ಕನಸೋ ತಿಳಿಯದು, ಆ ಪ್ರತಿರೂಪ ಕಣ್ಣಮುಂದಿದೆ. ಮತ್ತೆ ಮತ್ತೆ ನಗುತ್ತಿದ್ದಳು, ಆದದ್ದಾಗಲಿ ಎಂದು ಮಾತನಾಡಿಸಲು ಮುಂದಾದೆ. ಕಾಲ್ತೆಗೆದು ಒಂದು ಹೆಜ್ಜೆ ಇಟ್ಟೆ. ಅಷ್ಟರಲ್ಲಿ ಅವಳೇ ಕೈ ಚಾಚಿದಳು. ಹಿಡಿತ ತಪ್ಪಿ ಮೈಮರೆತೆ. ಅವಳೇ ಮೆಲ್ಲಮೆಲ್ಲನೆ ಹತ್ತಿರ ಬಂದಳು. ಹೃದಯಬಡಿತ ಏರತೊಡಗಿತು. ‘‘ನೀವು ಮಹೇಶ್ ಅಲ್ವಾ, ನಾನು ನಿಮ್ಮನ್ನ ನೋಡಿದ್ದೇನೆ’’ ಎಂದಳು. ಅಷ್ಟು ಸಾಕಿತ್ತು, ಪೂರ್ವಾಪರ ವಿಚಾರಿಸಿದೆ. ಅವಳು ನಮ್ಮ ಅಕ್ಕನ ಮಗಳೇ ಆಗಬೇಕಿತ್ತು, ದೂರದ ಸಂಬಂಧ. ನಾನು ಅವಳನ್ನು ನೋಡಿದ್ದು ಮೊದಲ ಸಲವಾದರೂ ನೂರು ಜನ್ಮಗಳ ಅನುಬಂಧದ ಭಾವ ಉಕ್ಕಿ ಬಂತು. ನಮ್ಮ ಅಮ್ಮನ ಸೊಸೆ ಇವಳೇನೇ ಎನ್ನೋಕೆ ಅಮ್ಮ ಇಲ್ಲ. ಕ್ಯಾನ್ಸರ್​ನಿಂದ ತೀರಿಕೊಂಡಿದ್ದರು. ಬದುಕಿದ್ದಾಗ ಇವಳನ್ನ ಒಮ್ಮೆನೋಡಿ ಚೆಂದ ಇದಾಳೆ, ನಮ್ಮಮನೆಗೆ ಸೊಸೆ ಆಗುವಳು ಎಂದಿದ್ದರಂತೆ. ನನ್ನ ಮನಕ್ಕೆ ಬಂದಳು. ಇಂದಿಗೆ 6 ತಿಂಗಳ ಹಿಂದೆ ನಮ್ಮಮದುವೆಯಾಯಿತು. ನನ್ನ ಉಸಿರಿನ ಪ್ರೇಯಸಿ ಪೂಜಾ.

    | ಮಹೇಶ್ ಪೂಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts