More

    ನಟಿಮಣಿಯರ ಲಾಕ್​ಡೌನ್ ಪ್ರವರ

    ಬಿಡುವಿಲ್ಲದೆ ಶೂಟಿಂಗ್ ಮಾಡುವ ನಟಿಯರು ಸಮಯ ಸಿಕ್ಕರೆ ಸಾಕು ವಿಮಾನ ಹತ್ತಿಬಿಡುತ್ತಾರೆ. ಒಂದಷ್ಟು ದಿನ ಪ್ರವಾಸ ಮಾಡಿ, ಮೈಂಡ್ ರಿಲಾಕ್ಸ್ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಮಾತ್ರ ಮನೆಯಲ್ಲೇ ಲಾಕ್ ಆಗಿ ಪ್ರವಾಸವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಾಗಂತ ಇನ್ನೊಂದು ವರ್ಷ ಎಲ್ಲೂ ಹೋಗುವುದಿಲ್ಲ ಎನ್ನುವ ನಟಿಯರು ಹಾಗೊಂದು ವೇಳೆ ಹೋದರೂ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡೇ ಪ್ರವಾಸ ಕೈಗೊಳ್ಳುತ್ತೇವೆ ಎನ್ನುತ್ತಾರೆ…

    ಶ್ವೇತಾ ನಾಯ್ಕ್ ಬೆಂಗಳೂರು

    ಪ್ರವಾಸಕ್ಕೂ ಕರೊನಾ ಕಂಟಕ

    ನಟಿಮಣಿಯರ ಲಾಕ್​ಡೌನ್ ಪ್ರವರವರ್ಷಕ್ಕೆ ಕನಿಷ್ಠ ಒಂದರಿಂದ ಎರಡು ಟ್ರಿಪ್ ಮಾಡುತ್ತಿದ್ದ ಹರ್ಷಿಕಾ ಪೂಣಚ್ಚ ಈ ಬಾರಿ ಪ್ರವಾಸ ಮಿಸ್ ಮಾಡಿಕೊಂಡಿದ್ದಾರೆ. ಅವರಿಗೆ ಪ್ರವಾಸಕ್ಕೆ ಹೋಗಲಿಲ್ಲ ಎಂಬ ಬೇಸರವಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತಂದೆಯನ್ನು ಕಳೆದುಕೊಂಡ ಹರ್ಷಿಕಾಗೆ ಈ ಬಾರಿ ಬೇಕಾದಷ್ಟು ಸಮಯ ಸಿಕ್ಕಿದೆ. ಆದರೆ ಸಮಯ ಕಳೆಯಲು ಅಪ್ಪನೇ ಇಲ್ಲ ಎಂದು ಬೇಸರಿಸಿಕೊಂಡಿದ್ದಾರೆ. ಯುರೋಪ್ ಸೇರಿ ಹಲವು ದೇಶಗಳನ್ನು ಸುತ್ತಿರುವ ಹರ್ಷಿಕಾಗೆ ಅಲ್ಲಿನ ಸಂಸ್ಕ್ರತಿಗೆ ತಕ್ಕಂತೆ ಬದುಕುವುದು ಇಷ್ಟವಂತೆ. ಸೋಲೋ ಟ್ರಿಪ್ ಹೆಚ್ಚು ಇಷ್ಟಪಡುವ ಅವರು, ಸೋಲೋ ಟ್ರಿಪ್​ನಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬ ಟಿಪ್ಸ್ ನೀಡುತ್ತಾರೆ.

    ‘ಶೂಟಿಂಗ್ ಮಧ್ಯೆ ಬ್ರೇಕ್ ಪಡೆದು 10-15 ದಿನಗಳ ಕಾಲ ಅಂತಾರಾಷ್ಟ್ರೀಯ ಪ್ರವಾಸ ಮಾಡುತ್ತಿದ್ದೆ. ಫ್ಯಾಮಿಲಿ ಜತೆ ಸಮಯ ಕಳೆಯಲು ಪ್ರವಾಸ ಸಹಕಾರಿಯಾಗಿತ್ತು. ಈಗ ಲಾಕ್​ಡೌನ್ ಆಗಿದ್ದರೂ ಫ್ಯಾಮಿಲಿಯೊಂದಿಗೇ ಇರುವುದರಿಂದ ಅಂತಹ ವ್ಯತ್ಯಾಸವೇನೂ ಆಗಿಲ್ಲ. ಆದರೆ, ಹೊಸ ಹೊಸ ಪ್ರದೇಶಗಳನ್ನು ನೋಡುವುದನ್ನು ಮಿಸ್ ಮಾಡಿಕೊಂಡಿದ್ದೇನೆ. ಹಾಗಂತ ಬೇಸರವಿಲ್ಲ. ಆರೋಗ್ಯದಿಂದಿದ್ದರೆ ಮುಂದಿನ ಬಾರಿ ಇನ್ನಷ್ಟು ಪ್ರವಾಸ ಕೈಗೊಳ್ಳಬಹುದು ಎಂದುಕೊಂಡು ಈಗ ಸದ್ಯಕ್ಕೆ ಮನೆಯಲ್ಲೇ ಆರಾಮವಾಗಿ ಇದ್ದೇನೆ’ ಎನ್ನುತ್ತಾರೆ.

    ತಿಂಗಳಲ್ಲಿ 15 ದಿನ ಪ್ರವಾಸ ಮಿಕ್ಕಿದ್ದು ಶೂಟಿಂಗ್

    ನಟಿಮಣಿಯರ ಲಾಕ್​ಡೌನ್ ಪ್ರವರ‘ನಾಗಿಣಿ’ ಮತ್ತು ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ, ತಿಂಗಳಲ್ಲಿ 15 ದಿನ ಶೂಟಿಂಗ್ ಮಾಡಿದರೆ ಇನ್ನು 15 ದಿನ ಪ್ರವಾಸದಲ್ಲಿರುತ್ತಾರಂತೆ. ಅಷ್ಟು ಟ್ರಾವಲ್ ಫ್ರೀಕ್ ಆಗಿರುವ ಅವರ ಪ್ರವಾಸಕ್ಕೂ ಕರೊನಾ ತಡೆಯೊಡ್ಡಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸುವ ದೀಪಿಕಾ ಮುಂಬರುವ ಪ್ರವಾಸಗಳಲ್ಲಿ ಕೈಗೊಳ್ಳಬಹುದಾದ ಅಗತ್ಯ ಮುನ್ನೆಚ್ಚರಿಕೆ ಬಗ್ಗೆಯೂ ಜಾಗೃತರಾಗಿದ್ದಾರೆ. ‘ನನಗೆ ಪ್ರವಾಸ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸ್ವಾಭಿಮಾನಿಯಾಗಿ ಒಬ್ಬಳೇ ಬದುಕುವುದನ್ನು ಕಲಿಸಿಕೊಟ್ಟಿದೆ. ಹೊಸಹೊಸ ಪ್ರಪಂಚದ ಪರಿಚಯ ಮಾಡಿಕೊಟ್ಟಿದೆ. ಅಲ್ಲಿನ ಸಂಸ್ಕ್ರತಿಯನ್ನು ಕಲಿತಿದ್ದೇನೆ. ಬಗೆಬಗೆಯ ಖಾದ್ಯಗಳನ್ನು ಸವಿದಿದ್ದೇನೆ. ಈ ಎಲ್ಲ ಕಾರಣಕ್ಕಾಗಿಯೇ ಪ್ರವಾಸ ಇಷ್ಟಪಡುವ ನಾನು, ಸಮಯ ಸಿಕ್ಕಾಗಲೆಲ್ಲಾ ಬ್ಯಾಗ್ ಹೆಗಲಿಗೇರಿಸಿ ಪ್ರವಾಸಕ್ಕೆ ಹೊರಡುತ್ತೇನೆ. ಗೆಳೆಯರ ಜತೆಗೆ ಪ್ರವಾಸ ಹೋಗುತ್ತೇನಾದರೂ ಬಹುತೇಕ ಸೋಲೋ ಪ್ರವಾಸಗಳೇ ನನ್ನ ಲಿಸ್ಟ್ ನಲ್ಲಿರುವುದು’ ಎನ್ನುತ್ತಾರೆ ದೀಪಿಕಾ. ಕಳೆದ ಬಾರಿ ಶ್ರೀಲಂಕಾ, ಫುಕೆಟ್, ಗೋವಾ, ವಯನಾಡು ಹೀಗೆ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದ ಅವರು, ಈ ಬಾರಿ ಯುರೋಪ್ ಪ್ರವಾಸ ಮಾಡಬೇಕೆಂದುಕೊಂಡಿದ್ದರಂತೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಇನ್ನೊಂದು ವರ್ಷ ಪ್ರವಾಸ ಮಾಡುವುದಿಲ್ಲವಂತೆ. ಅಂತಾರಾಷ್ಟ್ರೀಯ ಪ್ರವಾಸ ಕಡಿಮೆ ಮಾಡಿ ಶಾರ್ಟ್ ಟ್ರಿಪ್ ಪ್ಲಾನ್ ಮಾಡುತ್ತಾರಂತೆ.

    ವಿಯೆಟ್ನಾಂ ಮಿಸ್ ಆಯ್ತು

    ನಟಿಮಣಿಯರ ಲಾಕ್​ಡೌನ್ ಪ್ರವರಈ ಬಾರಿ ವಿಯಟ್ನಾಮ್ಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಅಂದುಕೊಂಡಿದ್ದ ಸಂಯುಕ್ತಾ ಹೊರನಾಡು ಅವರಿಗೆ ಕರೊನಾ ದೊಡ್ಡ ಶಾಕ್ ನೀಡಿದೆ. ಫ್ಯಾಮಿಲಿಯೊಂದಿಗೆ ಅಲ್ಲದೆ ಸೋಲೋ ಟ್ರಿಪ್ ಕೂಡಾ ಇಷ್ಟಪಡುವ ಅವರು, ಕಳೆದ ಬಾರಿ ಆಗಸ್ಟ್ ನಲ್ಲಿ ಸ್ಪೇನ್​ಗೆ ಹೋಗಿದ್ದರಂತೆ. ಇತ್ತೀಚೆಗೆ ಶ್ರೀಲಂಕಾಗೆ ತೆರಳಿ, ಅಲ್ಲಿ ಪ್ರಾಣಿಗಳ ಅಧ್ಯಯನ ಮಾಡಿದ್ದರು.

    ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಇರುವ ಸಂಯುಕ್ತಾಗೆ ಹೋದಲ್ಲೆಲ್ಲಾ ವರ್ಕ್​ಶಾಪ್ ಮಾಡುವುದು ರೂಢಿ. ಇನ್ನು ಪ್ರವಾಸ ಹೋದ ಸ್ಥಳದ ಪ್ರಕೃತಿ ಸೌಂದರ್ಯ, ಆಹಾರ, ಕಲೆ ಪ್ರತಿಯೊಂದನ್ನೂ ಎಂಜಾಯ್ ಮಾಡುತ್ತಾರೆ. ಯಾವಾಗಲೂ ಒಂಟಿಯಾಗಿ ಇರಲು ಇಷ್ಟ ಪಡುವ ಸಂಯುಕ್ತಾ ತಾವಾಯ್ತು, ನಮ್ಮ ಪ್ರಾಣಿಗಳಾಯ್ತು ಎಂದೇ ಸಮಯ ಕಳೆಯುತ್ತಾರೆ. ಎಲ್ಲೇ ಹೋದರೂ ಹೊಸದನ್ನು ಕಲಿಯುತ್ತಾರೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಪ್ರವಾಸದ ಬಗ್ಗೆ ಯೋಚಿಸದ ಸಂಯುಕ್ತಾ, ‘ನಮ್ಮಲ್ಲೇ ಸಾಕಷ್ಟು ಸ್ಥಳಗಳಿವೆ. ಅಲ್ಲೇ ಹೋಗಿ ಬರುತ್ತೇನೆ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts