ಒಂದು ಖಾತೆಯಿಂದ 10 ಲಕ್ಷ ರೂ ಹೆಚ್ಚಿನ ಹಣದ ವರ್ಗಾವಣೆಯಾದರೆ ಪರಿಶೀಲಿಸಿ: ವೆಚ್ಚ ವೀಕ್ಷಕ ರೋಹಿತ್ ಅಸುದಾನಿ ಸೂಚನೆ

Lok Sabha election Expenditure Watchers Meeting Mandya
Published on

ಮಂಡ್ಯ: ಚುನಾವಣೆಗೆ ಸಂಬಂಧಿಸಿದಂತೆ ಬಟ್ಟೆ, ದಿನನಿತ್ಯ ಉಪಯೋಗಿಸುವ ಎಲೆಕ್ಟ್ರಾನಿಕ್ ಸರಕು ಹಾಗೂ ಇನ್ನಿತರೆ ವಸ್ತುಗಳನ್ನು ಸಂಗ್ರಹಿಸುವ ಗೋಡೌನ್‌ಗಳಲ್ಲಿ ಪರಿಶೀಲನೆ ನಡೆಸಿ ಎಂದು ವೆಚ್ಚ ವೀಕ್ಷಕರಾದ ರೋಹಿತ್ ಅಸುದಾನಿ ಮತ್ತು ಕುಮಾರ್ ಪ್ರಿಯತಂ ಅಶೋಕ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕುಗಳ ಸಾಗಾಣಿಕೆ ಸಂದರ್ಭದಲ್ಲಿ ಬಿಲ್ಲು ತಾಳೆ ಮಾಡುತ್ತಿರುವುದು ಸರಿ. ಇದರೊಟ್ಟಿಗೆ ಗೋಡೌನ್‌ಗಳಲ್ಲಿ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಎಂದರು.

ಅನಧಿಕೃತ ಮದ್ಯ ಸಾಗಾಣಿಕೆ ಬಗ್ಗೆ ನಿಗಾವಹಿಸಬೇಕು. ಅನಧಿಕೃತವಾಗಿ ಮದ್ಯ ಸಾಗಾಣಿಕೆ ಹಾಗೂ ಸಂಗ್ರಹಣೆಯ ಬಗ್ಗೆ ವಿವಿಧ ತಂಡಗಳು ಹೆಚ್ಚು ಗಮನಹರಿಸಬೇಕು. ಸೂಕ್ಷ್ಮ ಸ್ಥಳಗಳಲ್ಲಿರುವ ಮದ್ಯದ ಅಂಗಡಿಗಳನ್ನು ಪಟ್ಟಿ ಮಾಡಿಕೊಂಡು ಅಬಕಾರಿ ಇಲಾಖೆ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಬೇಕು. ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಸಂಶಯಾಸ್ಪದ ವಹಿವಾಟು, ಹತ್ತು ಲಕ್ಷ ರೂಗಿಂತ ಹೆಚ್ಚಿನ ಹಣ ವರ್ಗಾವಣೆ, ಒಂದು ಖಾತೆಯಿಂದ 10 ಲಕ್ಷ ರೂಗಿಂತ ಹೆಚ್ಚಿನ ಖಾತೆಗೆ ಹಣ ವರ್ಗಾವಣೆ ಕುರಿತಂತೆ ಪ್ರತಿದಿನ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಅಕೌಂಟಿಂಗ್ ತಂಡ ರಿಜಿಸ್ಟರ್, ಫೋಲ್ಡರ್ ಆಫ್ ಎವಿಡೆನ್ಸ್ ಸೇರಿದಂತೆ ವಿವಿಧ ಕಡತ ನಿರ್ವಹಣೆ ಬಗ್ಗೆ, ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಿ ಅನುಮತಿ ನೀಡಲು ತೆರೆದಿರುವ ಏಕಗವಾಕ್ಷಿ ಕೇಂದ್ರ ಸೇರಿದಂತೆ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು. ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ವಹಿಸಲು 10 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿದಿನ ನಿಯಮಿತವಾಗಿ ವರದಿ ನೀಡುತ್ತಿದ್ದಾರೆ ಎಂದರು.

ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ ಮಾತನಾಡಿ, ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು 45 ಸೂಕ್ಷ್ಮ ಮದ್ಯದಂಗಡಿ, 61 ಸೂಕ್ಷ್ಮ ಸ್ಥಳ ಗುರುತಿಸಲಾಗಿದೆ. ಅಂತೆಯೇ ದಾಳಿಗಾಗಿ 11 ತಂಡಗಳನ್ನು ರಚಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿರುವ ಚಿನ್ನ, ಬಟ್ಟೆ, ದಿನಸಿ, ಹೋಂ ಅಪ್ಲಯೇನಸಸ್ ಅಂಗಡಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳು ಮಾರಾಟವಾದಲ್ಲಿ ಪ್ರತಿದಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಒಂದು ಮೊಬೈಲ್ ಚೆಕ್‌ಪೋಸ್ಟ್ ಇದ್ದು, ಇದರೊಂದಿಗೆ ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿ ತಂಡಗಳ ಸಹಕಾರ ಸಹ ಪಡೆಯಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಆದಾಯ ತೆರಿಗೆ ಇಲಾಖೆ ಅಧಿಕಾರಿ ಮಹಮ್ಮದ್ ಇದಾಯತ್ ಇತರರಿದ್ದರು. ಸಭೆ ಬಳಿಕ ವೆಚ್ಚ ವೀಕ್ಷಕರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿತವಾಗಿರುವ ಕಂಟ್ರೋಲ್ ರೂಂ, ಮಾಧ್ಯಮ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಂದ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net