More

    ಬೋಟ್‌ಗಳಿಗೆ ದೇಶಿ ನಿರ್ಮಿತ ಯಂತ್ರ

    ಬೈಂದೂರು: ರಾಜ್ಯದಲ್ಲಿ ಮೀನುಗಾರಿಕಾ ಬೋಟ್‌ಗಳಿಗೆ ಈಗ ಬಳಸಲಾಗುತ್ತಿರುವ ಚೀನಾ ನಿರ್ಮಿತ ಯಂತ್ರಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯ ಪರಿಕಲ್ಪನೆಯಂತೆ ದೇಶಿ ನಿರ್ಮಿತ ಯಂತ್ರಗಳನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಸೋಮವಾರ ಉದ್ಘಾಟನೆಗೊಳ್ಳಲಿರುವ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದ ನಾವುಂದ ಶಾಖೆಗೆ ಭಾನುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ರಾಜ್ಯದ ಕರಾವಳಿಯಲ್ಲಿ ಒಟ್ಟು 22,500 ಯಾಂತ್ರಿಕ ಮೀನುಗಾರಿಕಾ ಬೋಟ್‌ಗಳು ಕಾರ್ಯಾಚರಿಸುತ್ತಿವೆ. ಅವುಗಳಲ್ಲಿ 7,500 ಸಾಂಪ್ರದಾಯಿಕ ನಾಡದೋಣಿಗಳು 9 ಅಶ್ವಶಕ್ತಿಯ ಯಂತ್ರ ಅಳವಡಿಸಿಕೊಂಡಿವೆ. ದೊಡ್ಡ ಬೋಟ್‌ಗಳು 350 ಅಶ್ವಶಕ್ತಿವರೆಗಿನ ಯಂತ್ರಗಳನ್ನು ಹೊಂದಿವೆ. ಇವುಗಳಲ್ಲಿ ಶೇ.90ರಷ್ಟು ಚೀನಾ ನಿರ್ಮಿತವಾದುವುಗಳು. ಉಳಿದವು ಜಪಾನ್ ಮತ್ತಿತರ ದೇಶಗಳವು. ಮೀನುಗಾರರು ದೇಶೀಯ ಉತ್ಪನ್ನಗಳನ್ನು ಬಳಸಲು ಒಲವು ಹೊಂದಿದ್ದಾರೆ. ಬದಲಾವಣೆಗೆ ಚಾಲನೆ ನೀಡುವ ಗುರಿಯೊಂದಿಗೆ ಈಚೆಗೆ ವಿಕಾಸ ಸೌಧದಲ್ಲಿ ಮಹೇಂದ್ರ, ಕಿರ್ಲೋಸ್ಕರ್ ಮತ್ತಿತರ ಕಂಪನಿಗಳ ತಂತ್ರಜ್ಞರ ಸಭೆ ಕರೆದು ಚರ್ಚಿಸಲಾಗಿದೆ. ಗುಣಮಟ್ಟದ, ಸ್ಪರ್ಧಾತ್ಮಕ ಬೆಲೆಯ ಯಂತ್ರಗಳನ್ನು ಸಿದ್ಧಪಡಿಸಲು ಈ ಕಂಪನಿಗಳು ಒಪ್ಪಿವೆ. ಕೊಚ್ಚಿನ್ ಶಿಪ್‌ಯಾರ್ಡ್ ಅಧಿಕಾರಿಗಳಿಂದಲೂ ಪೂರಕ ಸ್ಪಂದನೆ ಸಿಕ್ಕಿದೆ. ಬೋಟ್‌ಗಳಲ್ಲಿ ಸೀಮೆ ಎಣ್ಣೆ ಬಳಕೆ ನಿಲ್ಲಿಸುವ ದೃಷ್ಟಿಯಿಂದ ಅನಿಲ ಆಧರಿತ ಯಂತ್ರಗಳನ್ನು ಉತ್ಪಾದಿಸಬೇಕು ಎಂದು ತಿಳಿಸಲಾಗಿದೆ. ಕಂಪನಿಗಳು ಮೂರು ತಿಂಗಳೊಳಗೆ ಮಾದರಿ ಯಂತ್ರಗಳನ್ನು ಸಿದ್ಧಪಡಿಸಿ, ಪ್ರದರ್ಶನ ಹಾಗೂ ಪ್ರಾತ್ಕಕ್ಷಿಕೆ ಏರ್ಪಡಿಸುವ ಭರವಸೆ ನೀಡಿವೆ ಎಂದು ಸಚಿವರು ತಿಳಿಸಿದರು.

    ಸಂಘದ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸದಸ್ಯ ಪುಷ್ಪರಾಜ ಶೆಟ್ಟಿ, ಮಾಜಿ ಸದಸ್ಯ ಸದಾಶಿವ ಪಡುವರಿ, ಸಂಘದ ಅಧ್ಯಕ್ಷ ಮೋಹನಚಂದ್ರ ಉಪ್ಪುಂದ, ಉಪಾಧ್ಯಕ್ಷ ಮಂಜುನಾಥ ಜಿ. ಖಾರ್ವಿ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ, ಶಾಖಾಧಿಕಾರಿ ಶ್ರೀನಿವಾಸ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts