More

    ಕರೊನಾದಿಂದ ಎಲ್ಲರೂ ಬೆದರಿದ್ದರೆ, ಗೋವಾದ ಕಾಡಲ್ಲಿ ವಿದೇಶಿಗರು ಮಾಡಿದ್ದೇನು ಗೊತ್ತಾ?

    ಮಾಪುಸಾ (ಗೋವಾ): ಇಡೀ ದೇಶ ಅಷ್ಟೇ ಅಲ್ಲದೆ, ವಿಶ್ವವೇ ಮಹಾಮಾರಿ ಕರೊನಾದಿಂದ ಹೇಗೆ ಬಚಾವಾಗೋದು ಎಂಬ ಚಿಂತೆಯಲ್ಲಿದ್ದರೆ, ಗೋವಾದಲ್ಲಿ ಒಂದಿಷ್ಟು ವಿದೇಶಿಗರಿಗೆ ಇದಾವುದರ ಪರಿವೇ ಇಲ್ಲ!

    ಲಾಕ್‌ಡೌನ್‌ ಆದೇಶವಿದ್ದರೂ ಗೋವಾದ ಪರ್ನೆಮ್‌ ಎಂಬಲ್ಲಿ, ಒಂದಿಷ್ಟು ವಿದೇಶಿಗರು ಕಂಠಪೂರ್ತಿ ಕುಡಿದು, ಕುಣಿದು, ಕುಪ್ಪಳಿಸುತ್ತಾ ಹೊರಗಿನ ಪ್ರಪಂಚದ ಅರಿವೇ ಇರದೇ ಮತ್ತಿನಲ್ಲಿದ್ದವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

    ಹೇಳಿಕೇಳಿ ಗೋವಾ, ಇನ್ನೇನು ಕೇಳುವುದು? ವಿದೇಶಿಗರ ಮೋಜು-ಮಸ್ತಿ, ಕುಡಿತ, ಪಾರ್ಟಿ ಇಲ್ಲೇನೂ ಹೊಸತೇ ಅಲ್ಲ ಬಿಡಿ. ಆದರೆ ಲಾಕ್‌ಡೌನ್‌ ಅವಧಿಯಲ್ಲಿಯೂ, ಎಲ್ಲೆಡೆ ಕರೊನಾ ಭೀತಿ ಇದ್ದರೂ ತಮಗೇನೂ ಆಗುವುದೇ ಇಲ್ಲ ಎಂಬಂತೆ ಇಲ್ಲಿ ಮದ್ಯಮ ಪಾರ್ಟಿ ನಡೆಸಲಾಗಿತ್ತು. ಅನೇಕ ದೇಶಗಳಿಗೆ ಹೋಲಿಸಿದರೆ ಭಾರತ ಸೇಫ್‌ ಎನ್ನುವ ಕಾರಣಕ್ಕೋ ಏನೋ, ಇಲ್ಲಿಗೆ ಬಂದು ಪಾರ್ಟಿ ಮಾಡುತ್ತಿದ್ದರು.

    ಕರೊನಾ ಡ್ಯೂಟಿಯಲ್ಲಿ ಬಿಜಿ ಇರುವ ಪೊಲೀಸರ ಕಣ್ಣಿಗೆ ತಾವು ಬೀಳುವುದಿಲ್ಲ ಎನ್ನುವುದು ಇವರ ಅನಿಸಿಕೆಯಾಗಿತ್ತು. ಇದಕ್ಕೆ ಇನ್ನೊಂದು ಕಾರಣವೂ ಇತ್ತು. ಅದೇನೆಂದರೆ ಈ ಪ್ರದೇಶದ ಸುತ್ತಲೂ ಅರಣ್ಯ ಇರುವ ಕಾರಣ, ಸಾಮಾನ್ಯವಾಗಿ ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ.

    ಆದರೆ ಇವರ ಗ್ರಹಚಾರ ನೆಟ್ಟಗಿರಲಿಲ್ಲ. 30ಕ್ಕೂ ಅಧಿಕ ಮಂದಿ ಬೈಕ್‌ನಲ್ಲಿ ಅಲ್ಲಿಯೇ ಹುಚ್ಚಾಪಟ್ಟೆಯಾಗಿ ಸುತ್ತಾಡುವುದನ್ನು ಗೋಡಂಬಿ ಬೆಳಗಾರ ನೋಡಿದ್ದಾರೆ. ತಮ್ಮ ಮನೆಗೆ ಹಿಂದಿರುವ ವೇಳೆ ಅವರಿಗೆ ಬೈಕ್‌ ಶಬ್ದ ಕೇಳಿಸಿದೆ. ಇಣುಕಿ ನೋಡಿದಾಗ ವಿದೇಶಿಗರು ಕಣ್ಣಿಗೆ ಬಿದ್ದಿದ್ದಾರೆ. ತಡ ಮಾಡದ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅಷ್ಟೇ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.

    ‘ನಾವು ಎಷ್ಟು ಮಂದಿಯ ಮೇಲೆ ಕಣ್ಣಿಡುವುದೋ ತಿಳಿಯುವುದಿಲ್ಲ. ಕರೊನಾ ಡ್ಯೂಟಿ ಇರುತ್ತದೆ. ಇಂಥ ಸಮಯದಲ್ಲಿ ಕಾಡಿನಲ್ಲಿ ಬಂದು ಪಾರ್ಟಿ ಮಾಡಿದರೆ ನಮಗೆ ತಿಳಿಯುವುದು ತುಂಬಾ ಕಷ್ಟ. ದಯವಿಟ್ಟು ಸ್ಥಳೀಯರು ಯಾರೂ ತಮ್ಮ ಬೈಕ್‌ಗಳನ್ನು ಯಾರಿಗೂ ನೀಡಬೇಡಿ, ಇಲ್ಲದಿದ್ದರೆ ‍ಪೊಲೀಸ್‌ ಕೇಸ್‌ ಆದಾಗ ನೀವು ಸಿಕ್ಕಿಬೀಳುತ್ತೀರಿ’ ಎಂದು ಪೊಲೀಸ್‌ ಇನ್‌ಪೆಕ್ಟರ್‌ ಜನರಲ್ಲಿ ಮನವಿ ಮಾಡಿದ್ದಾರೆ.

    ಲಾಕ್‌ಡೌನ್‌ ಸಮಯದಲ್ಲಿ ವಿವಿಧ ಹೋಟೆಲ್‌ಗಳಲ್ಲಿ ಇದ್ದ ವಿದೇಶಿಗರು, ಲಾಕ್‌ಡೌನ್‌ ಘೋಷಣೆಯಾದ ಮೇಲೆ ಇಲ್ಲಿಯೇ ಮನೆಗಳನ್ನು ಬಾಡಿಗೆಗೆ ಪಡೆದು ಇಲ್ಲಸಲ್ಲದ ಕೆಲಸ ಮಾಡುತ್ತಿದ್ದಾರೆ. ನಮಗೆ ಇದರಿಂದ ಭೀತಿಯಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts