More

    ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಣ ಇಲಾಖೆ ಸಜ್ಜು

    ನಾಲ್ಕೂ ತಾಲೂಕುಗಳಲ್ಲಿ ಪರಿಶೀಲನಾ ಸಭೆ

    ಖಾಸಗಿ ಶಾಲೆಗಳಿಗೆ ನೋಟಿಸ್


    ಸರ್ಕಾರದ ಸುತ್ತೋಲೆಯಂತೆ ಮೇ 29 ರಿಂದ ಜಿಲ್ಲಾದ್ಯಂತ ಪ್ರಸಕ್ತ ಸಾಲಿನ ಶಾಲೆಗಳು ಪುನಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜುಗೊಳ್ಳುತ್ತಿದೆ.
    ಸಾಂಕೇತಿಕವಾಗಿ 29ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು, 30 ರಿಂದ ಅಧಿಕೃತವಾಗಿ ಶಾಲಾ ಚಟುವಟಿಕೆಗಳು ಆರಂಭಗೊಳ್ಳಲಿವೆ.
    ತಳಿರು ತೋರಣಗಳ ಸಿಂಗಾರ: ಪ್ರತಿ ವರ್ಷದಂತೆ ಈ ಬಾರಿಯೂ ಶಾಲಾ ಆರಂಭವನ್ನು ಉತ್ಸವದ ರೀತಿ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ. ಶಾಲೆ ಪುನಾರಂಭದಂದು ಶಾಲೆಯ ಬಾಗಿಲುಗಳಿಗೆ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸುವುದು, ರಂಗೋಲಿ ಚಿತ್ತಾರದೊಂದಿಗೆ ಹಬ್ಬದ ಕಳೆ ನೀಡಲು ಶಿಕ್ಷಕ ವರ್ಗ ಸಿದ್ದತೆ ನಡೆಸಿದೆ. ಬಿಸಿಯೂಟದೊಂದಿಗೆ ಅಂದಿನ ದಿನ ಸಿಹಿಯೂಟ ವಿತರಿಸಲಾಗುವುದು, ಆಯಾ ಗ್ರಾಮದ ಮುಖಂಡರು, ವಿಶೇಷ ಗಣ್ಯರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಮಕ್ಕಳ ಸ್ವಾಗತ ಕಾರ್ಯಕ್ರಮಕ್ಕೆ ಕಳೆಕಟ್ಟಲು ಇಲಾಖೆ ಸಜ್ಜಾಗಿದೆ.
    ಶೇ.70 ಪಠ್ಯಪುಸ್ತಕರ ಪೂರೈಕೆ: ಜಿಲ್ಲೆಯ ನಾಲ್ಕೂ ತಾಲೂಕಿನಲ್ಲಿ ಈಗಾಗಲೇ ಶೇ.70 ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಶಾಲಾ ಆರಂಭೋತ್ಸವದಂತೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿತರಿಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಅದೇ ರೀತಿ ಎಲ್ಲ ಶಾಲೆಗಳಿಗೂ ಪೂರ್ಣಪ್ರಮಾಣದಲ್ಲಿ ಈಗಾಗಲೇ ಸಮವಸ ಸರಬರಾಜಿದ್ದು, ಎರಡು ಜೋಡಿಯ ಸಮವಸಗಳ ವಿತರಣೆ ನಡೆಯಲಿದೆ. ಜೂನ್ ಪೂರ್ಣ ತಿಂಗಳು ಪಠ್ಯಪುಸ್ತಕ ಹಾಗೂ ಸಮವಸ ವಿತರಣೆ ನಡೆಯಲಿದೆ. ವಿದ್ಯಾರ್ಥಿಗಳ ಹಾಜರಾಗಿ ಆಧಾರದ ಮೇಲೆ ವಿತರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಖಾಸಗಿ ಶಾಲೆಗಳಿಗೆ ನೋಟಿಸ್! ಜಿಲ್ಲೆಯಲ್ಲಿ ಈಗಾಗಲೇ ಹಲವು ಖಾಸಗಿ ಶಾಲೆಗಳು ಪ್ರಸಕ್ತ ಸಾಲಿನ ತರಗತಿಗಳನ್ನು ಆರಂಭಿಸಿವೆ. ಮಕ್ಕಳ ಬೇಸಿಗೆ ರಜೆಗೆ ಕತ್ತರಿ ಹಾಕಿ ಸರ್ಕಾರದ ಸುತ್ತೋಲೆಯನ್ನು ಪರಿಗಣಿಸದೆ ಶಾಲೆಗಳನ್ನು ಅವಧಿಗೂ ಮುನ್ನವೇ ಆರಂಭಿಸಿವೆ ಎನ್ನಲಾಗಿದ್ದು, ಈ ಬಗ್ಗೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಿ ಅಂಥ ಶಾಲೆಗಳಿಗೆ ತಕ್ಷಣ ನೋಟಿಸ್ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ರವಾನಿಸಿದ್ದಾರೆ.
    ದಾಖಲಾತಿ ಪೈಪೋಟಿ: ಖಾಸಗಿ ಶಾಲೆಗಳು ಜಿದ್ದಿಗೆ ಬಿದ್ದಂತೆ ಅವಧಿಗೆ ಮುನ್ನವೇ ಶಾಲೆಗಳನ್ನು ಆರಂಭಿಸಿವೆ. ಈಗಾಗಲೇ ತರಗತಿ ಆರಂಭಿಸಿರುವ ಕೆಲವು ಶಾಲೆಗಳು ಪಾಲಕರ ಮೇಲೆ ಒತ್ತಡ ಹೇರುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಶಾಲೆಗಳ ಆರಂಭ ತಡವಾದರೆ ಎಲ್ಲಿ ಪಾಲಕರು ಬೇರೆ ಇನ್ಯಾವುದಾದರೂ ಶಾಲೆಗಳಿಗೆ ತಮ್ಮ ಮಕ್ಕಳನ್ನು ಅಡ್ಮಿಷನ್ ಮಾಡಿಬಿಡುತ್ತಾರೋ ಎಂಬ ಆತಂಕದಲ್ಲಿ ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದೊಂದ ರೀತಿಯಲ್ಲಿ ಪಾಲಕರ ಮೇಲೆ ಒತ್ತಡ ಹೇರುವ ತಂತ್ರವಾಗಿದೆ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
    ಮಿಂಚಿನ ಸಂಚಾರ: ಶಿಕ್ಷಣ ಇಲಾಖೆ ಉಪನಿರ್ದೇಶಕರು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ ಸೇರಿ ಇನ್ನಿತರ ಅಧಿಕಾರಿಗಳ ತಂಡ, ಆಯಾ ತಾಲೂಕಿನ ಸಂಬಂಧಪಟ್ಟ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಶಾಲೆಯ ಪುನಾರಂಭೋತ್ಸವ ಸೇರಿ ಪಠ್ಯಪುಸ್ತಕ, ಸಮವಸ ಸರಬರಾಜು, ಶಾಲೆಯಲ್ಲಿ ಮೂಲಸೌಕರ್ಯ ಪರಿಶೀಲನೆ ಸೇರಿ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ಕೆಲಸ ಆರಂಭವಾಗಿದೆ.
    ದಾಖಲಾತಿ ಆಂದೋಲನ: ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಂದೋಲನಕ್ಕೆ ಇಲಾಖೆ ಮುಂದಾಗಿದೆ, ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಶಾಲಾ ಶಿಕ್ಷಕ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಲಿದ್ದಾರೆ. ಕರಪತ್ರ ವಿತರಣೆ, ಜಾಗೃತಿ ಜಾಥಾದಂಥ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳು ಇನ್ನಿತರ ಶಾಲೆಗಳಿಂದ ವರ್ಗಾವಣೆ ಪತ್ರ ತರಬೇಕು, ಶಾಲಾ ಶುಲ್ಕ ಮತ್ತಿತರ ಪ್ರಕ್ರಿಯೆ ಮುಗಿಸಬೇಕು ಈ ಹಿನ್ನೆಲೆಯಲ್ಲಿ ಆಗಸ್ಟ್ ಬಳಿಕ ಜಿಲ್ಲೆಯಲ್ಲಿ ಎಷ್ಟು ಪಠ್ಯಪುಸ್ತಕ ಹಾಗೂ ಸಮವಸ ಹಂಚಿಕೆಯಾಗಿದೆ ಎಂಬುದು ನಿಖರವಾಗಿ ತಿಳಿಯಲಿದೆ ಎಂದು ಇಲಾಖೆ ತಿಳಿಸಿದೆ.

    ಸರ್ಕಾರದ ಸುತ್ತೋಲೆಯಂತೆ ಮೇ 29ರಿಂದ ಜಿಲ್ಲೆಯಲ್ಲಿ ಶಾಲೆಗಳ ಪುನಾರಂಭಕ್ಕೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಶೇ.70 ಪಠ್ಯಪುಸ್ತಕರ ಸರಬರಾಜಾಗಿದೆ, ಶೇ.100 ಸಮವಸ ಪೂರೈಕೆಯಾಗಿದೆ. ಶಾಲೆಯ ಪುನಾರಂಭದ ದಿನದಿಂದಲೇ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಇನ್ನೂ ಸರ್ಕಾರದ ಆದೇಶ ಉಲ್ಲಂಸಿ ಆರಂಭಿಸಿರುವ ಖಾಸಗಿ ಶಾಲೆಗಳಿಗೆ ನೋಟಿಸ್ ನೀಡುವಂತೆ ಬಿಇಒಗಳಿಗೆ ಸೂಚನೆ ನೀಡಲಾಗಿದೆ.

    ಕೃಷ್ಣಮೂರ್ತಿ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts