More

    ರೈತರಿಗೆ ಲೋಡ್​ಶೆಡ್ಡಿಂಗ್ ಕಿರಿಕಿರಿ

    ಉಪ್ಪಿನಬೆಟಗೇರಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲಾದ್ಯಂತ ಬಹುತೇಕ ಬರ ಆವರಿಸಿದೆ. ಬಿತ್ತಿದ ಬೀಜಗಳಲ್ಲಿ ಅರ್ಧದಷ್ಟು ಹಾಳಾಗಿ ಉಳಿದರ್ಧ ಫಸಲು ಉಳಿಸಲು ರೈತರು ಬೋರ್​ವೆಲ್​ಗಳ ಮೊರೆ ಹೋಗಿದ್ದಾರೆ. ಬೋರ್​ವೆಲ್​ಗಳಿಂದ ನೀರು ಹರಿಸಲು ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಂತಾಗಿದೆ.

    ಲೋಡ್​ಶೆಡ್ಡಿಂಗ್​ನಿಂದ ಕೃಷಿ ಪಂಪ್​ಸೆಟ್​ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆಗಸ್ಟ್ ತಿಂಗಳಲ್ಲಿ ಕಲ್ಲೂರ, ಕಬ್ಬೇನೂರ, ಹನುಮನಕೊಪ್ಪ, ಉಪ್ಪಿನಬೆಟಗೇರಿ, ಕುರುಬಗಟ್ಟಿ, ಹನುಮನಾಳ ಸೇರಿ ಸುತ್ತಲಿನ ಗ್ರಾಮಗಳ ರೈತರು ಉಪ್ಪಿನಬೆಟಗೇರಿಯ ಗ್ರಿಡ್​ಗೆ ತೆರಳಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಮನವೊಲಿಸಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಅದೇ ರೀತಿಯಲ್ಲಿ ಮತ್ತೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ ಎಂದು ರೈತರು ಹಾಗೂ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ಉಚಿತ ವಿದ್ಯುತ್ ಆಮಿಷ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿರುದ್ಧ ದಿನೇದಿನೆ ಆಕ್ರೋಶ ಭುಗಿಲೇಳುತ್ತಿದೆ. ಸಕಾಲಕ್ಕೆ ತ್ರೀ ಫೇಸ್ ವಿದ್ಯುತ್ ಪೂರೈಸದ ಅಧಿಕಾರಿಗಳ ವಿರುದ್ಧ ರೈತರು ಹರಿಹಾಯ್ದರು. ಕಳೆದ ಹಲವು ದಿನಗಳಿಂದ ರೈತರ ಪಂಪ್​ಸೆಟ್ ಹಾಗೂ ಕೈಮಗ್ಗದ ಉದ್ದಿಮೆದಾರರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬದಲಿಗೆ ಅನ್ಯ ಉದ್ಯಮ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಮಾರಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಸಂಬಂಧಿಸಿದ ಹೆಸ್ಕಾಂನ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ಪತ್ರಿಕೆ ಎದುರು ಅಳಲು ತೋಡಿಕೊಂಡರು.

    ಪಂಪ್​ಸೆಟ್​ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದ ಹಿನ್ನೆಲೆಯಲ್ಲಿ ತೋಟಗಾರಿಕೆ ಹಾಗೂ ಇತರೆ ಬೆಳೆಗಳು ಒಣಗುತ್ತಿವೆ. ಜನವಸತಿ ಪ್ರದೇಶದಲ್ಲಿ ಹಗಲು ರಾತ್ರಿಯನ್ನದೆ ಗಂಟೆಗೆ ಹತ್ತಾರು ಬಾರಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ.

    ಎರಡು ದಿನಗಳ ಹಿಂದೆ ಕಾಮಗಾರಿ ಹಿನ್ನೆಲೆಯಲ್ಲಿ ಲೋಡ್​ಶೆಡ್ಡಿಂಗ್ ಮಾಡಲಾಗಿತ್ತು. ರೈತರ ಪಂಪ್​ಸೆಟ್​ಗಳಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಹಾಗೂ ರಾತ್ರಿ 11 ರಿಂದ 1 ಗಂಟೆವರೆಗೆ ತ್ರೀಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಲೋಡ್ ಶೆಡ್ಡಿಂಗ್ ಮಾಡುವ ಕುರಿತು ಇಲಾಖೆಗೆ ಯಾವುದೇ ಸೂಚನೆ ಬಂದಿಲ್ಲ.

    | ಯಮುನಾಕ್ಷಿ ಕಟ್ಟಿಮನಿ

    ಹೆಸ್ಕಾಂ ಉಪ ವಿಭಾಗಾಧಿಕಾರಿ, ಉಪ್ಪಿನಬೆಟಗೇರಿ

    ಕಳೆದ ಕೆಲ ದಿನಗಳಿಂದ ರಾತ್ರಿ 2 ಗಂಟೆ ಮಾತ್ರ ತ್ರೀಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಈ ಹಿಂದೆ ಜಮೀನುಗಳಿಗೆ 7 ತಾಸು ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಲೋಡ್​ಶೆಡ್ಡಿಂಗ್​ನಿಂದಾಗಿ ಕೇವಲ 2 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ನೀರಿಲ್ಲದೆ ಕಬ್ಬಿನ ಬೆಳೆ ಒಣಗುತ್ತಿದೆ. ಇನ್ನು ವಿದ್ಯುತ್ ಪೂರೈಸುವ ಸಮಯ ಕೂಡ ತಿಳಿಸಿಲ್ಲ.

    | ಮಲ್ಲಿಕಾರ್ಜುನ ಮಡಿವಾಳರ

    ಉಪ್ಪಿನಬೆಟಗೇರಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts