More

    ಸ್ವಯಂಪ್ರೇರಿತ ಲಾಕ್‌ನಿಂದ ಹಿಂದೆ ಸರಿದ ವರ್ತಕರು ; ಆರ್ಥಿಕ ಬಿಕ್ಕಟ್ಟಿಗೆ ನಲುಗಿದ ತಿಪಟೂರಿನ ವ್ಯಾಪಾರಿಗಳು

    ತಿಪಟೂರು: ಕರೊನಾ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ವರ್ತಕರು, ತಾವೇ ಘೋಷಿಸಿದ್ದ ಸ್ವಯಂ ಪ್ರೇರಿತ ಲಾಕ್‌ಡೌನ್‌ನಿಂದ ಹಿಂದೆ ಸರಿದಿದ್ದಾರೆ.

    ನಗರದ ದಿನಸಿ ವರ್ತಕರ ಸಂಘ, ಸಾಮಾಜಿಕ ಕಳಕಳಿಯಿಂದ ಕರೊನಾ ಸೋಂಕು ವಿರುದ್ಧ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸುವ ಅಂಗವಾಗಿ ಜು.13ರಿಂದ ಆಗಸ್ಟ್ 1ರವರೆಗೆ ವ್ಯಾಪಾರ ವಹಿವಾಟಿನ ಸಮಯವನ್ನು ಅರ್ಧ ದಿನಕ್ಕೆ ಸೀಮಿತಗೊಳಿಸಿ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಅಂಗಡಿ, ಮುಂಗಟ್ಟು ತೆರೆಯಲು ತೀರ್ಮಾನಿಸಿ ಸಾರ್ವಜನಿಕವಾಗಿ ಪ್ರಚಾರ ಮಾಡಿತ್ತು. ಆದರೆ, ಕಳೆದೆರಡು ದಿನಗಳಿಂದ ಕೆಲವು ಅಂಗಡಿಗಳು ಯಥಾ ಪ್ರಕಾರ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೂ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಕಾರಣ ಕೇಳಿದರೆ, ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೂ 75 ದಿನಗಳ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟವಾಗಿದೆ.

    ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲಾಗುತ್ತಿಲ್ಲ. ಪುನಃ ಲಾಕ್‌ಡೌನ್ ಮಾಡಿ ಎಂದರೆ ಹೇಗೆ ಸಾಧ್ಯ, ನಮ್ಮ ಕಷ್ಟ ಕೇಳುವವರು ಯಾರು ಎಂಬುದು ಕೆಲವರ ಪ್ರಶ್ನೆ. ಸಂಘದ ತೀರ್ಮಾನಕ್ಕೆ ವಿರುದ್ಧವಾಗಿ ಕೆಲವರು ಅಂಗಡಿ ತೆರೆದು ವ್ಯಾಪಾರ ಮಾಡಿದ್ದಾರೆ, ಇದರಿಂದಾಗಿ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಿಂದ ಲಾಕ್‌ಡೌನ್‌ನಿಂದ ಹಿಂದೆ ಸರಿಯಬೇಕಾಯಿತು ಎಂದು ಕೆಲವರೆನ್ನುತ್ತಾರೆ. ಇನ್ನೊಂದೆಡೆ ವ್ಯಾಪಾರಿಗಳಲ್ಲಿ ಸಮನ್ವಯತೆ ಕೊರತೆ ಕಂಡು ಬಂದಿದೆ ಎನ್ನಲಾಗುತ್ತಿದೆ.

    ಲಾಕ್‌ಡೌನ್ ವೇಳೆ ಲಾರಿ ಲೋಡ್‌ನಲ್ಲಿ ಬಂದಿದ್ದ ಸರಕನ್ನು ಇಳಿಸಿಕೊಳ್ಳುವ ಸಲುವಾಗಿ ಅಂಗಡಿ ತೆರೆದಿದ್ದೆವು, ಈ ಸಮಯದಲ್ಲಿ ಗಿರಾಕಿ ಬಂದು ಸಾಮಗ್ರಿ ಕೇಳಿದಾಗ ನಿರಾಕರಿಸಲು ಸಾಧ್ಯವಾಗದೇ ವ್ಯಾಪಾರ ಮಾಡಬೇಕಾಯಿತು. ಇದನ್ನೇ ದೊಡ್ಡ ತಪ್ಪು ಎಂದು ಪರಿಗಣಿಸಿದ ಕೆಲವರು ಸಂಘದ ತೀರ್ಮಾನದ ವಿರುದ್ಧ ಅಂಗಡಿ ತೆರೆಯಲು ಪ್ರಾರಂಭಿಸಿದ್ದಾರೆ.
    ಹೆಸರೇಳಲಿಚ್ಚಿಸದ ದಿನಸಿ ವರ್ತಕ, ಸಂತೇಪೇಟೆ, ತಿಪಟೂರು

    ಎಲ್ಲ ವರ್ತಕರು ಒಪ್ಪಿದ ನಂತರವೇ ಅರ್ಧ ದಿನ ವ್ಯಾಪಾರ ಮಾಡಲು ತೀರ್ಮಾನಿಸಲಾಗಿತ್ತು. ಆದರೆ 2 ದಿನಗಳಿಂದ ಸಂಘದ ತೀರ್ಮಾನಕ್ಕೆ ವಿರುದ್ಧವಾಗಿ ರಾತ್ರಿ 8 ರವರೆಗೂ ವ್ಯಾಪಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ.
    ಹರೀಶ್,ತಿಪಟೂರು ದಿನಸಿ ವ್ಯಾಪಾರಿಗಳ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts