More

    ಮಾತೃಭಾಷೆಯನ್ನು ಹೃದಯದಿಂದ ಪ್ರೀತಿಸಿ

    ಕೊಪ್ಪ: ಮಾತೃಭಾಷೆ ಮೇಲೆ ಸ್ವಾಭಿಮಾನ, ಆತ್ಮಗೌರವ ಬೆಳೆಸಿಕೊಳ್ಳಬೇಕು, ಹೃದಯದಿಂದ ಪ್ರೀತಿಸಬೇಕು. ಅಂತರಂಗದ ಜ್ಞಾನ ಅಭಿವ್ಯಕ್ತಗೊಳ್ಳಲು ಭಾಷೆ ಮೂಲ ಕಾರಣ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಮಠದ ಆವರಣದಲ್ಲಿ ಕಸಾಪ ಹೋಬಳಿ ಘಟಕದಿಂದ ಗುರುವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಕಸಾಪ ಕನ್ನಡ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿ, ದೇಶದ ಎಲ್ಲ ವೈವಿಧ್ಯತೆ ಜೋಡಿಸುವ ಶಕ್ತಿ ಕನ್ನಡ ಭಾಷೆಗೆ ಇದೆ. ಕನ್ನಡ ಪರಿಪೂರ್ಣ ಭಾಷೆ ಎಂದರು.
    ವಚನ, ದಾಸ, ಕಾವ್ಯ ಮತ್ತಿತರ ಸಾಹಿತ್ಯಗಳು ಕನ್ನಡವನ್ನು ಸಮೃದ್ಧ ಭಾಷೆಯನ್ನಾಗಿ ಮಾಡಿವೆ. ಹಲವು ರಾಜಮನೆತನಗಳು ಕನ್ನಡವನ್ನು ಬೆಳೆಸಿವೆೆ ಎಂದು ಹೇಳಿದರು.
    ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಂಗ್ಲ ಭಾಷೆ ಮುಂಚೂಣಿಯಲ್ಲಿದೆ. ಪಾಲಕರಿಗೆ ಕನ್ನಡ ಮಾಧ್ಯಮ ಶಿಕ್ಷಣದ ಮೇಲೆ ಅನುಮಾನವಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಹೆಮ್ಮೆ ಎಂಬ ಅಭಿಪ್ರಾಯ, ನಮ್ಮ ಅಸ್ಮಿತೆ ಬಗ್ಗೆ ಕಾಳಜಿಯಿಲ್ಲದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದರು.
    ಕಾಲದ ಪ್ರಭಾವದಲ್ಲಿ ಭಾಷೆ ಉಳಿವಿಗಾಗಿ ಹೆಚ್ಚಿನ ಶ್ರಮ ಹಾಕಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಕನ್ನಡ ಬರೆಯಲು ಬಾರದವರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಸಾಹಿತ್ಯ ಓದಬೇಕು, ಒಳ್ಳೆಯ ವಿಚಾರ ಬದುಕಿನಲ್ಲಿ ಅಳವಡಿಸಬೇಕು. ಮಾತೃಭಾಷೆ, ಮಾತೃ ಸಂಸ್ಕೃತಿ, ಮಾತೃದೇಶದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ವೈವಿಧ್ಯತೆಯಿರಬೇಕು. ವೈರುಧ್ಯ ಇರಬಾರದು. ಕಸಾಪ ಸಾಕಷ್ಟು ಕಾರ್ಯ ಮಾಡುತ್ತಲೇ ಬಂದಿದೆ. ಕಸಾಪ ಹೋಬಳಿ ಘಟಕ ಆಯೋಜಿಸಿರುವ ಸಮ್ಮೇಳನ ಸಂತೋಷದ ವಿಷಯವಾಗಿದೆ ಎಂದರು.
    ಸಭಾ ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷೆ ಸಾಹಿತಿ ರೂಪಕಲಾ ಅವರನ್ನು ಭವ್ಯ ಮೆರವಣಿಗೆಯಲ್ಲಿ ಬಸ್ ನಿಲ್ದಾಣದ ಆವರಣದಿಂದ ಮಠಕ್ಕೆ ಕರೆತರಲಾಯಿತು. ಕೆ.ಜಿ.ಎನ್.ಶಾಸೀ ಮತ್ತಿತರ ಗಣ್ಯರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಮ್ಮೇಳನದಲ್ಲಿ ಎತ್ತನಟ್ಟಿಯ ರವಿ ಏರ್ಪಡಿಸಿದ್ದ 1836ರ ಬ್ರಿಟಿಷರ ನಾಣ್ಯ ಸಂಗ್ರಹ ಪ್ರದರ್ಶನ, ಹಿಂದಿನ ಕಾಲದ ದಿನನಿತ್ಯದ ಉಪಯೋಗಿ ವಸ್ತು ಸಂಗ್ರಹ ಸಾರ್ವಜನಿಕರ ಗಮನ ಸೆಳೆಯಿತು.
    ಸಮ್ಮೇಳನಾಧ್ಯಕ್ಷೆ, ಸಾಹಿತಿ ರೂಪಕಲಾ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ಜೆಡಿಎಸ್ ಮುಖಂಡ ಸುಧಾಕರ ಎಸ್. ಶೆಟ್ಟಿ, ಹರಿಹರಪುರ ಗ್ರಾಪಂ ಸದಸ್ಯ ಎ.ಒ.ವೆಂಕಟೇಶ್, ಸಮ್ಮೇಳನದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ, ಮುಖಂಡರಾದ ಕೆ.ಜಿ.ಶೋಭಿಂತ್, ದಿವಾಕರ್ ಭಟ್ ಭಂಡಿಗಡಿ, ಗುಡ್ಡೇತೋಟ ನಟರಾಜ್, ಶೃಂಗೇರಿ ಸುಬ್ಬಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts