More

    ಮರ್ತ್ಯವ ಬೆಳಗಲು ಬಂದ ಬಸವಣ್ಣ

    | ಶಾರದಾ ಕೌದಿ, ಧಾರವಾಡ

    ಹನ್ನೆರಡನೆ ಶತಮಾನದಲ್ಲಿ ಹೊಸ ಸಮಾಜವನ್ನು ಆಧ್ಯಾತ್ಮಿಕ ಮತ್ತು ವೈಚಾರಿಕ ತಳಹದಿಯ ಮೇಲೆ ಕಟ್ಟುವ ನಿಟ್ಟಿನಲ್ಲಿ ತಮ್ಮನ್ನು ತಾವು ಸ್ವವಿಮರ್ಶೆಗೆ ಒಳಪಡಿಸಿಕೊಂಡವರು ಭಕ್ತಿ ಭಂಡಾರಿ ಬಸವಣ್ಣನವರು. ಎಲ್ಲರಂತೆ ಬದುಕಿಯೂ ಭಿನ್ನವಾಗಿದ್ದವರು. ಅವರಿಗೆ ಕೋಪ, ಪ್ರೀತಿ, ಕ್ಷಮೆ, ತಪ್ಪು ಹೀಗೆ ತಮ್ಮ ಸಹಜ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವಲ್ಲಿ ಸಂಕೋಚ, ಕೀಳರಿಮೆ ಇರಲಿಲ್ಲ. ತಮ್ಮ ಮನಸ್ಸಿನ ಸಂಘರ್ಷವನ್ನು ಬಹಿರಂಗವಾಗಿ ನಿರೂಪಿಸುತ್ತಿದ್ದರು. ಅವರ ವಚನಗಳಲ್ಲಿ ಸತ್ಯವನ್ನು ಸಾಕ್ಷಾತ್ಕರಿಸುವ ಮಾತುಗಳಿವೆ. ಈ ಬಗೆಯ ಆತ್ಮಶೋಧನೆ, ಆತ್ಮನಿರೀಕ್ಷಣೆ ಸಾಮಾನ್ಯರಿಗೆ ಅಸಾಧ್ಯ. ಹಾಗಾಗಿಯೇ ಅವರನ್ನು ಯುಗಪುರುಷ ಎನ್ನುತ್ತಾರೆ.

    ಜಗತ್ತಿನಲ್ಲಿ ಎಲ್ಲ ಕಾರ್ಯಗಳಿಗಿಂತ ತನ್ನ ತಾನರಿವುದೇ ಬಹಳ ಕಷ್ಟದ ಕೆಲಸ. ಅದಕ್ಕಾಗಿಯೇ ‘ಅರಿತರೆ ಶರಣ ಮರೆತರೆ ಮಾನವ’ ಎಂದಿದ್ದಾರೆ. ಬಸವಣ್ಣನವರಂತೂ ಅರಿವಿನ ಅರವಟ್ಟಿಗೆ. ಅವರ ಭಕ್ತಿಯ ಭಂಡಾರಕ್ಕೆ ಮನಶುದ್ಧಿ ಹಾಗೂ ಭಾವಶುದ್ಧಿಯೇ ಮೂಲ. ಭಕ್ತ ತನ್ನ ಮನಸ್ಸಿನ ದೃಢತೆಗೆ ತನ್ನಲ್ಲಿರುವ ಅವಗುಣಗಳೊಂದಿಗೆ ಸದಾ ಹೋರಾಡುತ್ತಾನೆ ಎನ್ನುವುದಕ್ಕೆ ಬಸವಣ್ಣನವರು ತಮ್ಮ ಚಂಚಲ ಮನಸ್ಸಿನ ಕುರಿತು ಬರೆದ ವಚನಗಳೇ ಸಾಕ್ಷಿ. ಆರಾಧ್ಯ ದೈವ ಕೂಡಲಸಂಗಯ್ಯನಲ್ಲಿ ನಿತ್ಯವೂ ತಮ್ಮ ತಪ್ಪುಗಳನ್ನು ನಿವೇದಿಸುವ ಪರಿ, ಮನೋವಿಶ್ಲೇಷಣೆ ಅನನ್ಯ. ‘ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನೊಳಗೇನು ಹುರುಳಿಲ್ಲ, ಎನ್ನ ತಪ್ಪು ಅನಂತಕೋಟಿ. ನಿಮ್ಮ ಸೈರಣೆಗೆ ಎಣೆಯಿಲ್ಲ, ಇನ್ನೂ ತಪ್ಪಿದೆನಾದರೆ ನಿಮ್ಮ ಪಾದವೆ ದಿಬ್ಯ’ ಎನ್ನುತ್ತಾರೆ ಬಸವಣ್ಣನವರು. ಇದು ಬಸವಣ್ಣನವರಿಗೆ ಮಾತ್ರ ಸಾಧ್ಯ.

    ಬಸವಣ್ಣನವರು ವಿವಿಧ ರೀತಿಯಲ್ಲಿ ತಮ್ಮ ಮನಸ್ಸನ್ನು ಶೋಧಿಸಿಕೊಂಡಿದ್ದಾರೆ. ಮನುಷ್ಯ ಸ್ವಭಾವ ಅನೇಕ ದೌರ್ಬಲ್ಯಗಳಿಂದ ಕೂಡಿದೆ. ತಮ್ಮ ಮಾತು ಕೃತಿಗಳಲ್ಲಿ ಅಂತರವಿರುವುದನ್ನು ಒಪ್ಪಿಕೊಳ್ಳುವ ಅವರ ಆತ್ಮಶೋಧನೆಗೆ ತಲೆಬಾಗಬೇಕು. ಎನಗಿಂತ ಕಿರಿಯರಿಲ್ಲ ಎಂಬ ನಮ್ರಭಾವದ ಬಸವಣ್ಣನವರು ಜಗತ್ತಿಗೆ ದೊಡ್ಡವರಾದದ್ದು ವಿನೀತ ಭಾವದಿಂದಾಗಿ. ಇಲ್ಲಿ ಶರಣಾಗತಿ ಇದೆ, ಗುಲಾಮಗಿರಿಯಿಲ್ಲ. ಇನ್ನು ಹೊಗಳಿಕೆ, ಸನ್ಮಾನ ಮನ್ನಣೆಗಳನ್ನು ಕನಸಿನಲ್ಲೂ ಬಯಸದ ಬಸವಣ್ಣ, ‘ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸದಿರಿ’ ಅಂತ ಶರಣರಲ್ಲಿ ಕೇಳಿದರೆ, ‘ನೀನೆನಗೊಳ್ಳಿದನಾದರೆ ಹೊಗಳಿಕೆಗೆ ಅಡ್ಡ ಬಾ’ ಎಂದು ಸಂಗಮನಾಥನಲ್ಲಿ ಕೇಳಿಕೊಳ್ಳುತ್ತಾರೆ. ‘ಎನಗುಳ್ಳದ್ದೊಂದು ಮನ ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ ಎನಗೊಂದು ಮನವುಂಟೆ?’ ಹೀಗೆ ಎಲ್ಲವನ್ನು ಆ ದೇವನ ಪಾದಕ್ಕೆ ಸಮರ್ಪಣೆ ಮಾಡುವ ಧನ್ಯತೆ ಅವರದು. ಅಂತರಂಗದ ಪ್ರಾಮಾಣಿಕತೆಯೆ ಬಸವಣ್ಣನವರ ವಚನಗಳ ಸ್ಥಾಯಿಭಾವ. ‘ನಿಜ ಶರಣನಿಗೇಕೆ ಅಂಜಿಕೆ? ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ ಶರಣನಾರಿಗೂ ಅಂಜುವದಿಲ್ಲ’ ಎನ್ನುವ ದಿಟ್ಟನಿಲುವಿನೊಂದಿಗೆ, ‘ನೀನು ಸರ್ವಜೀವ ದಯಾಪರನಾದ ಕಾರಣ ನಿನಗಂಜುವೆನಲ್ಲದೆ…’ ಎಂದು ಕೂಡಲಸಂಗಯ್ಯನಿಗೆ ಹೇಳುತ್ತಾರೆ.

    ಬಸವಣ್ಣ ತಮ್ಮ ಚಿತ್ತಶೋಧನೆ ಕುರಿತು ಹೀಗೆ ಹೇಳಿದ್ದಾರೆ- ‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ…’ ಎಲ್ಲರಿಗೂ ಗೊತ್ತಿರುವಂತೆ ಅತ್ತಿಯ ಹಣ್ಣು ಹೊರಗಡೆ ನೋಡಲು ಹಳದಿ ಮಿಶ್ರಿತ ಕೆಂಪುಬಣ್ಣದಲ್ಲಿ ತುಂಬ ಚೆನ್ನಾಗಿರುತ್ತದೆ. ಒಡೆದು ನೋಡಿದರೆ ಅದರ ತುಂಬ ಹುಳ. ಹಾಗೆ ತನ್ನ ಮನಸ್ಸು ಅನೇಕ ವಿಷಯಗಳಿಂದ ಕೂಡಿ ಕಲುಷಿತವಾಗಿದೆ ಎಂದು ದೇವನಲ್ಲಿ ನಿವೇದಿಸುತ್ತಾರೆ. ಹೀಗೆ ಮನದ ಭಾವವನ್ನು ಬಚ್ಚಿಡದೆ ಬಿಚ್ಚಿಡುವ ಗುಣದಿಂದಲೇ ಅವರ ವ್ಯಕ್ತಿತ್ವ ಆಕರ್ಷಣೀಯ. ಇರುವದನ್ನು ಬಿಟ್ಟು ಇಲ್ಲದಿರುವುದಕ್ಕೆ ಹಾತೊರೆಯುವದರ ಕುರಿತು ಹೇಳುತ್ತಾರೆ- ‘ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವದೆನ್ನ ಮನ, ನಿಂದಲ್ಲಿ ನಿಲ್ಲಲೀಯದೆನ್ನ ಮನ, ಹೊಂದಿದಲ್ಲಿ ಹೊಂದಲೀಯದೆನ್ನ ಮನ ಕೂಡಲಸಂಗಮದೇವಾ ನಿಮ್ಮ ಚರಣಕಮಲದಲ್ಲಿ ಭ್ರಮರವಾಗಿಸು’ ಎಂದು ಪ್ರಾರ್ಥಿಸುತ್ತಾರೆ. ಇನ್ನು ಮನಸ್ಸಿನ ನೈಜ ಸ್ವರೂಪವನ್ನು ಹೀಗೆ ತೆರೆದಿಡುತ್ತಾರೆ. ‘ತನ್ನಿಚ್ಛೆಯ ನುಡಿದಡೆ ಮೆಚ್ಚುವದೀ ಮನವು, ಇದಿರಿಚ್ಛೆಯ ನುಡಿದಡೆ ಮೆಚ್ಚದೀ ಮನವು’. ಇದು ಮಾನವನ ಸಹಜ ಸ್ವಭಾವ. ಮನೋದೌರ್ಬಲ್ಯದ ಕುರಿತಾಗಿ ಮನೋಜ್ಞವಾಗಿ ತಿಳಿಸುತ್ತಾರೆ. ಅವರ ಈ ವಿಚಾರಗಳಿಂದಾಗಿ ಅವರ ವ್ಯಕ್ತಿತ್ವ ವಿಭಿನ್ನವೆನಿಸುತ್ತದೆ.

    ಅರಿವಿನ ಮೊದಲ ಮೆಟ್ಟಿಲೇ ಆತ್ಮವಿಮರ್ಶೆ. ಅರಿವನ್ನೇ ಗುರುವಾಗಿಸಿಕೊಂಡಿದ್ದವರು ಬಸವಣ್ಣ. ಅವರ ಬದುಕು ಮುಚ್ಚುಮರೆಯಿಲ್ಲದ ತೆರೆದಿಟ್ಟ ಪುಸ್ತಕ. ತಮ್ಮನ್ನು ತಾವು ತಿದ್ದಿಕೊಳ್ಳುವುದರ ಮೂಲಕ ಆಪ್ತರಾದವರು. ಅವರು ಶ್ರೇಷ್ಠ ಭಕ್ತರಾದ್ದರಿಂದ ಅವರನ್ನು ಭಕ್ತಿ ಭಂಡಾರಿ ಎಂದು ಶರಣರು ಕರೆದರು. ಆದರೆ ‘ಭಕ್ತಿಯಿಲ್ಲದ ಬಡವ ನಾನಯ್ಯ’ ಎಂದು ಹೇಳುವಲ್ಲಿ ಅವರ ವಿನಯ ಕಂಡುಬರುತ್ತದೆ. ಸದಾ ತಮ್ಮನ್ನು ವಿಮಶಿಸಿಕೊಳ್ಳುತ್ತಲೇ ಸ್ವ ವಿಶ್ಲೇಷಣೆ ಮಾಡಿಕೊಂಡವರು ಬಸವಣ್ಣ. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ…’ ಎಂದು ಬೇರೆಯವರ ವಿಷಯದಲ್ಲಿ ಮೂಗು ತೂರಿಸಿ, ಬೇಡದ ಉಪದೇಶ ನೀಡುವವರಿಗೆ ಕಿವಿಮಾತು ಹೇಳಿ ವಿಡಂಬನೆ ಮಾಡಿರುವುದು ಅವರ ಅರಿವಿನ ವಿಸ್ತಾರಕ್ಕೆ ನಿದರ್ಶನ. ಬಸವಣ್ಣನವರ ಆತ್ಮವಿಮರ್ಶೆ, ಆತ್ಮವಿಶ್ಲೇಷಣೆ, ಅನ್ವೇಷಣೆಯಲ್ಲಿ ವಿನಯವಿದೆ. ಬಸವಣ್ಣನವರ ವಚನಗಳು ‘ಅಂತರಂಗ ಬಹಿರಂಗ ಶುದ್ಧಿಯಿಂದ ಕೂಡಲಸಂಗಮನನ್ನು ಒಲಿಸುವಲ್ಲಿ, ಮರ್ತ್ಯನ್ನು ದೇವಲೋಕವಾಗಿಸುವಲ್ಲಿ’ ಆತ್ಮಾವಲೋಕನದ ಮಹತ್ವ ತಿಳಿಸುತ್ತವೆ.

    ವಚನಗಳ ಸಂದೇಶವನ್ನು ಎಲ್ಲರೂ ಅಳವಡಿಸಿಕೊಂಡರೆ ಅದೇ ಬಸವಣ್ಣನವರಿಗೆ ತೋರುವ ಗೌರವ. ‘ಮರ್ತ್ಯ ಮಹಾಮನೆಯು ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ’ ಎಂದು ಅಲ್ಲಮಪ್ರಭುಗಳು ಹೇಳಿದಂತೆ ಈಗ ಶಿಥಿಲಗೊಂಡ ಸಮಾಜವನ್ನು ಮತ್ತೆ ಕಟ್ಟಲು ಹುಟ್ಟಿ ಬರಬೇಕಿದೆ ಬಸವಣ್ಣ.

    ಮೊದಲು ಈ ಕೆಲಸ ಮಾಡಿ… ಆಗ ಎಲ್ಲಾ ಕಥೆಗಳು ಹೊರಬೀಳುತ್ತೆ: ಎಚ್​ಡಿ. ಕುಮಾರಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts