More

    ಹಾಲು ಕೊಡುವ ಹಸುವಿಗೆ ಸಾಲ ; ಸಾಲಕ್ಕೆ ಮುಗಿಬಿದ್ದ ರೈತರು

    ತುಮಕೂರು: ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಂಘಗಳಲ್ಲಿ ಈಗ ಕೇಂದ್ರ ಸರ್ಕಾರ ನೀಡುತ್ತಿರುವ ಸಾಲದ್ದೇ ಸದ್ದಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಜಾನುವಾರುಗಳ ಮೇವಿಗಾಗಿ ನೀಡುವ ಈ ಕಾರ್ಯಕ್ರಮದ ಬಗ್ಗೆ ಊಹಾಪೋಹವೇ ಹೆಚ್ಚಾಗಿದ್ದು, ಸಾಲಕ್ಕಾಗಿ ರೈತರು ಮುಗಿಬಿದ್ದಿದ್ದಾರೆ.

    ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಸಂಘಗಳಿದ್ದು 77 ಸಾವಿರ ಹಾಲು ಉತ್ಪಾದಕರಿದ್ದಾರೆ. ಪ್ರಥಮ ಹಂತದಲ್ಲಿ ಷೇರು ಹಾಗೂ ಪ್ರತಿನಿತ್ಯ ಹಾಲು ಉತ್ಪಾದಿಸುವವರಿಗೆ ಮಾತ್ರ ಒಂದು ಹಸುಗೆ ಎರಡು ತಿಂಗಳ ಮೇವಿಗೆ ಅಗತ್ಯವಿರುವ 7 ಸಾವಿರ ರೂ. ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ನೀಡಲು ಕೇಂದ್ರ ಸರ್ಕಾರ ಕಾರ್ಯಕ್ರಮ ರೂಪಿಸಿದೆ.

    ಕಾರ್ಯಕ್ರಮದ ಬಗ್ಗೆ ಅರಿವಿನ ಕೊರತೆಯಿಂದ ಡೇರಿಗಳಲ್ಲಿ ಒಬ್ಬ ರೈತನಿಗೆ 1.60 ಲಕ್ಷ ರೂ., ಸಾಲ ನೀಡಲಾಗುತ್ತಿದೆ ಎಂಬ ವದಂತಿ ಹಬ್ಬಿದ್ದು ರೈತರು ಸಾಲ ಪಡೆಯಲು ಮುಗಿಬೀಳುವಂತೆ ಮಾಡಿದೆ. ಸಾಲಕ್ಕೆ ಅಗತ್ಯದಾಖಲೆ ಪಡೆಯಲು ಮುಂದಾಗಿರುವ ರೈತರಿಂದ ಹಣ ವಸೂಲಿ ಕೆಲಸವೂ ಕೆಲವು ಕಡೆಗಳಲ್ಲಿ ನಡೆಯುತ್ತಿದ್ದು ರೈತರಿಗೆ ಅರಿವು ಮೂಡಿಸಬೇಕಿದೆ.

    ತುಮುಲ್ ವತಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಕೊಡಲಾಗುತ್ತಿದ್ದು, ಬ್ಯಾಂಕ್‌ಗಳು ಒಂದು ಹಸುಗೆ 7 ಸಾವಿರ ರೂ. ಸಾಲವನ್ನು ಶೇ.0 ಬಡ್ಡಿ ದರದಲ್ಲಿ ವರ್ಷದ ಅವಧಿಗೆ ನೀಡುತ್ತಿವೆ, ರೈತ ಎಷ್ಟು ರಾಸು ಇಟ್ಟುಕೊಂಡಿದ್ದಾನೆಯೋ ಅಷ್ಟು ರಾಸುಗಳಿಗೂ ಸಾಲ ಲಭ್ಯವಾಗಲಿದ್ದು, ವರ್ಷದೊಳಗೆ ಅದನ್ನು ಮರುಪಾವತಿ ಮಾಡಿದರಷ್ಟೇ ಶೇ.0 ಬಡ್ಡಿ. ಇಲ್ಲದಿದ್ದರೆ ಬಡ್ಡಿ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶವಿದೆ.

    ಈ ಬಗ್ಗೆ ಸ್ಪಷ್ಟ ಅರಿವಿನ ಕೊರತೆಯಲ್ಲಿ ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರೂ ಜಿಲ್ಲೆಯ ಬಹುತೇಕ ಬ್ಯಾಂಕ್‌ಗಳು ಅರ್ಜಿ ಪಡೆಯುತ್ತಿಲ್ಲ, ಕರೊನಾ ಸಂಕಷ್ಟದಲ್ಲಿ ಹಸು, ಎಮ್ಮೆಗಳನ್ನು ಸಾಕಿರುವ ರೈತರು ಸಾಲದ ಆಸೆಯಿಂದ ಪ್ರತಿದಿನ ನಾಡ ಕಚೇರಿ, ಬ್ಯಾಂಕ್, ಡೇರಿಗೆ ಅಲೆದಾಟ ಆರಂಭಿಸಿದ್ದಾರೆ.

    ಹಾಲು ಕೊಡುವ ರಾಸುಗಳಿಗಷ್ಟೇ ಸಾಲ!: ಕೇಂದ್ರ ಸರ್ಕಾರದ ಈ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದಲ್ಲಿ ಷೇರು ಹೊಂದಿರುವ ಹಾಲು ಉತ್ಪಾದಕರಿಗೆ ಅಷ್ಟೇ ಪ್ರಯೋಜನವಾಗಲಿದೆ. ಆದರೆ, ಸಂಘದಲ್ಲಿ ಸದಸ್ಯರಲ್ಲದ, ಹಾಲು ಕರೆಯದ ಹಸುಗಳನ್ನು ಸಾಕಲು ಹಣ ಖರ್ಚು ಆಗುವುದನ್ನು ಕಡೆಗಣಿಸಿರುವುದು ಅವೈಜ್ಞಾನಿಕವಾಗಿದೆ. ವಾಸ್ತವವಾಗಿ ಹಾಲು ಕೊಡದ ಹಾಗೂ ವ್ಯವಸಾಯಕ್ಕಾಗಿಯೇ ಇರುವ ರಾಸುಗಳನ್ನು ಸಾಕಲು ರೈತರಿಗೆ ಕಷ್ಟವಾಗಿದೆ. ಸಾಕಷ್ಟು ಹಾಲು ಉತ್ಪಾದಕರು ಡೇರಿಗಳಿಗೆ ಹಾಲು ಮಾರಾಟ ಮಾಡುತ್ತಿಲ್ಲ, ಮನೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ, ಮತ್ತಷ್ಟು ಜನರು ಖಾಸಗಿ ಡೇರಿಗಳಲ್ಲಿಯೂ ಮಾರಾಟ ಮಾಡುತ್ತಿದ್ದಾರೆ. ಹಾಲು ಎಲ್ಲಿಗೆ ಮಾರಾಟ ಮಾಡಿದರೂ ಉತ್ಪಾದನೆಗೆ ಅವರೂ ಖರ್ಚು ಮಾಡುತ್ತಾರೆ, ಅವರಿಗೂ ಸಂಕಷ್ಟವಿದೆ, ಹಾಗಾಗಿ, ಜಾನುವಾರು ಇರುವ ಎಲ್ಲರಿಗೂ ಸಾಲ ನೀಡಬೇಕಿದೆ, ಹಾಲು ಕೊಡದ ಜಾನುವಾರುಗಳ ಬಗ್ಗೆಯೂ ಚಿಂತಿಸಬೇಕು.

    ಹಾಲು ಉತ್ಪಾದಕರ ಹಸುಗಳಿಗೆ ಸಾಲ ನೀಡುವ ಬಗ್ಗೆ ಲೀಡ್ ಬ್ಯಾಂಕ್ ತುಮುಲ್‌ಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ನಮ್ಮ ಡೇರಿಗಳಲ್ಲಿ ದಾಖಲೆಗಳನ್ನು ನೀಡಲಾಗುತ್ತಿದೆ. ನಮಗಿರುವ ಪ್ರಾಥಮಿಕ ಮಾಹಿತಿಯಂತೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ರಾಸುಗಳ 2 ತಿಂಗಳ ಮೇವಿಗೆ 7 ಸಾವಿರ ರೂ., ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹಬ್ಬಿರುವ ವದಂತಿಯಂತೆ 1.60 ಲಕ್ಷ ರೂ., ನೀಡುವ ಬಗ್ಗೆ ಮಾಹಿತಿ ಇಲ್ಲ.
    ಸಿ.ವಿ.ಮಹಾಲಿಂಗಯ್ಯ ಅಧ್ಯಕ್ಷ, ತುಮುಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts