More

    ನೆಲ ಕಚ್ಚಿದ ಪ್ರವಾಸೋದ್ಯಮ

    ಹರೀಶ್ ಮೋಟುಕಾನ, ಮಂಗಳೂರು
    ಕೋವಿಡ್ ಪ್ರಥಮ ಅಲೆ ಕಡಿಮೆಯಾಗುತ್ತಿದ್ದಂತೆ ಚಿಗುರಿಕೊಂಡಿದ್ದ ಪ್ರವಾಸೋದ್ಯಮ ಎರಡನೇ ಅಲೆಯಲ್ಲಿ ಮತ್ತೆ ಮುದುಡಿದೆ. ಪ್ರವಾಸೋದ್ಯಮ ಕ್ಷೇತ್ರವನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನರ ಬದುಕು ದುಸ್ತರವಾಗಿದೆ.

    ಮೊದಲ ಸಲದ ಲಾಕ್‌ಡೌನ್ ಅನ್‌ಲಾಕ್ ಆದಾಗ ಜನ ಧೈರ್ಯದಿಂದಲೇ ಪ್ರವಾಸ ಬುಕಿಂಗ್ ಮಾಡಿದ್ದರು. ಇನ್ನೇನು ಪ್ರವಾಸ ಹೊರಡುವ ಸಿದ್ಧತೆ ಮಾಡಬೇಕು ಎಂಬಷ್ಟರಲ್ಲಿ ಎರಡನೇ ಅಲೆ ಬಂದು ಲಾಕ್‌ಡೌನ್ ಆಯಿತು. ದಕ್ಷಿಣ ಕನ್ನಡದಲ್ಲಿ ಇದನ್ನೇ ನಂಬಿ ಬದುಕುವ ಟೂರ್ ಮ್ಯಾನೇಜರ್, ಟೂರ್ ಗೈಡ್, ಬಸ್ ಕಂಡಕ್ಟರ್, ಡ್ರೈವರ್‌ಗಳ ಸಂಖ್ಯೆ 500ಕ್ಕೂ ಹೆಚ್ಚಿದೆ. ಮೊದಲ ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಬೇಕಿದ್ದ 2020ರ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕರೊನಾ ಲಾಕ್‌ಡೌನ್ ಕಾರಣ, ಯಾವ ಪ್ರವಾಸವೂ ಕೈಗೂಡಿಲ್ಲ.
    ದೇವಳಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಸಿಗುತ್ತಿದ್ದಂತೆ ಆಗಸ್ಟ್ ಮಧ್ಯಂತರ ಬಳಿಕ ಪ್ರವಾಸೋದ್ಯಮ ನಿಧಾನವಾಗಿ ತೆರೆದುಕೊಂಡಿತ್ತು. ಆದರೂ ಜನರಿಗೆ ಸುತ್ತಾಡಲು ಧೈರ್ಯವಿರಲಿಲ್ಲ. ದೇವಸ್ಥಾನಗಳ ಭೇಟಿಗಷ್ಟೇ ಸೀಮಿತರಾಗಿದ್ದರು. ಉತ್ತರ ಭಾರತ, ದಕ್ಷಿಣ ಭಾರತ ಪ್ರಸಾಸಗಳ ಬುಕಿಂಗ್ ಆಗಲೇ ಇಲ್ಲ. ಇದನ್ನು ನಂಬಿಕೊಂಡಿದ್ದವರ ಬದುಕು ಹೈರಾಣಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಲವಾರು ಸಂಸ್ಥೆಗಳು ಪ್ರವಾಸವನ್ನು ಆಯೋಜಿಸುತ್ತವೆ. ಒಂದೂವರೆ ವರ್ಷದಿಂದ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಂಡ ಕಾರಣ ಇದರಲ್ಲಿ ಉದ್ಯೋಗ ಮಾಡಿಕೊಂಡಿದ್ದವರು ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಉತ್ತಮ ಆದಾಯವಿದೆ. ಆದರೆ ಪ್ಯಾಕೇಜ್ ಘೋಷಣೆ ಸಂದರ್ಭ ಪರಿಗಣಿಸಿಲ್ಲ ಎನ್ನುವ ಅಸಮಾಧಾನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗಿದೆ.

    ಸಂಕಷ್ಟದಲ್ಲಿ ಪ್ರವಾಸಿ ಮಿತ್ರರು: ಕುಂದಾಪುರ: ಪ್ರವಾಸಿಗರ ರಕ್ಷಣೆ ಮಾಡುವ ಪ್ರವಾಸಿ ಮಿತ್ರರಿಗೆ (ಟೂರಿಸ್ಟ್ ಪೊಲೀಸ್) ಕಳೆದ ಮೂರು ತಿಂಗಳಿಂದ ಸದ್ಯ ನೌಕರಿಯೂ ಇಲ್ಲ, ವೇತನವೂ ಇಲ್ಲ. 2015-16ರಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಮುಖ ಪ್ರವಾಸಿ ಕ್ಷೇತ್ರಗಳಲ್ಲಿ ಇವರನ್ನು ನೇಮಿಸಿತ್ತು. ಅಂದಿನಿಂದ ಇಂದಿನವರೆಗೆ ಪ್ರವಾಸಿ ಮಿತ್ರರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ರಾಜ್ಯಾದ್ಯಂತ 900ಕ್ಕೂ ಅಧಿಕ ಪ್ರವಾಸಿ ಮಿತ್ರರಿದ್ದಾರೆ. ಇಲಾಖೆಯ ನಿರ್ಲಕ್ಷೃದಿಂದ ಬೇಸತ್ತು 10ಕ್ಕೂ ಅಧಿಕ ಮಂದಿ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಮತ್ತಷ್ಟು ಸಿಬ್ಬಂದಿ ಇದೇ ಹಾದಿ ಹಿಡಿದರೆ ಅಚ್ಚರಿಯೇನಿಲ್ಲ.

    ಸಚಿವರಿಂದ ಶೀಘ್ರ ಕ್ರಮದ ಭರವಸೆ: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಜತೆ ಚರ್ಚಿಸಿ ಪ್ರವಾಸಿ ಮಿತ್ರರಿಗೆ ಬಾಕಿ ಇರುವ ಸಂಬಳವನ್ನು ತಕ್ಷಣ ಬಿಡುಗಡೆ ಮಾಡಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ಪ್ರವಾಸಿ ಮಿತ್ರರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಅವರಿಗೆ ಕೆಲಸ ಹಾಗೂ ವೇತನ ಭದ್ರತೆ ಸಿಗಲು ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.

    ಕೆಲಸವಿಲ್ಲದೆ ಒಂದೂವರೆ ವರ್ಷ ಕಳೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೂರಿಸಂ ಕ್ಷೇತ್ರವನ್ನೇ ನಂಬಿ ಬದುಕುತ್ತಿರುವ 300ಕ್ಕೂ ಅಧಿಕ ಕುಟುಂಬಗಳಿವೆ. ನಮಗೆ ಬೇರೆ ಉದ್ಯೋಗ ಕೌಶಲವಿಲ್ಲ. ಬದುಕು ಕಷ್ಟವಾಗಿದೆ. ಪ್ಯಾಕೇಜ್ ಘೋಷಣೆ ಸಂದರ್ಭ ಸರ್ಕಾರ ನಮ್ಮನ್ನು ಮರೆತಿದೆ.
    ಅರುಣ್ ಮಂಗಳೂರು ಟೂರ್ ಮ್ಯಾನೇಜರ್

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts