More

    ರಾಷ್ಟ್ರಪತಿ ಭವನವಾಯ್ತು, ಈಗ ಲೋಕಸಭೆ ಸರದಿ- ಆತಂಕದಲ್ಲಿ ಸಿಬ್ಬಂದಿ: ಹೌಸ್‌ಕೀಪರ್‌ಗೆ ತಗುಲಿದ ಕರೊನಾ ಸೋಂಕು- ಪತ್ನಿ, 5 ಮಕ್ಕಳು, 4 ಮೊಮ್ಮಕ್ಕಳ ಪರೀಕ್ಷೆ

    ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಸುದ್ದಿಯ ಬೆನ್ನಲ್ಲೇ ಲೋಕಸಭೆಯ ಸ್ವಚ್ಛತಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ! ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಕೆಲಸ ನಿರ್ವಹಿಸುತ್ರಿರುವ ಮೂರು ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಆತಂಕ ಉಂಟಾಗಿದೆ.

    ವರದಿಯ ಪ್ರಕಾರ, ಸೋಂಕು ಕಾಣಿಸಿಕೊಂಡಿರುವ ಸಿಬ್ಬಂದಿ ಸಂಸತ್ತು ಸಂಕೀರ್ಣದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಅವರು 36 ಜಿಆರ್‌ಜಿ ರಸ್ತೆಯಲ್ಲಿರುವ ಲೋಕಸಭಾ ಸಚಿವಾಲಯದ ಒಂದು ಶಾಖೆಲಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮಾರ್ಚ್‌ 23ರಂದು ಸಂಸತ್ತಿನ ಬಜೆಟ್‌ ಅಧಿವೇಶನ ಮುಂದೂಡಿದ ನಂತರ ಈ ಸೋಂಕಿತ ವ್ಯಕ್ತಿ ತಮ್ಮ ಮನೆಯಲ್ಲಿಯೇ ಇದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

    10 ದಿನಗಳ ಹಿಂದೆ ಈ ವ್ಯಕ್ತಿ ಅನಾರೋಗ್ಯಪೀಡಿತರಾಗಿದ್ದರು. ಇಸಿಜಿ ಸೇರಿದಂತೆ ಇತರ ಪರೀಕ್ಷೆ ಮಾಡಿಸಿಕೊಳ್ಳಲು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೂ ಹೋಗಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ನಂತರ ಅದೇ ದಿನ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು. ಆದರೆ ಇದಾದ ಕೆಲವು ದಿನಗಳ ನಂತರ ಅವರಿಗೆ ಕೆಮ್ಮು, ಜ್ವರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡವು. ಇವೆಲ್ಲಾ ಕರೊನಾ ವೈರಸ್‌ ಲಕ್ಷಣಗಳು ಎಂದು ಸಂದೇಹ ಬಂದಾಗ ಪುನಃ ಅದೇ ಆಸ್ಪತ್ರೆಗೆ ಹೋಗಿದ್ದರು. ಆಗ ಪರೀಕ್ಷೆ ಮಾಡಿದ ವೈದ್ಯರು ಕರೊನಾ ವೈರಸ್‌ ಇರುವುದನ್ನು ದೃಢಪಡಿಸಿದ್ದರು. ಎಂದು ಮೂಲಗಳು ತಿಳಿಸಿವೆ.

    ಸೋಂಕಿತ ಕೆಲಸಗಾರನ ಮನೆಯ ಮಂದಿಯ ಸ್ಯಾಂಪಲ್‌ಗಳನ್ನು ವೈದ್ಯರು ಪಡೆದು ಪರೀಕ್ಷೆಗೆ ಒಳಪಡಿಸಿದ್ದಾರೆ, ಪತ್ನಿ ಮೂವರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿರುವ ಇವರಿಗೆ ನಾಲ್ವರು ಮೊಮ್ಮಕ್ಕಳೂ ಇದ್ದು ಎಲ್ಲರೂ ಒಂದೇ ಮನೆಯಲ್ಲಿ ನೆಲೆಸಿದ್ದಾರೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    ರಾಷ್ಟ್ರಪತಿ ಭವನದ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ 100ಕ್ಕೂ ಅಧಿಕ ಕುಟುಂಬಗಳನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ ಮುಂಜಾಗ್ರತಾ ಕ್ರಮದ ಅಂಗವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts