More

    ಸದ್ದು ಮಾಡದ ಲೋಕಾಯುಕ್ತ!; 6 ತಿಂಗಳಾದರೂ ಭ್ರಷ್ಟ ತಿಮಿಂಗಿಲಗಳ ಬೇಟೆಯಾಡಲು ಹಿಂದೇಟು

    | ಮಂಜುನಾಥ ಕೆ. ಬೆಂಗಳೂರು

    ಒಂದು ಕಾಲದಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಲೋಕಾಯುಕ್ತ ಅಧಿಕಾರ ಮರುಸ್ಥಾಪನೆಯಾಗಿ 6 ತಿಂಗಳು ಕಳೆದರೂ ಜನರ ನಿರೀಕ್ಷೆಯಂತೆ ಇನ್ನೂ ದೊಡ್ಡಮಟ್ಟದ ಬೇಟೆ ಶುರು ಮಾಡಿಲ್ಲ. ಎಡಿಜಿಪಿ ಸೇರಿ ಉತ್ತಮ ಪೊಲೀಸ್ ಅಧಿಕಾರಿಗಳು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡರೂ ಹಳೇ ಖದರ್ ಇನ್ನೂ ಬಂದಿಲ್ಲ ಎಂಬ ಜನಾಭಿಪ್ರಾಯ ವ್ಯಕ್ತವಾಗಿದೆ.

    ಎಸಿಬಿಯನ್ನು ರದ್ದುಪಡಿಸಿ ಮತ್ತೆ ದಾಳಿ ಮಾಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಹೈಕೋರ್ಟ್ ನೀಡಿತ್ತು. ಹಳೇ ಖದರ್ ಮರಳಿದ ಹಿನ್ನೆಲೆಯಲ್ಲಿ ಈ ಸಂಸ್ಥೆಯ ಮೇಲಿನ ಜನರ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಲೋಕಾಯುಕ್ತ ಭಾರಿ ಕುಳಗಳಿಗೆ ಬಲೆ ಬೀಸಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳು, ಉನ್ನತ ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.

    ಲಂಚಾವತಾರದ ವಿರುದ್ಧ ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಲೋಕಾಯುಕ್ತ ಇದುವರೆಗೂ ಸಣ್ಣಪುಟ್ಟ ಮೀನುಗಳಿಗೆ ಗಾಳ ಹಾಕುತ್ತಿದೆಯೇ ಹೊರತು, ತಿಮಿಂಗಿಲಗಳನ್ನು ಬಲೆಗೆ ಕೆಡವಲು ಇನ್ನೂ ಮನಸ್ಸು ಮಾಡಿದಂತಿಲ್ಲ. ಎಸಿಬಿಗೆ ಹೋಲಿಸಿದಲ್ಲಿ ಲೋಕಾಯುಕ್ತದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಂಚ ಹೆಚ್ಚಾಗಿಯೇ ಇದ್ದಾರೆ. ಅತ್ಯಂತ ದಕ್ಷ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಹೀಗಿದ್ದರೂ ಲೋಕಾಯುಕ್ತ ದೊಡ್ಡಮಟ್ಟದ ಕಾರ್ಯಾಚರಣೆ ನಡೆಸಲು ಮೀನ-ಮೇಷ ಎಣಿಸುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಲೋಕಾಯುಕ್ತದಲ್ಲಿ ಒಟ್ಟು 1,399 ಹುದ್ದೆಗಳಿದ್ದು, ಇದರಲ್ಲಿ 965 ಹುದ್ದೆಗಳು ಭರ್ತಿ ಆಗಿವೆ. 434 ಹುದ್ದೆಗಳು ಖಾಲಿ ಇವೆ. ಈ ಮಧ್ಯೆ ಡಿ.19 ರಂದು 15 ಡಿವೈಎಸ್​ಪಿ ಮತ್ತು 15 ಇನ್​ಸ್ಪೆಕ್ಟರ್​ಗಳನ್ನು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಸದ್ಯ ಲೋಕಾಯುಕ್ತದಲ್ಲಿ ತಕ್ಕಮಟ್ಟಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಆದರೆ, ಎಸಿಬಿಯಲ್ಲಿ 452 ಅಧಿಕಾರಿ ಸಿಬ್ಬಂದಿ ಮಾತ್ರ ಇದ್ದರು. ಆಗಲೂ ಎಸಿಬಿಯು ಬೆಂಗಳೂರಿನ ಡಿ.ಸಿ ಕಚೇರಿ, ಬಿಬಿಎಂಪಿ, ಬಿಡಿಎ ಸೇರಿ ದೊಡ್ಡಮಟ್ಟದ ದಾಳಿಯನ್ನು ಸಂಘಟಿಸಿತ್ತು. ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಕಳೆದ ವರ್ಷ ಜೂನ್​ನಲ್ಲಿ ರಾಜ್ಯದ 80 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 13 ಕೆ.ಜಿ. ಚಿನ್ನಾಭರಣ, 1.92 ಕೋಟಿ ನಗದು ವಶಪಡಿಸಿಕೊಂಡಿದ್ದರು. ಮಾರ್ಚ್​ನಲ್ಲಿ ರಾಜ್ಯದ 75 ಕಡೆ ನಡೆಸಿದ್ದರು. ಆದರೀಗ ಲೋಕಾಯುಕ್ತ ಅಧಿಕಾರಿಗಳು, ಬೆಸ್ಕಾಂ, ಬಿಬಿಎಂಪಿಯಲ್ಲಿ ಐದರಿಂದ ಹತ್ತು ಸಾವಿರದವರೆಗೆ ಲಂಚ ಪಡೆದವರನ್ನು ಸೆರೆ ಹಿಡಿಯಲು ಸೀಮಿತವಾದಂತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

    ಲೋಕಾ ಮುಂದಿದೆ ಮಹತ್ವದ ಪ್ರಕರಣಗಳು: ಲೋಕಾಯುಕ್ತ ಮುಂದೆ ಹಲವು ಮಹತ್ವದ ಪ್ರಕರಣಗಳಿವೆ. ಬೆಂಗಳೂರು ನಗರ ಮಾಜಿ ಡಿಸಿ ಮಂಜುನಾಥ್ ವಿರುದ್ದ ಲಂಚ ಸ್ವೀಕಾರ ಪ್ರಕರಣ, ಬಿಡಿಎ ಇಂಜಿನಿಯರ್​ಗಳು, ಕೆಐಎಡಿಬಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು, ಆರ್​ಟಿಒ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣ, ವಿಧಾನಸೌಧದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಪ್ರಕರಣ, ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನ ಹಂಚಿಕೆ ಮಾಡಿದ್ದ ಬೃಹತ್ ಹಗರಣ, ರಾಜಕಾರಣಿಗಳ ವಿರುದ್ದದ ಸರ್ಕಾರಿ ಜಮೀನು ಡಿ ನೋಟಿಫಿಕೇಷನ್ ಪ್ರಕರಣಗಳಂಥ ಕೇಸ್​ಗಳು ಲೋಕಾಯುಕ್ತದಲ್ಲಿವೆ. ಈ ಪ್ರಕರಣಗಳನ್ನು ಮರುತನಿಖೆ ನಡೆಸಿದರೆ ಹಲವು ಭ್ರಷ್ಟರಿಗೆ ಶಿಕ್ಷೆಯಾಗುವುದು ಖಚಿತ. ಆದರೆ, ಲೋಕಾಯುಕ್ತ ಮನಸ್ಸು ಮಾಡಬೇಕಿದೆ ಎಂದು ಹೇಳಲಾಗುತ್ತಿದೆ.

    ಲೋಕಾ ಕಾಯ್ದೆ ಉಲ್ಲಂಘನೆ ಆದರೂ ಕ್ರಮವಿಲ್ಲ: 2021-22 ಸಾಲಿಗೆ ಸಂಬಂಧಿಸಿದಂತೆ ಲೋಕಾ ಯುಕ್ತಕ್ಕೆ ಆಸ್ತಿ ಮತ್ತು ದಾಯಿತ್ವದ ಪಟ್ಟಿಯನ್ನು 34 ಶಾಸಕರು ಮತ್ತು 24 ವಿಧಾನಪರಿಷತ್ ಸದಸ್ಯರು ಸಲ್ಲಿಸಿಲ್ಲ. ಚರ ಮತ್ತು ಸ್ಥಿರ ಆಸ್ತಿಯನ್ನು ಜೂ.30ರ ಗಡುವು ಮುಗಿದು 7 ತಿಂಗಳಾದರೂ ಮಾಹಿತಿ ನೀಡಿಲ್ಲ. ಐಪಿಸಿ ಸೆಕ್ಷನ್ 176 ಪ್ರಕಾರ ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಅವಕಾಶವಿದ್ದರೂ, ಲೋಕಾಯುಕ್ತ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಈ ಹಿಂದೆ ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಚರ-ಸ್ಥಿರ ಆಸ್ತಿಯ ಪಟ್ಟಿಯನ್ನು ಸಲ್ಲಿಸದ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.

    ಭ್ರಷ್ಟಾಚಾರ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಾವುದೇ ಭಯವಿಲ್ಲದೇ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇವತ್ತಿನ ದಿನಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾದರೆ ಅದು ಮೇಲ್ಮಟ್ಟದ ಅಧಿಕಾರಿಗಳು, ರಾಜಕಾರಣಿಗಳನ್ನು ಹೆಡೆಮುರಿಗೆ ಕಟ್ಟಬೇಕು. ಆಗ ಮಾತ್ರ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಲು ಸಾಧ್ಯ.

    | ನ್ಯಾ.ಸಂತೋಷ್ ಹೆಗ್ಡೆ ನಿವೃತ್ತ ಲೋಕಾಯುಕ್ತ

    ಹಿಂದಿನ ಖದರ್ ಹೇಗಿತ್ತು?

    • ನ್ಯಾ.ವೆಂಕಟಾಚಲ, ನ್ಯಾ.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದ ವೇಳೆಯಲ್ಲಿ ಸಂಸ್ಥೆಗೆ ಮೆರುಗು ತಂದುಕೊಟ್ಟಿದ್ದರು.
    • ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲು ಪಾಲಾಗಿದ್ದರು.
    • ಇಟಾಸ್ಕಾ ಸಾಫ್ಟ್​ವೇರ್ ಡೆವಲಪ್​ವೆುಂಟ್ ಕಂಪನಿಗೆ 325 ಎಕರೆ ಜಮೀನು ಮಂಜೂರು ಮಾಡಲು 87 ಕೋಟಿ ರೂ. ಲಂಚ ಪಡೆದ ಕೆಐಎಡಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಪುತ್ರ ಹಾಗೂ ಪಾಲಿಕೆ ಸದಸ್ಯರಾಗಿದ್ದ ಕಟ್ಟಾ ಜಗದೀಶ್ ವಿರುದ್ಧ ಲೋಕಾಯುಕ್ತ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿದ್ದರು.
    • 2009 ರಲ್ಲಿ ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗಲೇ ಆಗಿನ ಕೆಜಿಎಫ್ ಕ್ಷೇತ್ರದ ಶಾಸಕ ವೈ.ಸಂಪಗಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

    ಈಗಿನ ಲೋಕಾ ದಾಳಿಗಳು

    • ತೆರಿಗೆ ವಂಚಿಸುತ್ತಿದ್ದ ತಂಬಾಕು ಉತ್ಪನ್ನ ಘಟಕಗಳ ಮೇಲೆ ದಾಳಿ: ಬೆಂಗಳೂರು, ಮೈಸೂರು,ಬೀದರ್, ತುಮಕೂರು, ಧಾರವಾಡ, ಬೆಳಗಾವಿ, ಚಿತ್ರದುರ್ಗ, ಮೈಸೂರು, ಬಳ್ಳಾರಿಯ 24 ತಂಬಾಕು ಉತ್ಪನ್ನ ಘಟಕಗಳ ಮೇಲೆ ಹಾಗೂ ಇದಕ್ಕೆ ಸಹಕಾರ ನೀಡುತ್ತಿದ್ದ 13 ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
    • ಬೆಂಗಳೂರಿನ ಆರ್​ಟಿಒ ಕಚೇರಿ ಮತ್ತು ಮಧ್ಯವರ್ತಿಗಳ ಮೇಲೆ ದಾಳಿ ನಡೆಸಿ ದಾಖಲೆಗಳಿಲ್ಲದ ನಗದನ್ನು ವಶಪಡಿಸಿಕೊಂಡಿದ್ದಾರೆ.
    • ವಿಜಯಪುರ, ಬೆಳಗಾವಿ, ಬೀದರ್, ಹೊಸಪೇಟೆ, ಕೊಪ್ಪಳ, ಕೋಲಾರ ಚೆಕ್​ಫೋಸ್ಟ್ ಮೇಲೆ ದಾಳಿ ನಡೆಸಿ ನಗದನ್ನು ವಶಪಡಿಸಿಕೊಂಡಿದ್ದಾರೆ.
    • ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬೆಂಗಳೂರಿನ ಕೇಂದ್ರ ಕಚೇರಿ ಸೇರಿ ಐದು ಸ್ಥಳಗಳು ಹಾಗೂ ಅಧಿಕಾರಿಗಳ ಮನೆ ಮೇಲೆ ದಾಳಿ. 8 ಲಕ್ಷ ರೂ. ನಗದು, ಚಿನ್ನಾಭರಣ ವಶ.

     

    ಮೇಲಿನ ಮನೆಯ ಶೋಯಬ್, ಕೆಳಗಿನ ಮನೆಯ ಶಾಜಿಯಾ ಒಂದೇ ದಿನ ಗಾಯಬ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts